ನ್ಯೂಸ್

ಅಕ್ರಮ ಹಣ ವರ್ಗಾವಣೆ ಆರೋಪ​: ಸೋನಿಯಾ ಗಾಂಧಿ, ರಾಹುಲ್​ ಗಾಂಧಿಗೆ ಇಡಿ ನೋಟಿಸ್​

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದ ಅಡಿಯಲ್ಲಿ ಕಾಂಗ್ರೆಸ್​ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ವಯನಾಡು ಸಂಸದ ರಾಹುಲ್​ ಗಾಂಧಿಗೆ ಜಾರಿ ನಿರ್ದೇಶನಾಲಯ (ಇಡಿ) ನೋಟಿಸ್​ ನೀಡಿದೆ ಎಂದು ಕಾಂಗ್ರೆಸ್​ ನಾಯಕ ರಣದೀಪ್​ ಸುರ್ಜೇವಾಲ ತಿಳಿಸಿದ್ದಾರೆ.

ಜೂನ್​ 8ರಂದು ವಿಚಾರಣೆಗೆ ಹಾಜರಾಗುವಂತೆ ಸೋನಿಯಾ ಗಾಂಧಿ ಹಾಗೂ ರಾಹುಲ್​ ಗಾಂಧಿಗೆ ಇಡಿ ಸಮನ್ಸ್​ ನೀಡಿದೆ ಎಂದು ಕಾಂಗ್ರೆಸ್​ ನಾಯಕ ಅಭಿಷೇಕ್​ ಮನು ಸಿಂಗ್ವಿ ಕೂಡ ಮಾಹಿತಿ ತಿಳಿಸಿದ್ದಾರೆ.

ಸೋನಿಯಾ ಗಾಂಧಿ ಅವರು ವಿಚಾರಣೆಗೆ ಖಂಡಿತವಾಗಿ ಹಾಜರಾಗಲಿದ್ದಾರೆ. ಆದರೆ, ರಾಹುಲ್​ ಅವರು ವಿದೇಶ ಪ್ರವಾಸದಲ್ಲಿದ್ದಾರೆ. ಜೂನ್​ 8ರೊಳಗೆ ರಾಹುಲ್​ ಬಂದರೆ, ಅವರು ಕೂಡ ವಿಚಾರಣೆ ಎದುರಿಸಲಿದ್ದಾರೆ. ಬರಲು ಸಾಧ್ಯವಾಗದಿದ್ದರೆ, ಸಮಯ ಬೇಕಾಗುತ್ತದೆ ಎಂದು ಸಿಂಗ್ವಿ ತಿಳಿಸಿದ್ದಾರೆ. ಅಲ್ಲದೆ, ಅಕ್ರಮ ಹಣ ವರ್ಗಾವಣೆ ಸಂಬಂಧ ಯಾವುದೇ ಸಾಕ್ಷಿಗಳು ಇಲ್ಲ ಎಂದಿದ್ದಾರೆ.

ಇಡಿ ಅಧಿಕಾರಿಯೊಬ್ಬರು ಮಾತನಾಡಿದ್ದು, ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ಕ್ರಿಮಿನಲ್ ಸೆಕ್ಷನ್‌ಗಳ ಅಡಿಯಲ್ಲಿ ಹೇಳಿಕೆ ಪಡೆದುಕೊಳ್ಳಲು ನೋಟಿಸ್​ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಪ್ರತಿಹಂತದಲ್ಲೂ ನ್ಯಾಷನಲ್​ ಹೆರಾಲ್ಡ್​ ಪ್ರಕರಣದಲ್ಲಿ ಟಾರ್ಗೆಟ್​ ಮಾಡಲಾಗುತ್ತಿದೆ. ಬಿಜೆಪಿ ಅವರ ಹಿಂದಿನವರು ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಪಾತ್ರ ವಹಿಸದ ಕಾರಣ ಬಿಜೆಪಿ ಸ್ವಾತಂತ್ರ್ಯ ಹೋರಾಟಗಾರರನ್ನು ಅವಮಾನಿಸಿದೆ ಮತ್ತು ಅಗೌರವಿಸಿದೆ. 1942ರಲ್ಲಿ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಆರಂಭವಾಯಿತು. ಆ ಸಮಯದಲ್ಲಿ ಬ್ರಿಟಿಷರು ಅದನ್ನು ಹತ್ತಿಕ್ಕಲು ಯತ್ನಿಸಿದ್ದರು. ಅದೇ ಹಾದಿಯನ್ನು ಇಂದು ಮೋದಿ ಸರ್ಕಾರ ಇಡಿ ಬಳಸಿಕೊಂಡು ಮಾಡುತ್ತಿದೆ ಎಂದಿದ್ದಾರೆ.