ನ್ಯೂಸ್

ದಲಿತರಿಗೆ ಮೀಸಲಾಗಿದ್ದ ಜಾಗದಲ್ಲಿ 9 ಅಂತಸ್ತಿನ ಕಟ್ಟಡ ನಿರ್ಮಿಸಿದ ಗಾಂಧಿ ಕುಟುಂಬದ ಸಂಸ್ಥೆ; ಇಡಿಯಿಂದ ವಶಕ್ಕೆ

ನವದೆಹಲಿ: ಗಾಂಧಿ ಕುಟುಂಬಕ್ಕೆ ಭಾರಿ ಆಘಾತವನ್ನುಂಟು ಮಾಡಿರುವ ಬೆಳವಣಿಗೆಯೊಂದರಲ್ಲಿ ಜಾರಿ ನಿರ್ದೇಶನಾಲಯ ಮುಂಬೈನಲ್ಲಿ ಕೋಟ್ಯಂತರ ರೂ. ಮೌಲ್ಯದ ಬೃಹತ್​ ಕಟ್ಟಡವೊಂದನ್ನು ವಶಕ್ಕೆ ಪಡೆದಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯನ್ವಯ ಬೃಹತ್​ ಆಸ್ತಿಯ ಒಂದು ಭಾಗ ಅಂದಾಜು 16.38 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದೆ.

ದಾಖಲೆಗಳ ಪ್ರಕಾರ 3,500 ಚದರ ಮೀಟರ್​ ವಿಸ್ತೀರ್ಣದ ಜಾಗ ದಲಿತರ ಹಾಸ್ಟೆಲ್​ ನಿರ್ಮಾಣಕ್ಕಾಗಿ ಮೀಸಲಾಗಿರಿಸಿತ್ತು. ಬಳಿಕ ಇದನ್ನು 1983ರಲ್ಲಿ ಅಸೋಸಿಯೇಟೆಡ್​ ಜರ್ನಲ್ಸ್​ ಲಿಮಿಟೆಡ್​ ಸಂಸ್ಥೆ ಭಾರಿ ಕಡಿಮೆ ಬೆಲೆಯಲ್ಲಿ ಖರೀದಿಸಿತ್ತು.

ಮುಂಬೈನ ಬಾಂದ್ರಾ ಪೂರ್ವದ ಐಷಾರಾಮಿ ಪ್ರದೇಶದಲ್ಲಿರುವ ಈ ಭೂಮಿಯ ಪ್ರಸ್ತುತ ಮಾರುಕಟ್ಟೆ ಮೌಲ್ಯ 262 ಕೋಟಿ ರೂ.ಗೂ ಅಧಿಕ ಎಂದು ಅಂದಾಜಿಸಲಾಗಿದೆ. ದಶಕಗಳವರೆಗೆ ಈ ಭೂಮಿಯಲ್ಲಿ ಯಾವುದೇ 2000 ದಲ್ಲಿ 9 ಅಂತಸ್ತುಗಳ ಬೃಹತ್​ ಕಟ್ಟಡವನ್ನು ಕಟ್ಟಲಾಗಿದೆ. ಈ ಕಟ್ಟಡವನ್ನೇ ಜಾರಿ ನಿರ್ದೇಶನಾಲಯ ತನ್ನ ವಶಕ್ಕೆ ಪಡೆದುಕೊಂಡಿದೆ.

ಕಟ್ಟಡ ನಿರ್ಮಿಸುವಲ್ಲಿಯೂ ಹಲವು ನಿಯಮಗಳ ಉಲ್ಲಂಘನೆ ಮಾಡಲಾಗಿದೆ. 20 ಸಾವಿರ ಚದರಡಿಯ ಕಟ್ಟಡ ನಿರ್ಮಿಸಬೇಕಿದ್ದರೂ 80 ಸಾವಿರ ಚದರಡಿಯ ಕಟ್ಟಡ ಇಲ್ಲಿ ತಲೆ ಎತ್ತಿದೆ.

ಸರ್ಕಾರದಿಂದ ಪಡೆದ ಜಾಗದಲ್ಲಿ ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸಿದರೆ, ಅದರ ಶೇ.50 ಆದಾಯವನ್ನು ಸರ್ಕಾರಕ್ಕೆ ನೀಡಬೇಕು. ಆದರೆ, ಈ ಪ್ರಕರಣದಲ್ಲಿ ಗಾಂಧಿ ಪರಿವಾರದ ಅಸೋಸಿಯೇಟೆಡ್​ ಜರ್ನಲ್ಸ್​ ಶೇ.70 ಹಣ ಉಳಿಸಿಕೊಂಡು ಸರ್ಕಾರಕ್ಕೆ ಕೇವಲ ಶೇ.30 ಮಾತ್ರ ಪಾವತಿಸುವ ಒಪ್ಪಂದ ಮಾಡಿಕೊಂಡಿದೆ ಎಂದು ಹೇಳಲಾಗಿದೆ. ಎಜೆಎಲ್​ಗೆ ಸದ್ಯ ಹಿರಿಯ ಕಾಂಗ್ರೆಸ್​ ಮುಖಂಡ ಮೋತಿಲಾಲ್​ ವೊಹ್ರಾ ಅಧ್ಯಕ್ಷರಾಗಿದ್ದರೆ, ಗಾಂಧಿ ಕುಟುಂಬದವರು ಸದಸ್ಯರಾಗಿದ್ದಾರೆ. ಒಟ್ಟಾರೆ, ಗಾಂಧಿ ಕುಟುಂಬ ಜಾರಿ ನಿರ್ದೇಶನಾಲಯದ ಕ್ರಮದಿಂದ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದಂತಾಗಿದೆ.