ಆನ್ಲೈನ್ ಬೆಟ್ಟಿಂಗ್ ಹೆಸರಿನಲ್ಲಿ ಜನರನ್ನು ವಂಚಿಸುತ್ತಿದ್ದ ನಕಲಿ ಕಂಪನಿಗಳಿಗೆ ಬಿಸಿ ಮುಟ್ಟಿಸಿರುವ ಜಾರಿ ನಿರ್ದೇಶನಾಲಯ(ED) 5.87 ಕೋಟಿ ರೂ. ಮೊತ್ತದ ಆಸ್ತಿ ಮುಟ್ಟುಗೋಲು ಹಾಕಿದೆ. ಈ ಮೂಲಕ ಜೂಜಾಟದ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಇ.ಡಿ ನಿರ್ಣಾಯಕ ಹೆಜ್ಜೆ ಇಟ್ಟಿದೆ.
ಅಕ್ರಮ ಆನ್‌ಲೈನ್ ಜೂಜು, ಬೆಟ್ಟಿಂಗ್ ಮತ್ತು ಅನುಮಾನಾಸ್ಪದ ಚಟುವಟಿಕೆಗಳಲ್ಲಿ ಹಲವಾರು ಕಂಪನಿಗಳು ತೊಡಗಿಸಿಕೊಂಡಿವೆ ಎಂದು ಆರೋಪಿಸಿ ಸರಕು ಮತ್ತು ಸೇವಾ ತೆರಿಗೆ ಗುಪ್ತಚರ ನಿರ್ದೇಶನಾಲಯ (DGGI) ಕಚೇರಿಯಿಂದ ದೂರು ದಾಖಲಾಗಿತ್ತು.
ಈ ದೂರಿನನ್ವಯ ಆನ್‌ಲೈನ್ ಬೆಟ್ಟಿಂಗ್ ಹೆಸರಲ್ಲಿ ಜನರನ್ನು ವಂಚಿಸಿದ್ದ ನಕಲಿ ಕಂಪನಿಗಳು ಮತ್ತು ಆ ಕಂಪನಿಗಳಿಗೆ ಸೇರಿದ ವ್ಯಕ್ತಿಗಳ ಬ್ಯಾಂಕ್ ಖಾತೆಯಲ್ಲಿನ 5.87 ಕೋಟಿ ರೂ. ಚರಾಸ್ತಿಯನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದಾರೆ.
ಗುಪ್ತಚರ ನಿರ್ದೇಶನಾಲಯದ ಮಹಾ ನಿರ್ದೇಶಕರ ಕಚೇರಿಯಿಂದ ಬಂದ ದೂರಿನನ್ವಯ ಬೆಂಗಳೂರಿನ ವಿವೇಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಸಂಬಂಧ 2002ರ ಹಣ ಅಕ್ರಮ ವರ್ಗಾವಣೆ ತಡೆ ಕಾಯಿದೆಯಡಿ (PMLA) ವಂಚಕ ಕಂಪೆನಿಗಳ ವಿರುದ್ಧ ತನಿಖೆ ನಡೆಸಲಾಗಿತ್ತು ಎಂದು ಇ.ಡಿ. ಅಧಿಕಾರಿಗಳು ತಿಳಿಸಿದ್ದಾರೆ.