ನವದೆಹಲಿ: ಕೇಂದ್ರ ಸರ್ಕಾರ ಏಕಾಏಕಿ ಲಾಕ್ ಡೌನ್ ಮಾಡಿದ್ದನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತೀವ್ರವಾಗಿ ಖಂಡಿಸಿದ್ದಾರೆ.
ಕರೊನಾ ವೈರಸ್ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಹೀಗೆ ಲಾಕ್ಡೌನ್ ಮಾಡಿದ್ದು ಸರಿಯಲ್ಲ. ಇದರಿಂದ ಜನರು ತೀವ್ರ ಗಾಬರಿ, ಗೊಂದಲಕ್ಕೀಡಾಗಿದೆ ಎಂದು ಹೇಳಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ರಾಹುಲ್ ಗಾಂಧಿ ಪತ್ರ ಬರೆದು ಕೆಲವು ಸಲಹೆಗಳನ್ನು ನೀಡಿದ್ದಾರೆ. ಲಾಕ್ಡೌನ್ನಿಂದ ಬಡವರ ಪರಿಸ್ಥಿತಿ ತೀರ ಹದಗೆಟ್ಟಿದೆ. ಜೀವನ ನಡೆಸುವುದೇ ದುಸ್ತರವಾಗಿದೆ. ಹಾಗಾಗಿ ಈ ಮಾರಣಾಂತಿಕ ರೋಗ ನಿಯಂತ್ರಣಕ್ಕೆ ಲಾಕ್ಡೌನ್ ಬಿಟ್ಟು ಬೇರೆ ಏನಾದರೂ ಕ್ರಮ ಕೈಗೊಳ್ಳಿ ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.
ಉಳಿದ ರಾಷ್ಟ್ರಗಳಂತೆ ಭಾರತ ಅಲ್ಲ. ನಮ್ಮ ದೇಶದ ಪರಿಸ್ಥಿತಿ ವಿಭಿನ್ನವಾಗಿದೆ. ಇಲ್ಲಿ ಲಾಕ್ಡೌನ್ ಮಾಡುವುದು ಸುಲಭವಲ್ಲ. ಹಾಗಾಗಿ ಬೇರೆ ಏನಾದರೂ ಮಾರ್ಗ ಕಂಡುಕೊಳ್ಳಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಭಾರತದಲ್ಲಿ ಅನೇಕ ಬಡ ಜನರು ತಮ್ಮ ದಿನಗೂಲಿ ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ. ಲಾಕ್ಡೌನ್ ಆದರೆ ಅವರೆಲ್ಲರೂ ಹೊಟ್ಟೆಗಿಲ್ಲದೆ ಕಷ್ಟಪಡಬೇಕಾಗುತ್ತದೆ. ಆರ್ಥಿಕ ಚಟುವಟಿಕೆ ಸ್ಥಗಿತಗೊಂಡರೆ ಕರೊನಾ ವೈರಸ್ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುತ್ತದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಈ ಮೂಲಕ ಬಡ ಜನರು ಹಸಿವಿನಿಂದ, ಹತಾಶೆಯಿಂದ ಸಾಯುವ ಪ್ರಮಾಣ ಹೆಚ್ಚಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಕಾರ್ಖಾನೆಗಳು, ಸಣ್ಣ ಉದ್ದಿಮೆಗಳು ಬಂದ್ ಆಗಿವೆ. 10, 000ಕ್ಕೂ ಅಧಿಕ ವಲಸೆ ಕಾರ್ಮಿಕರು ತಮ್ಮ ಮನೆಗಳತ್ತ ಧಾವಿಸುತ್ತಿದ್ದಾರೆ. ಅಂತವರಿಗೆ ಆಶ್ರಯ ಒದಗಿಸಬೇಕು. ಅವರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣ ಹಾಕಬೇಕು. ಮೂಲ ಸೌಕರ್ಯ ಒದಗಿಸಬೇಕು ಎಂದಿದ್ದಾರೆ. ಅದರೊಂದಿಗೆ ಹಲವು ಸಲಹೆಗಳನ್ನು ನೀಡಿದ್ದಾರೆ. (ಏಜೆನ್ಸೀಸ್)