ಸಿಬಿಎಸ್ಇ ಹನ್ನೆರಡನೇ ತರಗತಿ ಪರೀಕ್ಷೆ ರದ್ದುಗೊಳಿಸುವ ಮಹತ್ವದ ನಿರ್ಧಾರವನ್ನು ಕೇಂದ್ರ ಸರ್ಕಾರ ತಳೆದಿದೆ. ಈ ಸಂಬಂಧ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಮಹತ್ವದ ಸಭೆಯಲ್ಲಿ ಈಗಿನ ಪರಿಸ್ಥಿತಿ, ಕರೊನಾ ಸೋಂಕಿನ ತೀವ್ರತೆ ಸೇರಿದಂತೆ ಎಲ್ಲ ಆಯಾಮಗಳ ಕುರಿತಂತೆ ಅವಲೋಕನ ನಡೆಸಿ, ಈ ತೀರ್ವನಕ್ಕೆ ಬರಲಾಗಿದೆ. ವಿಜ್ಞಾನ, ವಾಣಿಜ್ಯ, ಕಲಾ ವಿಷಯದ ಮುಖ್ಯ ವಿಷಯಗಳದ್ದಷ್ಟೇ ಪರೀಕ್ಷೆ ನಡೆಸುವ, ಲಿಖಿತ ಪರೀಕ್ಷೆಯ ಬದಲು ಬಹುಆಯ್ಕೆಯ ಪ್ರಶ್ನೆ/ಉತ್ತರ ನೀಡುವ (ಸಿಇಟಿ ಮಾದರಿ), 30 ನಿಮಿಷಗಳಲ್ಲಿ ಆನ್ಲೈನ್ ಮೂಲಕ ಪರೀಕ್ಷೆ ನಡೆಸುವ ಪ್ರಸ್ತಾವನೆಗಳನ್ನು ಪ್ರಧಾನಿ ಮುಂದೆ ಇರಿಸಲಾಗಿತ್ತು. ಅವುಗಳನ್ನೆಲ್ಲ ಪರಿಶೀಲಿಸಿದ ಮತ್ತು ಶಿಕ್ಷಣ ತಜ್ಞರ, ರಾಜ್ಯಗಳ, ಸಂಬಂಧಿತ ಹಿರಿಯ ಅಧಿಕಾರಿಗಳ ಅಭಿಪ್ರಾಯ ಪಡೆದ ಪ್ರಧಾನಿ ಪರೀಕ್ಷೆ ರದ್ದುಗೊಳಿಸುವ ನಿರ್ಣಯ ಪ್ರಕಟಿಸಿದರು ಮತ್ತು ‘ನಮಗೆ ವಿದ್ಯಾರ್ಥಿಗಳ ಹಿತವೇ ಮುಖ್ಯ. ಅವರನ್ನು ಅಪಾಯಕ್ಕೆ ದೂಡಿ, ಪರೀಕ್ಷೆ ನಡೆಸುವುದು ಸಮರ್ಪಕವಲ್ಲ. ಈಗಿನ ಒತ್ತಡದ ಸಂದರ್ಭದಲ್ಲಿ ಪರೀಕ್ಷೆ ಮತ್ತಷ್ಟು ಹೊರೆಯಾಗಬಾರದು’ ಎಂದಿದ್ದಾರೆ.
ಕರೊನಾ ಎರಡನೇ ಅಲೆ ವ್ಯಾಪಕವಾಗಿ, ಈಗ ಕೊಂಚ ತಗ್ಗುತ್ತಿದೆಯಾದರೂ, ಪರಿಸ್ಥಿತಿ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿಲ್ಲ. 4 ಲಕ್ಷದಷ್ಟಿದ್ದ ದೈನಿಕ ಪ್ರಕರಣಗಳ ಸಂಖ್ಯೆ 1.25 ಲಕ್ಷಕ್ಕೆ ತಗ್ಗಿದ್ದರೂ, ಮರಣ ಪ್ರಮಾಣ ಇಳಿಯಬೇಕಿದೆ. ವಿದ್ಯಾರ್ಥಿಗಳಿಗೆ ಲಸಿಕೆ ನೀಡದೆ ಪರೀಕ್ಷೆ ನಡೆಸುವುದು ಸೂಕ್ತವಲ್ಲ ಎಂಬ ಅಭಿಪ್ರಾಯ ಬಹುತೇಕ ರಾಜ್ಯಗಳದ್ದು ಮತ್ತು ಪಾಲಕರದ್ದು. ವಿದ್ಯಾರ್ಥಿಗಳು, ಪಾಲಕರು, ಶಿಕ್ಷಕರಲ್ಲಿ 12ನೇ ತರಗತಿ ಪರೀಕ್ಷೆ ಬಗ್ಗೆ ಆತಂಕವಿದ್ದದ್ದು ನಿಜ. ಅಲ್ಲದೆ, ಸೆಪ್ಟೆಂಬರ್-ಅಕ್ಟೋಬರ್ ಹೊತ್ತಲ್ಲಿ ಕರೊನಾ ಸೋಂಕಿನ ಮೂರನೇ ಅಲೆ ವ್ಯಾಪಿಸಬಹುದು ಮತ್ತು ಅದು ಮಕ್ಕಳನ್ನು ಹೆಚ್ಚು ಪ್ರಭಾವಿಸುವ ಸಾಧ್ಯತೆ ಇದೆ ಎಂದು ವೈದ್ಯಕೀಯ ರಂಗದ ತಜ್ಞರು ಹೇಳಿರುವುದರಿಂದ ಅಪಾಯವನ್ನು ಆಹ್ವಾನಿಸಿಕೊಂಡು ಪರೀಕ್ಷೆ ನಡೆಸಲು ಸಾಧ್ಯವಿಲ್ಲ. ಇದೇ ಕಾರಣಕ್ಕೆ ಸಿಬಿಎಸ್ಇ ಹತ್ತನೇ ತರಗತಿ ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ. ಕರ್ನಾಟಕದಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಪರಿಸ್ಥಿತಿ ಮತ್ತು ವಿದ್ಯಾರ್ಥಿಗಳ ಆರೋಗ್ಯ, ಭವಿಷ್ಯದ ಹಿತದೃಷ್ಟಿಯನ್ನು ಅವಲೋಕಿಸಿ ಪಿಯುಸಿ ಪರೀಕ್ಷೆ ನಡೆಸಬೇಕೆ, ಬೇಡವೆ ಎಂಬುದರ ಬಗ್ಗೆ ನಿರ್ಣಯ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಸಚಿವರು ಪ್ರತಿಕ್ರಿಯಿಸಿದ್ದಾರೆ.
ಸಿಬಿಎಸ್ಇ 12ನೇ ತರಗತಿಯಲ್ಲಿ 14.30 ಲಕ್ಷ ವಿದ್ಯಾರ್ಥಿಗಳಿದ್ದಾರೆ. 10ನೇ ತರಗತಿ ವಿದ್ಯಾರ್ಥಿಗಳಿಗೆ ಆಂತರಿಕ ಮೌಲ್ಯಮಾಪನವನ್ನು ಆಧರಿಸಿ, ಸಿಬಿಎಸ್ಇ ಫಲಿತಾಂಶವನ್ನು ನೀಡಲಿದೆ. 12ನೇ ತರಗತಿ ಫಲಿತಾಂಶಕ್ಕೆ ಯಾವೆಲ್ಲ ಮಾನದಂಡ ಅನುಸರಿಸಲಾಗುವುದು, ಪೂರ್ವಸಿದ್ಧತಾ ಪರೀಕ್ಷೆಯ ಅಂಕಗಳೇ ಪರಿಗಣಿಸಲಾಗುವುದೇ, ಮುಂದೆ ವೃತ್ತಿಪರ ಕೋರ್ಸಗಳ ಆಯ್ಕೆ ವೇಳೆ ಗೊಂದಲವಾಗದಂತೆ ಹೇಗೆ ಫಲಿತಾಂಶ ನೀಡಲಾಗುವುದು- ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ. ಈ ಸಂಬಂಧ ಸೂಕ್ತ ಮಾರ್ಗಸೂಚಿಯನ್ನು ಪ್ರಕಟಿಸುವ ಮೂಲಕ, ವಿದ್ಯಾರ್ಥಿಗಳ ಗೊಂದಲ, ಆತಂಕವನ್ನು ನಿವಾರಿಸಬೇಕು. ಉಳಿದ ರಾಜ್ಯಗಳು ಕೂಡ 12ನೇ ತರಗತಿ ಪರೀಕ್ಷೆ ಕುರಿತಂತೆ ಸಮರ್ಪಕವಾದ ನಿರ್ಧಾರ ತಳೆಯಬೇಕು.