ನ್ಯೂಸ್

ಸಂಪಾದಕೀಯ: ಜಾಗರೂಕ ನಡೆ

ಮೋದಿ 2.0 ಸರ್ಕಾರದ ಮೊದಲ ಪೂರ್ಣ ಪ್ರಮಾಣದ ಆಯವ್ಯಯವನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ಮಂಡಿಸಿದ್ದು, ದೇಶದ ಆರ್ಥಿಕತೆಗೆ ಇದರಿಂದ ಯಾವ ಬಗೆಯ ಪರಿಣಾಮಗಳು ಆಗಲಿವೆ ಎಂಬ ಬಗ್ಗೆ ನಾನಾ ಲೆಕ್ಕಾಚಾರಗಳು ನಡೆಯುತ್ತಿವೆ. ಜಾಗತಿಕ ಆರ್ಥಿಕ ಹಿಂಜರಿತದ ದುಷ್ಪರಿಣಾಮ ಭಾರತದ ಮೇಲೂ ಕಂಡುಬಂದಿದ್ದು, ಈ ಹಿನ್ನೆಲೆಯಲ್ಲಿ ಆರ್ಥಿಕತೆಯನ್ನು ಹಳಿಗೆ ತರಲು ಸರ್ಕಾರ ಆದ್ಯತೆ ನೀಡಿದೆ ಎಂಬುದು ಸ್ಪಷ್ಟ.

ತೆರಿಗೆ ಸಂಗ್ರಹದ ಕೊರತೆ, ವಿತ್ತೀಯ ಕೊರತೆ ಹೆಚ್ಚಳದ ನಡುವೆಯೂ ಸರ್ಕಾರ ವಿವಿಧ ವಲಯಗಳಿಗೆ ಹಣ ಖರ್ಚು ಮಾಡಲು ಮುಂದಾಗಿದ್ದು, ಸೂಕ್ತ ಅನುದಾನ ಒದಗಿಸಿದೆ. ಹಾಗೆಯೇ, ಜನರ ಕೈಯಲ್ಲೂ ಒಂದಷ್ಟು ಹಣ ಇರಿಸುವಂತೆ ಮಾಡಿ, ಅವರೂ ಖರ್ಚು ಮಾಡಲು ದಾರಿ ಕಲ್ಪಿಸಲಾಗಿದೆ. ಅಂದರೆ, ಆರ್ಥಿಕ ಮಂದಗತಿಯನ್ನು ಹಣ ಚಲಾವಣೆಯ ಮೂಲಕ ನಿವಾರಿಸುವ ಜಾಣನಡೆಗೆ ಸರ್ಕಾರ ಮುಂದಾಗಿರುವುದು ಗಮನಾರ್ಹ. ಅಲ್ಲದೆ, ಆರ್ಥಿಕ ಹಿನ್ನಡೆಯ ಕಾಯಿಲೆಗೆ ಯಾವ ಮದ್ದು ನೀಡಲಿದೆ ಎಂಬ ಕುತೂಹಲಕ್ಕೆ ಈ ಮೂಲಕ ಉತ್ತರ ಒದಗಿಸಿದೆ.

ಕೃಷಿ ಮತ್ತು ಗ್ರಾಮೀಣಾಭಿವೃದ್ಧಿಗೆ ಸೂಕ್ತ ಆದ್ಯತೆ ಒದಗಿಸಲಾಗಿದೆ. ರೈತರ ಆದಾಯ ಹೆಚ್ಚಿಸುವ ಬದ್ಧತೆ ವ್ಯಕ್ತವಾಗಿದೆ. ಮೂಲಭೂತ ಸೌಕರ್ಯಕ್ಕೆ ಇನ್ನಷ್ಟು ಬಂಡವಾಳ ಹೂಡಲು ಮುಂದಾಗಿದ್ದು, ಶಿಕ್ಷಣ, ಆರೋಗ್ಯ, ರಕ್ಷಣಾ ವಲಯಗಳಿಗೆ ಪ್ರಾಧಾನ್ಯ ನೀಡಲಾಗಿದೆ. ಹೊಸ ಶಿಕ್ಷಣ ನೀತಿ ರೂಪಿಸುವ ಘೋಷಣೆ ಮಹತ್ವದ್ದು.

ವೈದ್ಯರ ಕೊರತೆ ನೀಗಿಸಲು ಪ್ರತಿ ಜಿಲ್ಲೆಯಲ್ಲೂ ವೈದ್ಯಕೀಯ ಕಾಲೇಜ್, ಪಿಪಿಪಿ ಮಾದರಿಯಲ್ಲಿ ಐದು ಸ್ಮಾರ್ಟ್​ಸಿಟಿಗಳ ನಿರ್ವಣ, ಬಂಡವಾಳ ಹೂಡಿಕೆ ಹೆಚ್ಚಿಸಲು ಉತ್ತೇಜನಕಾರಿ ಕ್ರಮ, ಸ್ವಚ್ಛ ಭಾರತಕ್ಕಾಗಿ -ಠಿ; 12,300 ಕೋಟಿ, 2024ರ ಹೊತ್ತಿಗೆ ನೂರು ಹೊಸ ವಿಮಾನನಿಲ್ದಾಣಗಳ ನಿರ್ವಣ, ಸೌರಶಕ್ತಿ ಉತ್ಪಾದನೆಗೆ ಒತ್ತು, ಹಾಲಿನ ಉತ್ಪಾದನೆ ದ್ವಿಗುಣಗೊಳಿಸುವ ಗುರಿ ಹೀಗೆ ಹಲವು ಭರವಸೆಯ ಕ್ರಮಗಳನ್ನು ಒಳಗೊಂಡಿದೆ. ಆದರೆ, ತೆರಿಗೆ ವಿನಾಯ್ತಿಗೆ ಸಂಬಂಧಿಸಿದಂತೆ ಆರ್ಥಿಕ ತಜ್ಞರಲ್ಲೇ ಗೊಂದಲಗಳಿವೆ.

ಈ ಬಗ್ಗೆ ಮುಂದಿನ ದಿನಗಳಲ್ಲಿ ಸ್ಪಷ್ಟ ಚಿತ್ರಣ ಸಿಗಬಹುದು. ಆದರೆ, ಉದ್ಯೋಗಸೃಷ್ಟಿ ಕುರಿತಂತೆ ಬಜೆಟ್​ನಲ್ಲಿ ಎಲ್ಲೂ ಸ್ಪಷ್ಟವಾದ ದಾರಿ ತೋರಿಸಲಾಗಿಲ್ಲ. ನಿರುದ್ಯೋಗ ಪ್ರಮಾಣ ಏರಿಕೆಯಾಗಿದ್ದು, ಯುವಕರು ಕೆಲಸಕ್ಕಾಗಿ ಹಾತೊರೆಯುತ್ತಿದ್ದಾರೆ. ಶುಕ್ರವಾರ ಮಂಡಿಸಿದ್ದ ಆರ್ಥಿಕ ಸಮೀಕ್ಷೆಯಲ್ಲಿ ಚೀನಾ ಮಾದರಿಯಲ್ಲಿ ಉದ್ಯೋಗಸೃಷ್ಟಿಗೆ ಯತ್ನಿಸಲಾಗುವುದು ಎಂದು ಹೇಳಿದ್ದರೂ, ಈ ಬಗ್ಗೆ ಸ್ಪಷ್ಟತೆಯಿಲ್ಲ. ಒಟ್ಟಾರೆ, ಆರ್ಥಿಕ ನೈರಾಶ್ಯದ ವಾತಾವರಣದಲ್ಲೂ ಸಮತೋಲಿತ ಬಜೆಟ್ ಇದಾಗಿದೆ.