ಅಧಿಕಾರಿ ವಲಯದ ನಿರ್ಲಕ್ಷ್ಯ, ಇಚ್ಛಾಶಕ್ತಿಯ ಕೊರತೆ, ವಿಳಂಬದ್ರೋಹ, ಭ್ರಷ್ಟಾಚಾರದ ಪಿಡುಗು, ಹೀಗೆ ಹತ್ತು ಹಲವು ಸಮಸ್ಯೆಗಳ ಪರಿಣಾಮ ಸರ್ಕಾರದ ಯೋಜನೆಗಳು, ಕಾರ್ಯಕ್ರಮಗಳು, ಪ್ರಮುಖ ಘೋಷಣೆಗಳು ಅನುಷ್ಠಾನ ಹಂತದಲ್ಲಿ ಸೋಲುತ್ತವೆ. ಅದೆಷ್ಟೋ ಯೋಜನೆಗಳಂತೂ ನೈಜ ಫಲಾನುಭವಿಗಳವರೆಗೆ ತಲುಪುವುದೇ ಇಲ್ಲ. ಜನಸಾಮಾನ್ಯರ ಅನುಕೂಲಕ್ಕಾಗಿ ರೂಪಿಸಲಾದ ನಿಯಮಗಳನ್ನು ಗಾಳಿಗೆ ತೂರುವುದರಿಂದ ಆಡಳಿತ ಸುಧಾರಣೆ ಎಂಬುದು ಮರೀಚಿಕೆಯಾಗಿಯೇ ಉಳಿಯುತ್ತದೆ. ಅದರಲ್ಲೂ, ಗ್ರಾಮೀಣ ಪ್ರದೇಶಗಳ ಸ್ಥಿತಿ ಇನ್ನೂ ಶೋಚನೀಯ. ಒಂದು ಸಣ್ಣ ಸರ್ಕಾರಿ ಕೆಲಸಕ್ಕೂ ಹತ್ತಾರು ಬಾರಿ ಕಚೇರಿಗಳಿಗೆ ಎಡತಾಕಬೇಕು, ಕೆಳಹಂತದ ಸಿಬ್ಬಂದಿ ಲಂಚ ಸ್ವೀಕರಿಸದೆ ಕೆಲಸ ಮಾಡುವುದೇ ಇಲ್ಲ ಎಂಬ ಪರಿಸ್ಥಿತಿ ಹಲವೆಡೆ ಇದೆ. ಹಳ್ಳಿಯ ಜನರಿಗೆ ಸರಿಯಾಗಿ ಸರ್ಕಾರದ ಸೌಲಭ್ಯಗಳ ಮಾಹಿತಿ ದೊರೆಯುವುದೇ ಇಲ್ಲ, ಮಾಹಿತಿ ಸಿಕ್ಕರೂ ಸೌಲಭ್ಯ ಪಡೆದುಕೊಳ್ಳಲು ಹರಸಾಹಸ ಪಡಬೇಕು. ‘ಜನರೆಡೆಗೆ ಆಡಳಿತ’ ಎಂದು ಸರ್ಕಾರ ಮತ್ತು ಜನಪ್ರತಿನಿಧಿಗಳು ಆಗಾಗ ಹೇಳುತ್ತಾರಾದರೂ, ವಾಸ್ತವದಲ್ಲಿ ಪರಿಸ್ಥಿತಿ ತುಂಬ ಸುಧಾರಿಸಬೇಕಿದೆ.
ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಆಡಳಿತ ಸುಧಾರಣೆಗೆ ಮಹತ್ವದ ಹೆಜ್ಜೆ ಇರಿಸಿರುವುದು ಸಮಾಧಾನಕರ ಸಂಗತಿ. ಕರ್ನಾಟಕ ಆಡಳಿತ ಸುಧಾರಣಾ ಆಯೋಗ-2ರ ಮೊದಲ ವರದಿ ಕುರಿತು ಕಂದಾಯ ಇಲಾಖೆ ಶಿಫಾರಸುಗಳನ್ನು ಅನುಷ್ಠಾನಗೊಳಿಸಿ ಅನುಪಾಲನಾ ವರದಿ ಸಲ್ಲಿಸುವಂತೆ ಸರ್ಕಾರ ಟಿಪ್ಪಣಿ ಹೊರಡಿಸಿದೆ. ‘ಬೆಂಗಳೂರು ಒನ್’ ಮಾದರಿಯಲ್ಲಿ ‘ಗ್ರಾಮ ಒನ್’ ವ್ಯವಸ್ಥೆ ಕಲ್ಪಿಸಬೇಕು, ಅಟಲ್ ಜೀ ಜನಸ್ನೇಹಿ ಕೇಂದ್ರಗಳು ಎಲ್ಲ ಸರ್ಕಾರಿ ನಾಗರಿಕ ಆನ್ಲೈನ್ ಸೇವೆಗಳನ್ನು ಒದಗಿಸಬೇಕು. ಕಂದಾಯ ಇಲಾಖೆಯ ಎಲ್ಲ ಪ್ರಮಾಣಪತ್ರಗಳ ವಿತರಣೆಗಾಗಿ ಇ-ಕ್ಷಣ ವ್ಯವಸ್ಥೆ ಜಾರಿಗೊಳಿಸಬೇಕು, ಭೂಮಿ ತಂತ್ರಾಂಶದಲ್ಲಿ ಸೂಕ್ತ ಮಾರ್ಪಾಡು ಮಾಡಬೇಕು ಎಂಬುದು ಸೇರಿದಂತೆ ಕಂದಾಯ ಇಲಾಖೆ ಹಲವು ಪ್ರಮುಖ ಶಿಫಾರಸುಗಳನ್ನು ಮಾಡಿದೆ. ಈ ಶಿಫಾರಸುಗಳ ಜಾರಿ ಎಷ್ಟು ಪರಿಣಾಮಕಾರಿಯಾಗಿ ಮತ್ತು ಪಾರದರ್ಶಕವಾಗಿ ಆಗುತ್ತದೆ ಎಂಬುದರ ಮೇಲೆ ಸುಧಾರಣೆಯ ಮಾನದಂಡ ನಿರ್ಧಾರವಾಗುತ್ತದೆ. ಶಿಫಾರಸುಗಳು ಉತ್ತಮ ಆಶಯವನ್ನೇ ಹೊಂದಿವೆ ಎಂಬುದರಲ್ಲಿ ಎರಡು ಮಾತಿಲ್ಲ. ಸಮಸ್ಯೆ ಬರುವುದು ಅನುಷ್ಠಾನದ ಹಂತದಲ್ಲಿ.
ಗ್ರಾಮೀಣ, ಹೋಬಳಿ ಮತ್ತು ತಾಲೂಕು ಕೇಂದ್ರಗಳಲ್ಲಿ ಜನರು ಈಗಲೂ ಜಾತಿ, ಆದಾಯ, ಜನನ, ಮರಣ ಪ್ರಮಾಣಪತ್ರ ಪಡೆಯಲು ಹಲವು ಬಾರಿ ಓಡಾಡಬೇಕು. ಪಹಣಿಯಲ್ಲಿ ಬದಲಾವಣೆ ಅಥವಾ ತಿದ್ದುಪಡಿಗಾಗಿ ರೈತರು ಸಿಬ್ಬಂದಿಯ ದುಂಬಾಲು ಬೀಳಬೇಕು. ‘ಆನ್ಲೈನ್’ ಹೆಸರಿನಲ್ಲಿ ಸುಧಾರಣೆಯ ಮಂತ್ರ ಜಪಿಸಲಾಗುತ್ತಿದೆಯಾದರೂ, ಸರ್ವರ್ ಸಮಸ್ಯೆ ಸೇರಿ ಇತರ ತಾಂತ್ರಿಕ ಕಾರಣಗಳನ್ನು ಮುಂದೆ ಮಾಡಿ, ಮತ್ತೆ ಅದೇ ವಿಳಂಬನೀತಿ ಅನುಸರಿಸುವ ಚಾಳಿ ಮುಂದುವರಿದಿದೆ. ಆಡಳಿತ ಸುಧಾರಣೆಗೆ ದೃಢಸಂಕಲ್ಪ ಕೈಗೊಂಡಿರುವ ಸರ್ಕಾರ ಆ ಹಾದಿಯಲ್ಲಿನ ಪ್ರಾಥಮಿಕ ತೊಡಕುಗಳನ್ನು ಮೊದಲು ನಿವಾರಿಸಬೇಕು, ಶಿಫಾರಸುಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಬೇಕು. ಆಗಲೇ, ನಿಜವಾದ ಅರ್ಥದಲ್ಲಿ ಜನರಿಗೆ ಸುಧಾರಣೆಗಳ ಪ್ರಯೋಜನ ದಕ್ಕಬಲ್ಲದು.