ಜಯಪುರ: ಮೇಗುಂದಾ ಹೋಬಳಿಯ ಜಯಪುರ, ಹೇರೂರು, ಅಗಳಗಂಡಿ, ಗುಡ್ಡೇತೋಟ, ಅತ್ತಿಕುಡಿಗೆ, ಹಿರೇಗದ್ದೆ ಗ್ರಾಪಂ ವ್ಯಾಪ್ತಿಯಲ್ಲಿ ಗಣೇಶೋತ್ಸವವನ್ನು ವಿಜ್ರಂಭಣೆಯಿಂದ ಆಚರಿಸಲಾಯಿತು.
ಸಣ್ಣ ಊರುಗಳಲ್ಲಿ ಒಂದು ದಿನದ ಗಣೇಶೋತ್ಸವ ನಡೆದರೆ ದೊಡ್ಡ ಊರುಗಳಲ್ಲಿ ಮೂರರಿಂದ ಐದುದಿನಗಳ ವರೆಗೆ ಗಣೇಶೋತ್ಸವ ನಡೆಯಲಿದೆ. ಗಣೇಶೋತ್ಸವಗಳಲ್ಲಿ ಹಾಡುಗಾರಿಕೆ, ಹರಿಕಥೆ, ಯಕ್ಷಗಾನ, ಸಾಮಾಜಿಕ ಹಾಗೂ ಹಾಸ್ಯಮಯ ನಾಟಕಗಳು ಪ್ರದರ್ಶನವಾಗಲಿವೆ. ಕೆಲವು ಗ್ರಾಮಗಳಲ್ಲಿ ಸ್ಥಳೀಯ ಶಾಲಾ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಸಾಂಸ್ಕೃತಿಕ ಕಾರ್ಯಕ್ರಮ, ಗ್ರಾಮೀಣ ಕ್ರೀಡೆಗಳಾದ ಹಗ್ಗಜಗ್ಗಾಟ, ಕಬಡ್ಡಿ ಪಂದ್ಯಾವಳಿಗಲನ್ನು ಆಯೋಜಿಸಿದೆ.
ಹೇರೂರು ಗ್ರಾಪಂ ವ್ಯಾಪ್ತಿಯ ಹಾಡುಗಾರಿನ ಶ್ರೀವಿದ್ಯಾಗಣಪತಿ ಸೇವಾ ಸಮಿತಿ ಪರಿಸರ ಸ್ನೇಹಿ ವಿನಾಯಕ ಸ್ವಾಮಿ ಮೂರ್ತಿ ಪ್ರತಿಷ್ಠಾಪಿಸಿದೆ. ಚಂದ್ರಯಾನ-3 ರ ಯಶಸ್ಸಿಗೆ ಕಾರಣರಾದ ಇಸ್ರೋ ವಿಜ್ಞಾನಗಳ ಗೌರವಾರ್ಥ ಪ್ರವೇಶ ದ್ವಾರ ನಿರ್ಮಿಸಲಾಗಿದೆ ಎಂದು ಸಮಿತಿ ಅಧ್ಯಕ್ಷ ಹೂವಪ್ಪಗೌಡ ತಿಳಿಸಿದ್ದಾರೆ.