ಬೆಂಗಳೂರು: ಮುಡಾ ನಿವೇಶನಗಳ ಹಂಚಿಕೆಯಲ್ಲಿ ಅಕ್ರಮವಾಗಿದೆ ಎಂದು ಬಿಜೆಪಿ ಆರೋಪ, ನಡೆಸಿದ ಹೋರಾಟಕ್ಕೆ ಜಾರಿ ನಿರ್ದೇಶನಾಲಯದ ವರದಿ ಪುಷ್ಠಿ ನೀಡಿದೆ ಎಂದು ಮಾಜಿ ಸಿಎಂ ಡಿ.ವಿ.ಸದಾನಂದಗೌಡ ಹೇಳಿದರು.
ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, ಈ ಪ್ರಕರಣದ ಬಗ್ಗೆ ಸದ್ಯಕ್ಕೆ ವಿಚಾರಣೆ ನಡೆಸುತ್ತಿರುವ ಕೋರ್ಟ್ ತೀರ್ಮಾನಿಸಲಿದ್ದು, ರಾಜಕೀಯ ಪಕ್ಷಗಳು ಅಕ್ರಮವಾಗಿದೆ ಅಥವಾ ಇಲ್ಲವೆಂದು ತೀರ್ಮಾನಿಸಲಾಗದು ಎಂದರು.
ಹಾಸನದಲ್ಲಿ ಕಾಂಗ್ರೆಸ್‌ನವರು ಈಗ ಸಮಾವೇಶ ಏಕೆ ಮಾಡುತ್ತಿದ್ದಾರೋ ಗೊತ್ತಿಲ್ಲ. ಆದರೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಜಗಳಕ್ಕೆ ಅವರ ಆಂತರಿಕ ವೇದಿಕೆಗಳನ್ನೇ ಬಳಸಿಕೊಂಡಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ ಕೂಡ ಪ್ರಬಲವಾಗಿಲ್ಲ. ಹಾಸನ ಸಮಾವೇಶವು ನಮಗೊಂದು ಟೆಸ್ಟ್ ಡೋಸ್ ಆಗಬಹುದು ಎಂದು ಡಿ.ವಿ.ಸದಾನಂದಗೌಡ ವಿಶ್ಲೇಷಿಸಿದರು.
ರಾಜ್ಯ ಬಿಜೆಪಿ ಗೊಂದಲ ನಿವಾರಣೆಗೆ ವರಿಷ್ಠರು ಮಧ್ಯೆ ಪ್ರವೇಶಿಸಿರುವ ಕಾರಣ ಶೀಘ್ರವೇ ನಿವಾರಣೆಯಾಗುವ ವಿಶ್ವಾಸವಿದೆ. ಪಕ್ಷದ ರಾಜ್ಯಾಧ್ಯಕ್ಷರು, ವಿಧಾನಸಭೆ ಪ್ರತಿಪಕ್ಷ ನಾಯಕರನ್ನು ನೇಮಿಸಿದವರು ವರಿಷ್ಠರು.
ಬದಲಾವಣೆ ಬೇಕು, ಬೇಡ ಎನ್ನುವ ಕೂಗಿನ ಬಗ್ಗೆ ವರಿಷ್ಠರು ಕೇಳಿಸಿಕೊಂಡು ಪಕ್ಷಕ್ಕೆ ಹಿತಕರ, ಸಂಘಟನೆ ಬಲವರ್ಧನೆಗೆ ಪೂರಕವಾದ ನಿರ್ಧಾರಕ್ಕೆ ಬರುತ್ತಾರೆ. ಯತ್ನಾಳ್ ಮತ್ತವರ ತಂಡ ಬೀದಿಗೆ ಬಂದದ್ದು ಎಷ್ಟು ತಪ್ಪೋ, ಮಾಜಿ ಸಚಿವ ರೇಣುಕಾಚಾರ್ಯ ಮತ್ತವರ ತಂಡ ಬೀದಿಗೆ ಇಳಿದಿರುವುದು ಅಷ್ಟೇ ತಪ್ಪು ಎಂದರು.
ವಕ್ಫ್ ಸಮಸ್ಯೆ ಬಗ್ಗೆ ಯಾರೇ ಮಾಡಿರಲಿ ಪಕ್ಷದಿಂದ ಈಗಾಗಲೇ ಹೋರಾಟವಾಗಿದೆ. ಪಕ್ಷದ ರಾಜ್ಯಾಧ್ಯಕ್ಷರು ಮತ್ತೆ ಹೋರಾಟ ಮಾಡುವ ಅಗತ್ಯವಿದ್ದಿಲ್ಲ. ಒಂದೇ ವಿಷಯಕ್ಕೆ ಎರಡು ಹೋರಾಟಗಳು ಮುಜುಗರ ಉಂಟು ಮಾಡುತ್ತದೆ ಎಂಬ ಕಾರಣಕ್ಕೆ ಜಿಲ್ಲಾವಾರು ಪ್ರವಾಸದ ತಂಡದಿಂದ ದೂರ ಉಳಿದಿರುವುದಾಗಿ ಡಿ.ವಿ.ಸದಾನಂದಗೌಡ ಸ್ಪಷ್ಟಪಡಿಸಿದರು.