ಶಿವಮೊಗ್ಗ: ಜಾಗತಿಕ ಮಟ್ಟದಲ್ಲಿ ಭಾರತ ಮೂರನೇ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲು ಹಣಕಾಸು ಸಂಸ್ಥೆಗಳ ಪಾತ್ರ ಮಹತ್ವದ್ದಾಗಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.
ಸಹ್ಯಾದ್ರಿ ಚಿಟ್ಸ್‌ನ ನೂತನ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಾಡುತ್ತಿರುವ ಪ್ರಯತ್ನಕ್ಕೆ ಸಣ್ಣ ಹಣಕಾಸು ಸಂಸ್ಥೆಗಳು ಮುಖ್ಯಪಾತ್ರ ವಹಿಸುತ್ತವೆ ಎಂದು ತಿಳಿಸಿದರು.
ಸಹ್ಯಾದ್ರಿ ಚಿಟ್ಸ್ ಸಂಸ್ಥೆಯು 27 ವರ್ಷಗಳಿಂದ ಶಿವಮೊಗ್ಗದಲ್ಲಿ ನೀಡುತ್ತಿರುವ ಸೇವೆ ಶ್ಲಾಘನೀಯ. ಜನರೊಂದಿಗೆ ಸಂಸ್ಥೆಯ ಬಾಂಧವ್ಯ, ಸಂಸ್ಥೆ ಗಳಿಸಿರುವ ನಂಬಿಕೆ ಉಲ್ಲೇಖಾರ್ಹ. ವಾರ್ಷಿಕ 80 ಕೋಟಿ ರೂ. ವಹಿವಾಟು ಹೊಂದಿರುವ ಸಂಸ್ಥೆಯು ಮುಂದೆ ನೂರಾರು ಜನಕ್ಕೆ ಉದ್ಯೋಗ ನೀಡಿ 500 ಕೋಟಿ ರೂ. ವಹಿವಾಟು ನಡೆಸಲಿ ಎಂದು ಆಶಿಸಿದರು.
ಸಿನಿಮಾ ನಟ ದಿಗಂತ್ ಮಾತನಾಡಿ, ಸಹ್ಯಾದ್ರಿ ಸಂಸ್ಥೆಯು 27 ವರ್ಷಗಳಿಂದ ನೀಡುತ್ತಿರುವ ಸೇವೆಯು ನೂರಾರು ವರ್ಷ ಮುನ್ನಡೆಯಲಿ ಎಂದು ಶುಭ ಹಾರೈಸಿದರು. ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ರಮೇಶ್ ಭಟ್ ಮಾತನಾಡಿ, ಸಂಸ್ಥೆ ನಡೆದು ಬಂದ ದಾರಿಯ ಬಗ್ಗೆ ವಿವರಿಸಿದರು.
ಶಾಸಕ ಎಸ್.ಎನ್.ಚನ್ನಬಸಪ್ಪ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್, ಪಾಲಿಕೆ ಮಾಜಿ ಸದಸ್ಯ ಎಚ್.ಸಿ.ಯೋಗೇಶ್, ಸಂಸ್ಥೆಯ ಮೂಲ ಸಂಸ್ಥಾಪಕ ಡಿ.ಎಲ್.ನಟರಾಜ್, ಮಾರ್ಕೆಟಿಂಗ್ ಡೈರೆಕ್ಟರ್ ಶಿವರಾಜ್ ಉಡುಗಣಿ, ಟಿ.ಎಸ್.ಬದರೀನಾಥ್, ನಿರ್ದೇಶಕ ಜಿ.ವಿಜಯಕುಮಾರ್ ಮುಂತಾದವರಿದ್ದರು. ನೂತನವಾಗಿ ಆರಂಭಗೊಂಡ ಒಂದು ಕೋಟಿ ರೂ. ಚೀಟಿಯ ಮೊದಲ ಅದೃಷ್ಟವಂತರನ್ನು ಇದೇ ಸಂದರ್ಭ ಆಯ್ಕೆ ಮಾಡಲಾಯಿತು.