ನ್ಯೂಸ್

ಆದರ್ಶದ ಅನುಸರಣೆ: ಕರೊನಾ ನಡುವೆಯೇ ಸ್ವಾತಂತ್ರ್ಯ ಸಂಭ್ರಮ

#ಸಂಪಾದಕೀಯ

ಎಲ್ಲೆಡೆ ಕರೊನಾ ಕರಿನೆರಳು ಚಾಚಿದೆ; ನಿತ್ಯವೂ ಕರೊನಾ ಸೋಂಕಿನ ಪ್ರಕರಣಗಳು ವರದಿಯಾಗುತ್ತಿವೆ. ಈ ಮಾರಿಯನ್ನು ಹೊರಗಟ್ಟುವ ಪ್ರಯತ್ನಗಳು ಸಾಗಿವೆ. ಈ ನಡುವೆಯೇ ಸ್ವಾತಂತ್ರ್ಯ ದಿನಾಚರಣೆ ಬಂದಿದೆ. ಕರೊನಾ ಕಾರಣಕ್ಕಾಗಿ ಎಂದಿನ ರೀತಿಯಲ್ಲಿ ಜನರು ಸೇರಿ ಸ್ವಾತಂತ್ರ್ಯೋತ್ಸವವನ್ನು ಆಚರಿಸಲು ಆಗದಾದರೂ, ಆ ಉತ್ಸಾಹ ಮತ್ತು ಪ್ರೇರಣೆಗೆ ಕೊರತೆಯುಂಟಾಗದಂತೆ ನೋಡಿಕೊಳ್ಳಬೇಕಿದೆ.

ಏಕೆಂದರೆ, ಸ್ವಾತಂತ್ರೊ್ಯೕತ್ಸವ, ಗಣರಾಜ್ಯೋತ್ಸವ ಇಂಥವೆಲ್ಲ ನಮ್ಮ ದೇಶ ಸಾಗಿಬಂದ ಹಾದಿಯನ್ನು ಅವಲೋಕಿಸುವ ಜತೆಗೆ ಮುಂದೆ ಸಾಗಬೇಕಾದ ದಾರಿಯ ಬಗ್ಗೆ ಪರಿಶೀಲನೆ ಮಾಡಿಕೊಳ್ಳುವ ಕಾಲಘಟ್ಟವೂ ಹೌದು. 1947ರ ನಂತರದಲ್ಲಿ ಭಾರತ ಸಾಕಷ್ಟು ಪ್ರಗತಿ ಸಾಧಿಸಿದೆ ಎಂಬುದರಲ್ಲಿ ಅನುಮಾನವಿಲ್ಲ. ಕೃಷಿ, ವಿಜ್ಞಾನ-ತಂತ್ರಜ್ಞಾನ, ಶಿಕ್ಷಣ, ಸಮಾಜ ಕಲ್ಯಾಣ... ಹೀಗೆ ವಿವಿಧ ರಂಗಗಳಲ್ಲಿ ನಾವು ಛಾಪೊತ್ತಿದ್ದೇವೆ. ಕೃಷಿಪ್ರಧಾನವಾದ ನಮ್ಮ ದೇಶದಲ್ಲಿ ಮೊದಲು ಆಹಾರದ ಕೊರತೆ ಇತ್ತು.

ಈಗ ಹಾಗಿಲ್ಲ. ಅದರಲ್ಲೂ ಹೈನುಗಾರಿಕೆಯಲ್ಲಿ ನಾವು ಜಗತ್ತಿನಲ್ಲೇ ಮುಂಚೂಣಿಯಲ್ಲಿದ್ದೇವೆ. ಇಸ್ರೋ ಪ್ರಯತ್ನದ ಫಲವಾಗಿ ಮಂಗಳಯಾನ, ಚಂದ್ರಯಾನದಂತಹ ಹೆಗ್ಗಳಿಕೆ ನಮ್ಮ ಮುಡಿಗೇರಿದೆ. 2020ರಲ್ಲಿ ಜಾರಿಗೆ ಬಂದ ಶಿಕ್ಷಣ ಹಕ್ಕು ಅನೇಕ ಅಡೆತಡೆಗಳ ನಡುವೆಯೂ ವಿಶಿಷ್ಟವಾದ ಉಪಕ್ರಮವೆಂದು ಹೆಸರಾಗಿದೆ.

ದೇಶದ ಸುಮಾರು 12 ಲಕ್ಷ ಶಾಲೆಗಳ 12 ಕೋಟಿ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಒದಗಿಸುತ್ತಿರುವುದು ಮತ್ತೊಂದು ಸಾಧನೆ. ಪಂಚಾಯತರಾಜ್ ವ್ಯವಸ್ಥೆಯಿಂದಾಗಿ, ವಿಶ್ವದಲ್ಲೇ ಅತಿ ಹೆಚ್ಚು ಚುನಾಯಿತ ಜನಪ್ರತಿನಿಧಿಗಳನ್ನು ಹೊಂದಿದ ದೇಶ ನಮ್ಮದು. ಇನ್ನು, ಖಾಸಗಿ ಹಾಗೂ ಸರ್ಕಾರಿ ಎರಡೂ ಸೇರಿ ವಿಶ್ವದ ಬೃಹತ್ ಆರೋಗ್ಯ ವ್ಯವಸ್ಥೆಗಳಲ್ಲಿ ನಮ್ಮದೂ ಒಂದು. ಹೀಗಾಗಿ, ‘ಮೆಡಿಕಲ್ ಟೂರಿಸಂ’ (ಬೇರೆ ದೇಶಗಳವರು ಆರೋಗ್ಯ ಚಿಕಿತ್ಸೆಗಾಗಿ ಬರುವುದು) ಅಗಾಧವಾಗಿ ಬೆಳೆದಿದೆ.

ಹಲವು ಸಾಮಾಜಿಕ ಯೋಜನೆಗಳ ಮೂಲಕ, ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಡಲಾಗಿದೆ. ನಮ್ಮ ದೇಶದ ಪ್ರತಿಭೆಗಳು ವಿದೇಶಗಳಲ್ಲಿ ಉನ್ನತ ಸ್ಥಾನಕ್ಕೇರಿದ್ದಾರೆ. ರಕ್ಷಣಾ ರಂಗದಲ್ಲಿ ಆದಷ್ಟು ಸ್ವಾವಲಂಬಿಯಾಗುವ ನಿಟ್ಟಿನಲ್ಲಿ ಕೆಲ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇಷ್ಟೆಲ್ಲ ಸಾಧನೆಗಳ ನಡುವೆಯೂ ಕೆಲ ಕಹಿವಾಸ್ತವಗಳೂ ಇವೆಯೆನ್ನುವುದನ್ನು ಅಲ್ಲಗಳೆಯಲಾಗದು. ಅದರಲ್ಲಿ ಮುಖ್ಯವಾದುದು ಭ್ರಷ್ಟಾಚಾರ. ಈಗೇನೋ ಕೇಂದ್ರ ಸರ್ಕಾರದ ಆಡಳಿತದ ಮೇಲ್ಮಟ್ಟದಲ್ಲಿ ಈ ಬಗ್ಗೆ ಆಪಾದನೆ ಇಲ್ಲವಾದರೂ ಅದು ಎಲ್ಲ ರಾಜ್ಯಗಳಲ್ಲಿ, ಕೆಳಹಂತಗಳಲ್ಲೂ ಅನುಭವಕ್ಕೆ ಬಂದಾಗ ಮಾತ್ರ ಜನರಿಗೆ ಅನುಕೂಲವಾಗುತ್ತದೆ.

ಇನ್ನು, ರಾಜಕೀಯ ವ್ಯವಸ್ಥೆಯ ಬಗ್ಗೆ ಜನರಿಗೆ ಅಷ್ಟು ಉತ್ತಮ ಭಾವನೆಯಿಲ್ಲದಿರುವುದು ಭಾರತದಂತಹ ಬೃಹತ್ ಪ್ರಜಾಪ್ರಭುತ್ವ ದೇಶಕ್ಕೆ ಶೋಭೆ ತರುವ ಸಂಗತಿಯಲ್ಲ. ಸಾರ್ವಜನಿಕ ಜೀವನದಲ್ಲಿಯೂ ನೈತಿಕತೆ ಕುಸಿತವಾಗಿರುವುದು ಚಿಂತೆಯ ವಿಷಯವೇ ಸರಿ. ಮಹಿಳಾ ದೌರ್ಜನ್ಯ ಪ್ರಮಾಣ ತಗ್ಗಬೇಕಿದೆ. ಈ ಎಲ್ಲ ಸಂಗತಿಗಳ ಬಗ್ಗೆ ಗಂಭೀರ ಚಿಂತನೆ ನಡೆಯಬೇಕಿದೆ.

ಇನ್ನೊಂದೆಡೆ, ಕರೊನಾದಿಂದಾಗಿ ಬಹುತೇಕ ಎಲ್ಲ ರಂಗಗಳ ಮೇಲೆ ದುಷ್ಪರಿಣಾಮವಾಗಿದೆ. ಈ ಸನ್ನಿವೇಶದಿಂದ ಚೇತರಿಕೆಗೆ ವರ್ಷಾನುಗಟ್ಟಲೆ ಸಮಯ ಬೇಕಾಗುತ್ತದೆ. ಆದರೂ ಈ ಸವಾಲನ್ನು ಅವಕಾಶವಾಗಿ ಬಳಸಿಕೊಳ್ಳುವ ಯತ್ನವನ್ನು ಸರ್ಕಾರ, ಖಾಸಗಿ ವಲಯ ಮತ್ತು ಜನರು ಎಲ್ಲರೂ ಸೇರಿ ಮಾಡಿದಲ್ಲಿ ಚೇತರಿಕೆ ಅಸಾಧ್ಯವೇನಲ್ಲ. ಅಂಥದೊಂದು ಸಂಕಲ್ಪಕ್ಕೆ ಸ್ವಾತಂತ್ರ್ಯೋತ್ಸವದ ಈ ಪರ್ವ ಪ್ರೇರಣೆಯಾಗಲಿ ಎಂಬುದು ಆಶಯ.