| ರಮೇಶ ದೊಡ್ಡಪುರ ಬೆಂಗಳೂರು
ಈಗಾಗಲೆ ಗಗನಮುಖಿಯಾಗಿರುವ ಅಡುಗೆ ಎಣ್ಣೆಯ (ಖಾದ್ಯ ತೈಲ) ದರ ಮತ್ತೆ ಏರಿಕೆಯಾಗದಂತೆ ತಡೆಯಲು ಡೀಲರ್ಗಳು ಹಾಗೂ ಸ್ಟಾಕಿಸ್ಟ್ಗಳಿಗೆ ಮಿತಿ ವಿಧಿಸುವಂತೆ ಕೇಂದ್ರ ಸರ್ಕಾರ ಮೂರು ಬಾರಿ ಸೂಚನೆ ನೀಡಿದರೂ ಕರ್ನಾಟಕ ಸರ್ಕಾರ ಈವರೆಗೂ ಕ್ರಮ ಕೈಗೊಂಡಿಲ್ಲ. ಇದರ ಪರಿಣಾಮ ಕೃತಕ ಅಭಾವ ಸೃಷ್ಟಿಯಾಗಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಬೆಲೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಕಳೆದ ಮೂನಾಲ್ಕು ವರ್ಷಕ್ಕೆ ಹೋಲಿಸಿದರೆ ಸೂರ್ಯಕಾಂತಿ ಎಣ್ಣೆ, ಪಾಮ್ ಆಯಿಲ್ ಹಾಗೂ ಸಾಸಿವೆ ಎಣ್ಣೆ ದರಗಳು ಶೇ.50-70 ವರೆಗೆ ಏರಿಕೆ ಕಂಡಿವೆ. ಸದ್ಯದಲ್ಲೆ ದೀಪಾವಳಿ ಸೇರಿ ಸಾಲು ಸಾಲು ಹಬ್ಬಗಳು ಎದುರಾಗಲಿದ್ದು, ಸ್ಟಾಕಿಸ್ಟ್ಗಳು ಹೆಚ್ಚು ಉತ್ಪನ್ನಗಳನ್ನು ಸಂಗ್ರಹಿಸಿಟ್ಟುಕೊಂಡು ಕೃತಕ ಅಭಾವ ಸೃಷ್ಟಿಸಿ ದರ ಹೆಚ್ಚಿಸುವ ಸಾಧ್ಯತೆಯಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಜನರಿಗೆ ತಲುಪದ ಕೇಂದ್ರದ ಕೊಡುಗೆ: ಖಾದ್ಯ ತೈಲಗಳನ್ನು ಹೆಚ್ಚಿನ ಪ್ರಮಾಣದಲ್ಲಿ ರಫ್ತು ಮಾಡುವ ಇಂಡೋನೇಷ್ಯಾ ಹಾಗೂ ಮಲೇಷ್ಯಾದಲ್ಲಿ ಕಾರ್ವಿುಕರ ಸಮಸ್ಯೆ ಹಾಗೂ ಕಚ್ಚಾವಸ್ತುಗಳ ಕೊರತೆಯಿಂದಾಗಿ ಅಡುಗೆ ಎಣ್ಣೆ ದರ ಹೆಚ್ಚಾಗಿದೆ. ದರ ಕಡಿಮೆ ಮಾಡಲು ಕೇಂದ್ರ ಸರ್ಕಾರ 2021ರ ಫೆಬ್ರವರಿಯಿಂದ ಇಲ್ಲಿಯವರೆಗೆ ಆರು ಬಾರಿ ಆಮದು ಸುಂಕವನ್ನು ಕಡಿತ ಮಾಡಿದೆ. ಕಚ್ಚಾ ಪಾಮ್ ಸೋಯಾಬೀನ್ ಹಾಗೂ ಸೂರ್ಯಕಾಂತಿ ಆಮದಿನ ಮೇಲೆ ಆಮದು ಸುಂಕ ಬಹುತೇಕ ಶೂನ್ಯವಾಗಿದೆ. ಇಷ್ಟಾದರೂ ಕರ್ನಾಟಕದಲ್ಲಿ ಪ್ರತಿ 10 ಕೆಜಿ ಬಿಡಿ ಸೂರ್ಯಕಾಂತಿ ಎಣ್ಣೆ ದರ ಸುಮಾರು 1,350 ರೂ. ಇದೆ.
ಪಾಮ್ ಆಯಿಲ್ ದರ ಸುಮಾರು 1,200 ರೂ. ಹಾಗೂ ಸಾಸಿವೆ ಎಣ್ಣೆ ದರ ಸುಮಾರು 1,400-1,450 ರೂ. ಇದೆ. ಜನರಿಗೆ ಹೊರೆ ಆಗಬಾರದೆಂದು ಕೇಂದ್ರ ಸರ್ಕಾರ ತನ್ನ ಆದಾಯದ ಮೂಲವನ್ನು ಬಿಟ್ಟುಕೊಟ್ಟಿದೆ. ಇದರ ಲಾಭ ನೇರ ಗ್ರಾಹಕರಿಗೆ ಸಿಗುವಂತಾಗಬೇಕು. ಹಳೆಯ ದರದಲ್ಲೆ ಮಾರಾಟ ಮಾಡಿ ಮಧ್ಯವರ್ತಿಗಳು ಲಾಭ ಮಾಡಿಕೊಳ್ಳಬಾರದು ಎಂಬ ಕಾರಣಕ್ಕೆ ದರದ ಮೇಲೆ ನಿಗಾ ವಹಿಸುವಂತೆ ರಾಜ್ಯ ಸರ್ಕಾರಗಳಿಗೆ ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣೆ ಇಲಾಖೆ(ಡಿಎಫ್ಪಿಡಿ) ಅನೇಕ ಬಾರಿ ಸೂಚನೆ ನೀಡಿದೆ.
ಕರ್ನಾಟಕದಲ್ಲಿ ಕಾಳುಗಳ ದಾಸ್ತಾನಿನ ಮೇಲೆ ಎರಡು ತಿಂಗಳ ಹಿಂದೆ ಮಿತಿ ವಿಧಿಸಲಾಗಿದ್ದು, ಅ.30ರವರೆಗೆ ಜಾರಿಯಲ್ಲಿದೆ. ಅಡುಗೆ ಎಣ್ಣೆ ಮೇಲೆ ಮಿತಿ ವಿಧಿಸುವ ಕುರಿತು ಶೀಘ್ರದಲ್ಲೆ ನಿರ್ಧಾರ ಮಾಡಲಾಗುತ್ತದೆ.
| ಶಮ್ಲಾ ಇಕ್ಬಾಲ್ ಆಹಾರ ಇಲಾಖೆ ಆಯುಕ್ತೆ
ದಾಸ್ತಾನಿಗೆ ಮಿತಿ ವಿಧಿಸಿ: ಕೆಲವು ದಾಸ್ತಾನುದಾರರು ಹಾಗೂ ಡೀಲರ್ಗಳು ಈಗಿನಿಂದಲೇ ಯಥೇಚ್ಛ ದಾಸ್ತಾನು ಮಾಡಿಕೊಂಡು ಕೃತಕ ಅಭಾವ ಸೃಷ್ಟಿಸಬಹುದು. ಹಬ್ಬದ ಸಮಯದಲ್ಲಿ ಜನರಿಗೆ ಹೆಚ್ಚು ಅಡುಗೆ ಎಣ್ಣೆ ಅವಶ್ಯಕತೆ ಇದ್ದಾಗ ಮನಬಂದಂತೆ ದರ ಹೆಚ್ಚಿಸುವ ಸಾಧ್ಯತೆ ಇದೆ. ಆಮದು ಸುಂಕ ಕಡಿತದ ಲಾಭ ನೇರವಾಗಿ ಜನರಿಗೆ ಲಭ್ಯವಾಗಬೇಕಾದರೆ ರಿಫೈನರ್ಗಳು, ಮಿಲ್ಲರ್ಗಳು, ಸಗಟು ಮಾರಾಟಗಾರರು, ಸ್ಟಾಕಿಸ್ಟ್ಗಳು ಮುಂದಿನ ಎರಡು ತಿಂಗಳಿಗಿಂತ ಹೆಚ್ಚಿನ ಅವಧಿಗೆ ಬೇಕಾದಷ್ಟು ದಾಸ್ತಾನು ಮಾಡಿಕೊಳ್ಳದಂತೆ ಮಿತಿ ವಿಧಿಸಲು ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಿಗೆ ತಿಳಿಸಿದೆ.
ಉತ್ತರ ಪ್ರದೇಶ ಮೊದಲ ರಾಜ್ಯ: ದಾಸ್ತಾನು ಮಿತಿ ವಿಧಿಸುವಂತೆ ಕರ್ನಾಟಕವೂ ಸೇರಿ ಎಲ್ಲ ರಾಜ್ಯಗಳಿಗೆ ಅ.8, ಅ.12 ಹಾಗೂ ಅ.22ರಂದು ಸತತವಾಗಿ ಪತ್ರ ಬರೆಯಲಾಗಿದೆ. ಈ ಪೈಕಿ ಅ.12ರಂದು ಉತ್ತರ ಪ್ರದೇಶ ಮಿತಿಯನ್ನು ವಿಧಿಸಿ ಆದೇಶಿಸಿದೆ. ರಾಜಸ್ಥಾನ, ಗುಜರಾತ್, ಹರಿಯಾಣ ರಾಜ್ಯಗಳು ಮಿತಿ ವಿಧಿಸಲು ಪ್ರಸ್ತಾವನೆ ಸಲ್ಲಿಸಿವೆ. ಮಹಾರಾಷ್ಟ್ರ, ಒಡಿಶಾ, ಕೇರಳ ಮುಂತಾದ ರಾಜ್ಯಗಳು ಪ್ರಕ್ರಿಯೆ ಆರಂಭಿಸಿವೆ. ಆದರೆ ಕರ್ನಾಟಕ ಮಾತ್ರ ಇನ್ನೂ ಇತ್ತ ಗಮನ ನೀಡಿಲ್ಲ.
ಕೇಂದ್ರ ಆಹಾರ ಸಚಿವಾಲಯ ಸಭೆ: ಖಾದ್ಯ ತೈಲ ದಾಸ್ತಾನು ಮಿತಿ ಆದೇಶ ಜಾರಿ ಬಗ್ಗೆ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಕೈಗೊಂಡಿರುವ ಕ್ರಮ ಕುರಿತಂತೆ ಕೇಂದ್ರ ಆಹಾರ ಮತ್ತು ಸಾರ್ವಜನಿಕ ಪೂರೈಕೆ ಸಚಿವಾಲಯ ಮಂಗಳವಾರ ಪರಿಶೀಲನಾ ಸಭೆ ನಡೆಸಿದೆ. ಉತ್ತರ ಪ್ರದೇಶ ಸರ್ಕಾರ ಮಿತಿ ನಿಗದಿ ಮಾಡಿ ಅಧಿಸೂಚನೆ ಹೊರಡಿಸಿದೆ. ಹರಿಯಾಣ, ರಾಜಸ್ಥಾನ, ಗುಜರಾತ್ ಸರ್ಕಾರಗಳು ಮಿತಿಯ ನಿಗದಿಯನ್ನು ಅಂತಿಮಗೊಳಿಸುತ್ತಿವೆ. ಇನ್ನೂ 9 ರಾಜ್ಯಗಳು ಈ ಪ್ರಕ್ರಿಯೆಯನ್ನು ಶುರುಮಾಡಿವೆ ಎಂದು ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣಾ ಕಾರ್ಯದರ್ಶಿ ಸುಧಾಂಶು ಪಾಂಡೆ ಹೇಳಿದ್ದಾರೆ. ಮುಂದಿನ ವರ್ಷ ಮಾರ್ಚ್ವರೆಗೆ ಮಿತಿ ವಿಧಿಸಲು ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಬೇಡಿಕೆ ಮತ್ತು ಬಳಕೆಯ ಪ್ರಮಾಣಕ್ಕೆ ಅನುಸಾರ ಈ ಮಿತಿಯನ್ನು ರಾಜ್ಯ ಸರ್ಕಾರಗಳು ನಿರ್ಧರಿಸಲಿವೆ.