ನ್ಯೂಸ್

ಸಂಪಾದಕೀಯ | ಇನ್ನೂ ಅವಕಾಶ ಉಂಟು: ತೆರಿಗೆ ವಂಚನೆ ಪೂರ್ಣ ಪ್ರಮಾಣದಲ್ಲಿ ನಿಂತಿಲ್ಲ..

Webdesk - Ravikanth

ತೆರಿಗೆ ವ್ಯಾಪ್ತಿಗೊಳಪಡುವವರ ಸಂಖ್ಯೆ ಹೆಚ್ಚಳ ಮತ್ತು ತೆರಿಗೆ ವಂಚನೆ ಕಡಿವಾಣ ಕ್ರಮಗಳ ಪರಿಣಾಮ ಜಿಎಸ್​ಟಿ ಆದಾಯ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವುದು ಆಶಾದಾಯಕ ಬೆಳವಣಿಗೆ. ತೆರಿಗೆ ದರಗಳಲ್ಲಿ ಯಾವುದೇ ಹೆಚ್ಚಳ ಮಾಡದ ಹೊರತಾಗಿಯೂ ಜಿಎಸ್​ಟಿ ಸಂಗ್ರಹ ಹೆಚ್ಚಳವಾಗಿರುವುದು ಗಮನಾರ್ಹ. ಸೋರಿಕೆ ಕೂಡ ಗಣನೀಯ ಪ್ರಮಾಣದಲ್ಲಿದ್ದು, ನಿಯಂತ್ರಿಸಿದರೆ ಸರ್ಕಾರದ ಬೊಕ್ಕಸಕ್ಕೆ ಇನ್ನೂ ಹೆಚ್ಚಿನ ಆದಾಯ ಜಮೆಯಾಗಲಿದೆ.

ಕಳೆದ ಆಗಸ್ಟ್ ತಿಂಗಳಿನಲ್ಲಿ 1,43 ಲಕ್ಷ ಕೋಟಿ ರೂಗಳಷ್ಟಿದ್ದ ಜಿಎಸ್​ಟಿ ಪ್ರಮಾಣ ಪ್ರಸಕ್ತ ಆಗಸ್ಟ್ ಅಂತ್ಯಕ್ಕೆ ಅಂದಾಜು 1,60 ಲಕ್ಷ ಕೋಟಿ ರೂಗಳಿಗ ಏರಿಕೆಯಾಗಲಿದೆ ಎಂದು ಆರ್ಥಿಕ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಜೂನ್ ತ್ರೖೆಮಾಸಿಕದಲ್ಲಿ ಜಿಡಿಪಿ (ಒಟ್ಟು ದೇಶೀಯ ಉತ್ಪನ್ನ) ಬೆಳವಣಿಗೆಯು ಶೇಕಡಾ 7.8 ರಷ್ಟಾಗಿದೆ. ಆದರೆ, ಇದೇ ತ್ರೖೆಮಾಸಿಕದಲ್ಲಿ ಜಿಎಸ್​ಟಿ ಆದಾಯವು ಶೇಕಡಾ 11ಕ್ಕಿಂತ ಹೆಚ್ಚಾಗಿದೆ. ಜಿಡಿಪಿ ಬೆಳವಣಿಗೆ ದರಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಜಿಎಸ್​ಟಿ ಸಂಗ್ರಹವಾಗಿದೆ.

ಸರ್ಕಾರ ತೆರಿಗೆ ವಂಚನೆ ಪ್ರಕರಣಗಳನ್ನು ತಡೆಗಟ್ಟಲು ಎಷ್ಟೇ ಬಿಗಿಯಾದ ಕ್ರಮ ಕೈಗೊಂಡರೂ ಪೂರ್ಣ ಪ್ರಮಾಣದಲ್ಲಿ ವಂಚನೆ ತಡೆಗಟ್ಟಲು ಸಾಧ್ಯವಾಗಿಲ್ಲ ಎಂಬುದನ್ನು ಯಾರೂ ಅಲ್ಲಗಳೆಯಲಾರರು.ತೆರಿಗೆ ವಂಚನೆಯಲ್ಲಿ ವರ್ತಕರಷ್ಟೇ ಪಾತ್ರ ಗ್ರಾಹಕರದ್ದೂ ಇದೆ. ಸರ್ಕಾರ ವಂಚನೆ ತಡೆಗೆ ಬಿಗಿ ನಿಲವು ತಾಳಿದರೂ ಹೇಗೆ ತೆರಿಗೆ ಉಳಿಸಬಹುದು ಎಂಬ ಬಗ್ಗೆ ಮಾರ್ಗ ಕಂಡುಕೊಳ್ಳುವವರ ಸಂಖ್ಯೆಯೂ ಕಡಿಮೆ ಇಲ್ಲ.

ತೆರಿಗೆ ವಂಚನೆ ಕೃತ್ಯಗಳು ಬೆಳಕಿಗೆ ಬಂದಾಗ ಅಪರಾಧಿಗಳಿಗೆ ಶಿಕ್ಷೆಯಾಗುವಂತಾದರೆ ವಂಚನೆ ಮಾಡುವವರು ಸ್ವಲ್ಪ ಯೋಚನೆ ಮಾಡುತ್ತಾರೆ. ಆದರೆ ವಂಚನೆ ಮಾಡಿ ಸಿಕ್ಕು ಬಿದ್ದರೂ ಪಾರಾಗಬಹುದು ಎನ್ನುವ ನಂಬಿಕೆ ಬಂದರೆ ಸರ್ಕಾರ ಎಷ್ಟೇ ಕಾಯ್ದೆ ರೂಪಿಸಿದರೂ ಫಲ ನೀಡುವುದಿಲ್ಲ.

ಮಧ್ಯಮ ವರ್ಗದ ಜೀವನಮಟ್ಟದಲ್ಲಿ ಗಣನೀಯ ಸುಧಾರಣೆಯಾಗಿದೆ ಎಂದು ಒಂದು ವರದಿ ಅಭಿಪ್ರಾಯಪಟ್ಟಿದೆ. ಜೀವನಮಟ್ಟದಲ್ಲಿ ಸುಧಾರಣೆ ಕಾಣುತ್ತಿದ್ದಂತೆ ಸಹಜವಾಗಿ ಆರ್ಥಿಕ ಚಟುವಟಿಕೆಗಳೂ ಹೆಚ್ಚುತ್ತವೆ. ತೆರಿಗೆ ಪಾವತಿ ಮಾಡುವ ವಿಚಾರದಲ್ಲಿ ಸರ್ಕಾರಕ್ಕೆ ಮೋಸ ಮಾಡಬಾರದು ಎನ್ನುವ ವರ್ಗದೊಂದಿಗೆ ತೆರಿಗೆಯನ್ನು ಹೇಗೆ ಉಳಿಸಬಹುದು ಎನ್ನುವ ವರ್ಗವೂ ಇರುತ್ತದೆ. ಇಂತಹ ವರ್ಗ ದೊಡ್ಡ ಪ್ರಮಾಣದಲ್ಲಿಯೇ ಇದೆ. ಈ ವರ್ಗವನ್ನೂ ತೆರಿಗೆ ವ್ಯಾಪ್ತಿಗೆ ತರುವ ಪ್ರಯತ್ನಗಳು ನಡೆಯಬೇಕು.

ನಾಗರಿಕರು, ಗ್ರಾಹಕರು ಮತ್ತು ಸರ್ಕಾರಗಳಿಗೆ ಜಿಎಸ್​ಟಿಯಿಂದ ಸಾಕಷ್ಟು ಪ್ರಯೋಜನವಾಗಿದೆ. ಇದರ ಆದಾಯವು ಪ್ರತಿ ತಿಂಗಳು ಹೆಚ್ಚುತ್ತಿದೆ. ಜಿಎಸ್​ಟಿ ಅಡಿಯಲ್ಲಿ ತೆರಿಗೆ ದರಗಳು ಕಡಿಮೆಯಾಗುವುದನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಮತ್ತು ರಾಜ್ಯಗಳು ಒಗ್ಗೂಡಿ ಕಾರ್ಯನಿರ್ವಹಿಸುತ್ತಿವೆ ಎಂದು ಹಣಕಾಸು ಇಲಾಖೆ ಅಧಿದಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ತೆರಿಗೆ ವಂಚನೆ ಪ್ರಕರಣಗಳಲ್ಲಿ ವರ್ತಕರು ಮತ್ತು ಗ್ರಾಹಕರಷ್ಟೇ ಅಧಿಕಾರಿ ವರ್ಗದ ಪಾತ್ರವೂ ಇರುವ ಸಂಶಯಗಳು ಬಲವಾಗಿವೆ. ಅಧಿಕಾರಿ ವರ್ಗದಲ್ಲಿ ಕೆಲವು ಪಾಲು ತೆರಿಗೆ ವಂಚನೆಗೆ ಸಹಕಾರ ನೀಡುವ ಪ್ರವೃತ್ತಿ ಹೊಂದಿರುವ ಅನುಮಾನಗಳೂ ಇವೆ. ಇಂಥ ಲೋಪಗಳಿಗೆ ಕಡಿವಾಣ ಹಾಕಿದರೆ ತೆರಿಗೆ ಪ್ರಮಾಣ ಗಣನೀಯವಾಗಿ ಏರುಮುಖವಾಗಿರುವುದರಲ್ಲಿ ಸಂದೇಹವೇ ಇಲ್ಲ.