ನ್ಯೂಸ್

ತಂತ್ರಜ್ಞಾನ ಬಳಕೆ ಹೆಚ್ಚಲಿ; ನಗದು ವಹಿವಾಟು ತಗ್ಗಬೇಕು..

Webdesk - Ravikanth

ಡಿಜಿಟಲ್ ಪಾವತಿಯ ಹೊಸ ವೇದಿಕೆಯಾದ ‘ಇ-ರುಪಿ’ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸೋಮವಾರ ಚಾಲನೆ ನೀಡಿದ್ದಾರೆ. ಇದು, ಫಲಾನುಭವಿಗಳು ಮತ್ತು ಸೇವಾದಾತರನ್ನು ಭೌತಿಕ ಸಂಪರ್ಕವಿಲ್ಲದೆ, ಅನ್ಯಹಸ್ತಕ್ಷೇಪವಿಲ್ಲದೆ ಸಂರ್ಪಸಿ, ಹಣ ಪಾವತಿಸುವ ವಿಧಾನ. ಭಾರತ ಸರ್ಕಾರಕ್ಕಾಗಿ, ಸರ್ಕಾರದ್ದೇ ಅಂಗವಾದ ಭಾರತೀಯ ರಾಷ್ಟ್ರೀಯ ಪಾವತಿ ನಿಗಮವು ರೂಪಿಸಿದ ವ್ಯವಸ್ಥೆ ಇದಾಗಿದೆ. ಹಣಕಾಸು ಸೇವಾ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರಗಳು ಈ ಪಾವತಿ ವ್ಯವಸ್ಥೆ ಸಿದ್ಧಪಡಿಸಲು ಸಹಯೋಗ ನೀಡಿರುವುದು ವಿಶೇಷ. ‘ಇ-ರುಪಿ’ ಯುಪಿಐ ವೇದಿಕೆ ಮುಖಾಂತರ ಕಾರ್ಯನಿರ್ವಹಿಸುವ ವ್ಯವಸ್ಥೆಯಾಗಿದೆ. ‘ಆರಂಭದಲ್ಲಿ ಇದನ್ನು ಆರೋಗ್ಯ ಫಲಾನುಭವಿಗಳಿಗಾಗಿ ಬಳಸಲಾಗುವುದು. ಕರೊನಾ ಲಸಿಕೆ ಪಡೆಯಲು ಬೇರೆಯವರಿಗೆ ನೆರವಾಗಬಯಸುವವರು ‘ಇ-ರುಪಿ’ ವೋಚರ್ ಬಳಸಿ ನೀಡಬಹುದು’ಎಂದು ಪ್ರಧಾನಿ ಹೇಳಿದ್ದಾರೆ.

ಮುಂದಿನ ದಿನಗಳಲ್ಲಿ, ಸರ್ಕಾರದ ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳ ಪ್ರಯೋಜನ ಪಡೆಯಲು ಇದನ್ನು ಬಳಸಬಹುದಾಗಿದೆ ಎಂದು ಸರ್ಕಾರ ತಿಳಿಸಿದೆ. ಯುಪಿಐ ವೇದಿಕೆಯನ್ನು ಆಧರಿಸಿ ಕಾರ್ಯನಿರ್ವಹಿಸುವ ಅನೇಕ ವೇದಿಕೆಗಳು ಈಗಾಗಲೇ ಲಭ್ಯವಿದ್ದು, ಅವು ಜನಪ್ರಿಯವೂ ಆಗಿದೆ. ಜನರು ಈಗ ಹತ್ತಿಪ್ಪತ್ತು ರೂಪಾಯಿಗಳ ಸಣ್ಣ ಮೊತ್ತದಿಂದ ಹಿಡಿದು ಸಾವಿರಾರು ರೂಪಾಯಿಗಳ ವ್ಯವಹಾರಕ್ಕೂ ಇಂಥ ಯುಪಿಐ ಆಧಾರಿತ ವ್ಯವಸ್ಥೆ ಬಳಸುತ್ತಿದ್ದು, ಡಿಜಿಟಲ್ ಆರ್ಥಿಕತೆಯಲ್ಲಿ ಇವು ಮತ್ತಷ್ಟು ಚಾಲ್ತಿಗೆ ಬರುವುದು ನಿಶ್ಚಿತ. ನಗದುರಹಿತ ವ್ಯವಹಾರ ಕಡಿಮೆಯಾದಷ್ಟು ಪಾರದರ್ಶಕತೆ ಹೆಚ್ಚುತ್ತದೆ. ಅಲ್ಲದೆ, ತಂತ್ರಜ್ಞಾನದ ಮಾಹಿತಿ ಇರುವವರಿಗೆ ಡಿಜಿಟಲ್ ವ್ಯವಹಾರ ಬಹಳ ಸುಲಭ. ಸರ್ಕಾರದ ದೈನಂದಿನ ಆಡಳಿತದಲ್ಲಿ ತಂತ್ರಜ್ಞಾನದ ಬಳಕೆ ಹೆಚ್ಚಿದಷ್ಟು ಜನರಿಗೆ ಹೆಚ್ಚು ಅನುಕೂಲವಾಗುತ್ತದೆ. ಸರ್ಕಾರದ ವಿವಿಧ ಯೋಜನೆಗಳ ಸಹಾಯಧನವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸುವ ವಿಧಾನವನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದ್ದರಿಂದ, ಮಧ್ಯವರ್ತಿಗಳ ಪಾಲಾಗುತ್ತಿದ್ದ ಸಾವಿರಾರು ಕೋಟಿ ರೂ. ಉಳಿತಾಯವಾಗಿದೆ ಮತ್ತು ಜನರಿಗೂ ಸುಲಭದಲ್ಲಿ ಹಣ ಕೈಸೇರುತ್ತಿದೆ. ಇದಲ್ಲದೆ, ಜನರು ಆಡಳಿತದ ಕುರಿತು ಕುಂದುಕೊರತೆಗಳನ್ನು ಹೇಳಿಕೊಳ್ಳಲು ಸಹ ತಂತ್ರಜ್ಞಾನ ಆಧಾರಿತ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ತಂದಿರುವುದು ಉಲ್ಲೇಖಾರ್ಹ.

2008ರಲ್ಲಿ 500 ಮತ್ತು 1000 ರೂ. ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಿದ ನಂತರದಲ್ಲಿ ಕೇಂದ್ರ ಸರ್ಕಾರ ನಗದುರಹಿತ, ಡಿಜಿಟಲ್ ವ್ಯವಹಾರಕ್ಕೆ ಹೆಚ್ಚು ಆದ್ಯತೆ ನೀಡುತ್ತಿದೆ. ಎರಡು ಲಕ್ಷ ರೂ.ಗಿಂತ ಅಧಿಕ ಮೊತ್ತದ ನಗದು ವ್ಯವಹಾರಕ್ಕೆ ಅವಕಾಶ ಇಲ್ಲ ಎಂಬ ನಿಯಮ ತರಲಾಗಿದೆ. ಈಗ ಬಹುತೇಕ ಜನರ ಕೈಲಿ ಮೊಬೈಲ್ ಇರುವುದರಿಂದ ಅಂತರ್ಜಾಲ ಆಧಾರಿತ ವ್ಯವಹಾರ ನಡೆಸುವುದು ಸುಲಭ ಎಂಬುದು ಹೌದಾದರೂ, ಇದರಲ್ಲಿ ಅಪಾಯಗಳೂ ಇವೆ. ಅದರಲ್ಲೂ ಈಗ ಸೈಬರ್ ಅಪರಾಧ ವಿಪರೀತವಾಗಿ ಹೆಚ್ಚಿದ್ದು, ಸೈಬರ್ ಖದೀಮರು ಅಮಾಯಕರ ಹಣವನ್ನು ಬೇರೆ ಬೇರೆ ರೀತಿಯಲ್ಲಿ ಎಗರಿಸುವ ಪ್ರಕರಣಗಳು ದೊಡ್ಡ ಸಂಖ್ಯೆಯಲ್ಲಿ ವರದಿಯಾಗುತ್ತಿವೆ. ಹೀಗಾಗಿ ಡಿಜಿಟಲ್ ಸಾಕ್ಷರತೆ ನಿಟ್ಟಿನಲ್ಲಿ ಸಹ ಸರ್ಕಾರಗಳು ಕಾರ್ಯಕ್ರಮ ಹಮ್ಮಿಕೊಳ್ಳುವುದು ಅಗತ್ಯ. ಜನರು ಕೂಡ ಡಿಜಿಟಲ್ ವ್ಯವಹಾರದ ಸಂದರ್ಭದಲ್ಲಿ ಸುರಕ್ಷತೆಯನ್ನು ಖಾತ್ರಿಪಡಿಸಿಕೊಳ್ಳಬೇಕು.