ನ್ಯೂಸ್

ಭೂಗತ ಪಾತಕಿ ರವಿ ಪೂಜಾರಿಗೆ ಶಾಕ್​ ನೀಡಲು ಇಡಿ ಸಿದ್ಧತೆ

ಬೆಂಗಳೂರು: ಭೂಗತ ಪಾತಕಿ ರವಿ ಪೂಜಾರಿ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್​ಎ)ಯಡಿ ಜಾರಿ ನಿರ್ದೇಶನಾಲಯ (ಇಡಿ) ಇಸಿಐಆರ್ ದಾಖಲಿಸಿದೆ. ಆಫ್ರಿಕಾದ ಸೆನಗಲ್​ನಲ್ಲಿ ನೂರಾರು ಕೋಟಿ ರೂ. ಮೌಲ್ಯದ ಆಸ್ತಿ ಮಾಡಿರುವ ವಿಚಾರವನ್ನು ಈಗಾಗಲೇ ಪತ್ತೆಹಚ್ಚಿರುವ ಇಡಿ ಅಧಿಕಾರಿಗಳ ತಂಡ, ಮುಟ್ಟುಗೋಲು ಹಾಕಿಕೊಳ್ಳಲು ಸಿದ್ಧತೆ ನಡೆಸಿದ್ದಾರೆ.

26ಕ್ಕೂ ಅಧಿಕ ವರ್ಷಗಳ ಕಾಲ ಭೂಗತ ಜಗತ್ತನ್ನು ಆಳಿ ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಂಬಿ ಎಣಿಸುತ್ತಿರುವ ಗ್ಯಾಂಗ್​ಸ್ಟರ್ ರವಿ ಪೂಜಾರಿ ಸೆನೆಗಲ್​ನಲ್ಲಿ ಕೋಟ್ಯಂತರ ರೂ. ಮೌಲ್ಯದ ಅಕ್ರಮ ಆಸ್ತಿ ಹೊಂದಿದ್ದಾನೆ. ಈತನ ವಿರುದ್ಧ ಬೆಂಗಳೂರಿನಲ್ಲೇ 46 ಎಫ್​ಐಆರ್ ದಾಖಲಾಗಿದ್ದು, ಇದರಲ್ಲಿ ಕೊಲೆ, ಕೊಲೆಯತ್ನ, ಸುಲಿಗೆ, ಹಪ್ತಾ ವಸೂಲಿ, ಬೆದರಿಕೆಯಂತಹ 20 ಪ್ರಕರಣಗಳಾದರೆ, ಇನ್ನುಳಿದ 26 ಕೇಸ್​ಗಳಲ್ಲಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಅಪರಾಧ ಎಸಗಿರುವುದು ತನಿಖೆಯಲ್ಲಿ ದೃಢಪಟ್ಟಿದೆ ಎಂದು ಇಡಿ ಉನ್ನತ ಮೂಲಗಳು ತಿಳಿಸಿವೆ.

ಅಕ್ರಮ ಹಣ ಉದ್ಯಮಕ್ಕೆ ಬಳಕೆ: ರವಿ ಪೂಜಾರಿ ಭಾರತದಲ್ಲಿ ನಡೆಸಿದ ಅಕ್ರಮ ಚಟುವಟಿಕೆಗಳಲ್ಲಿ ಗಳಿಸಿದ ನೂರಾರು ಕೋಟಿ ರೂ.ಗಳನ್ನು ಆಫ್ರಿಕಾದ ಸೆನೆಗಲ್​ನಲ್ಲಿ ನಡೆಸುತ್ತಿದ್ದ ಉದ್ಯಮಗಳಲ್ಲಿ ಹೂಡಿಕೆ ಮಾಡಿರುವ ಅಂಶ ಇಡಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಆಫ್ರಿಕಾದ ಬುರ್ಕೀನಾ ಫಾಸೊದಲ್ಲಿರುವ ‘ಯುನೈಟೆಡ್ ಬ್ಯಾಂಕ್ ಆಫ್ ಅಮೇರಿಕಾ’ ಬ್ಯಾಂಕ್​ನಲ್ಲಿ ಖಾತೆ ಹೊಂದಿದ್ದ ಪೂಜಾರಿ, ಉದ್ಯಮದಲ್ಲಿ ಬಂದ ಲಾಭಾಂಶವನ್ನು ಈ ಬ್ಯಾಂಕ್​ನಲ್ಲೇ ಹೂಡಿಕೆ ಮಾಡುತ್ತಿದ್ದ. ಬುರ್ಕೀನಾ ಫಾಸೊದ ಓಗ ದೋಗು ಪ್ರದೇಶದಲ್ಲಿದ್ದ ಗುಥಿಯಾರ್ ಎಲೆಕ್ಟ್ರಾನಿಕ್ಸ್, ಸೆನೆಗಲ್​ನ ರಾಜಧಾನಿ ದಖಾರ್​ನಲ್ಲಿ ಆಪ್ತನ ಜತೆ ಪಾಲುದಾರಿಕೆಯಲ್ಲಿ ನಡೆಸುತ್ತಿದ್ದ ಮಹಾರಾಜಾ ಇಂಡಿಯನ್ ಕ್ಯಾಸಿನೋ ಬಾರ್ ಆಂಡ್ ರೆಸ್ಟೋರೆಂಟ್, ಓಗ ದೋಗುನಲ್ಲಿ ನಡೆಸುತ್ತಿದ್ದ ನಮಸ್ತೆ ಇಂಡಿಯಾ, ದಖಾರ್​ನ ಆಂಬಿಯೆನ್ಸ್ ಸೆಲೂನ್​ಗಳು ಹಾಗೂ ಈ ಉದ್ಯಮದಲ್ಲಿ ಬಂದ ನೂರಾರು ಕೋಟಿ ರೂ. ಆದಾಯವನ್ನು ವಶಕ್ಕೆ ಪಡೆದುಕೊಳ್ಳಲು ಇಡಿ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಸೆನೆಗಲ್ ಮಾತ್ರವಲ್ಲದೇ ಇತರ ಕೆಲ ದೇಶಗಳಲ್ಲೂ ಈತ ಆಸ್ತಿ ಹೂಡಿಕೆ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಭಾರತದಲ್ಲೂ ಬೇರೆ ವ್ಯಕ್ತಿಗಳ ಹೆಸರಿನಲ್ಲಿ ಕೋಟ್ಯಂತರ ಮೌಲ್ಯದ ಬೇನಾಮಿ ಆಸ್ತಿ ಹೊಂದಿರುವ ಬಗ್ಗೆ ಸುಳಿವು ಸಿಕ್ಕಿದ್ದು, ಸಾಕ್ಷ್ಯ ಕಲೆ ಹಾಕಲಾಗುತ್ತಿದೆ ಎಂದು ಇಡಿ ಉನ್ನತ ಮೂಲಗಳಿಂದ ತಿಳಿದುಬಂದಿದೆ.

ಇಡಿ ವಶಕ್ಕೆ ರವಿ ಪೂಜಾರಿ?: ಈಗಾಗಲೇ ಎಸ್​ಐಟಿ ಅಧಿಕಾರಿಗಳಿಂದ ರವಿ ಪೂಜಾರಿ ಬಗ್ಗೆ ಮಾಹಿತಿ ಕಲೆ ಹಾಕಿರುವ ಇಡಿ ಅಧಿಕಾರಿಗಳು, ಆತನನ್ನು 15 ದಿನಗಳ ಕಾಲ ವಶಕ್ಕೆ ಪಡೆದು ವಿಚಾರಣೆ ನಡೆಸಲು ತಯಾರಿ ನಡೆಸಿದ್ದಾರೆ. ಕೋರ್ಟ್ ಕಲಾಪಗಳು ಪುನರಾರಂಭಗೊಂಡ ಕೂಡಲೇ ಈ ಪ್ರಕ್ರಿಯೆ ನಡೆಯಲಿದೆ. ಈತನ ಪತ್ನಿ ಪದ್ಮಾ ಪೂಜಾರಿ ಹಾಗೂ ಮಕ್ಕಳ ಹೆಸರಲ್ಲೂ ವಿದೇಶಗಳಲ್ಲಿ ಕೋಟ್ಯಂತರ ರೂ. ಗಳನ್ನು ಹೂಡಿಕೆ ಮಾಡಿರುವ ಮಾಹಿತಿಯನ್ನು ಇ.ಡಿ. ಕಲೆ ಹಾಕಿದೆ.

ರಾಯಭಾರಿ, ಅಧಿಕಾರಿಗಳ ಜತೆ ಮಾತುಕತೆ: ರವಿ ಪೂಜಾರಿ ಅಕ್ರಮ ಆಸ್ತಿ ಜಪ್ತಿ ಮಾಡಿ ಅದನ್ನು ಚರಾಸ್ತಿ ರೂಪದಲ್ಲಿ ಭಾರತಕ್ಕೆ ತರುವ ಕುರಿತು ರಾಯಭಾರಿ ಕಚೇರಿ ಅಧಿಕಾರಿಗಳ ಜತೆ ಸದ್ಯದಲ್ಲೆ ಇಡಿ ಮಾತುಕತೆ ನಡೆಸಲು ಮುಂದಾಗಿದೆ. ಎರಡು ತಿಂಗಳೊಳಗೆ ಈ ಪ್ರಕ್ರಿಯೆ ಆರಂಭಿಸಲು ಚಿಂತೆನ ನಡೆಸಲಾಗಿದೆ. ವಿಚಾರಣೆ ಬಳಿಕ ಈತನ ಬಳಿಯಿರುವ ಆಸ್ತಿಗಳ ವಿವರ ಸಿಗಲಿದ್ದು, ಅದನ್ನು ಮುಟ್ಟುಗೋಲು ಹಾಕಲು ಈಗಾಗಲೇ ಇಡಿ ವಿಶೇಷ ತಂಡ ರಚಿಸಿದೆ. ಈತನ ವಿರುದ್ಧದ 26 ಎಫ್​ಐಆರ್​ಗಳನ್ನು ಸೂಕ್ತ ರೀತಿಯಲ್ಲಿ ಪರಿಶೀಲಿಸಿದ ಬಳಿಕ ಇಸಿಐಆರ್ ದಾಖಲಿಸಿಕೊಳ್ಳಲಾಗಿದೆ ಎಂದು ಇಡಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪೂಜಾರಿಗಾಗಿ ಕಾಯುತ್ತಿರುವ ಮುಂಬೈ ಪೊಲೀಸರು

ಪಾತಕಿ ಪೂಜಾರಿ ವಿರುದ್ಧ ಮುಂಬೈನಲ್ಲಿ 120ಕ್ಕೂ ಹೆಚ್ಚು ಪ್ರಕರಣಗಳಿದ್ದು, ಮುಂಬೈ ಪೊಲೀಸರು ಈತನಿಗಾಗಿ ಕಾದು ಕುಳಿತಿದ್ದಾರೆ. ಇಡಿ ವಶಕ್ಕೆ ಪಡೆದು ವಿಚಾರಣೆ ನಡೆಸಿದ ಕೂಡಲೇ ಮುಂಬೈ ಪೊಲೀಸರು ತಮ್ಮ ವಶಕ್ಕೆ ಪಡೆಯಲು ಸಿದ್ಧತೆ ನಡೆಸುವ ಸಾಧ್ಯತೆಗಳಿವೆ. ರವಿ ಪೂಜಾರಿ ವಿರುದ್ಧ ದೇಶದ ವಿವಿಧೆಡೆ ಹತ್ತಾರು ವರ್ಷಗಳ ಹಿಂದೆ ದಾಖಲಾಗಿ ನಾಮಾವಶೇಷವಾಗಿದ್ದ ಹಲವು ಪ್ರಕರಣಗಳಿಗೆ ಇದೀಗ ಮರುಜೀವ ಬಂದಿದೆ.

| ಅವಿನಾಶ ಮೂಡಂಬಿಕಾನ