ಕಳೆದ ಏಳು ವರ್ಷಗಳಿಂದ ನಡೆಯುತ್ತಿರುವ ಕಂಕನಾಡಿ ಮಾರುಕಟ್ಟೆ ಪುನರ್ನಿರ್ಮಾಣ ಕಾಮಗಾರಿ ಇನ್ನೂ ಆಮೆಗತಿಯಲ್ಲಿ ಸಾಗುತ್ತಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.  
ನ್ಯೂಸ್

ಕಂಕನಾಡಿ ಮಾರ್ಕೆಟ್‌ಗೆ ಗ್ರಹಣ

Karthika K.S

ಪ್ರಮುಖ ಮುಖ್ಯಾಂಶಗಳು

  • ಮಂದಗತಿ ಕಾಮಗಾರಿಯಿಂದ ಅಭಿವೃದ್ಧಿ ತೊಡಕು
  • 7 ವರ್ಷವಾದರೂ ಪೂರ್ಣವಾಗದ ಕಟ್ಟಡ ನಿರ್ಮಾಣ
ಶ್ರವಣ್‌ಕುಮಾರ್ ನಾಳ ಮಂಗಳೂರು
ಅಭಿವೃದ್ಧಿಯ ಹೆಸರಿನಲ್ಲಿ ಆರಂಭಗೊಂಡ ಯೋಜನೆಗಳು ಕಾಲಮಿತಿಯಲ್ಲಿ ಮುಗಿಯದಿದ್ದರೆ ಏನಾಗುತ್ತದೆ ಎಂಬುದಕ್ಕೆ ಕಂಕನಾಡಿ ಮಾರುಕಟ್ಟೆ ಕಾಮಗಾರಿಯೇ ಸಾಕ್ಷಿ. ಮಂಗಳೂರು ಮಹಾನಗರ ಪಾಲಿಕೆಯ ಮಹತ್ವಾಕಾಂಕ್ಷೆಯ ಈ ಯೋಜನೆ ಏಳು ವರ್ಷಗಳಿಂದ ಕುಂಟುತ್ತಾ ಸಾಗುತ್ತಿದೆ.
 ನಗರದ ಹೃದಯಭಾಗದಲ್ಲಿರುವ ಕಂಕನಾಡಿ ಮಾರುಕಟ್ಟೆ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ವ್ಯಾಪಾರ ಕೇಂದ್ರಗಳಲ್ಲಿ ಒಂದು. ಆದರೆ, ಏಳು ವರ್ಷಗಳಿಂದ ನಡೆಯುತ್ತಿರುವ ಇದರ ಪುನಃ ರ್ನಿರ್ಮಾಣ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
 ಇಲ್ಲಿನ ಹಳೆಯ ಮಾರುಕಟ್ಟೆ ಕೆಡವಿ ಸುಸಜ್ಜಿತ ಮಾರುಕಟ್ಟೆ ಸಂಕೀರ್ಣ ನಿರ್ಮಿಸಲು ಪಾಲಿಕೆ ಮತ್ತು ಮಂಗಳೂರು ಸ್ಮಾರ್ಟ್‌ಸಿಟಿ ಲಿಮಿಟೆಡ್ ಜಂಟಿಯಾಗಿ ಮುಂದಾಗಿದ್ದವು. 2017-18ರ ಅವಧಿಯಲ್ಲಿ ಕಾಮಗಾರಿಗೆ ಅಡಿಪಾಯ ಹಾಕಲಾಗಿತ್ತು. ಆರಂಭದಲ್ಲಿ 41 ಕೋಟಿ ರೂಪಾಯಿ ವೆಚ್ಚದಲ್ಲಿ ಮಾರುಕಟ್ಟೆ ಸಂಕೀರ್ಣ ನಿರ್ಮಿಸಲು ಯೋಜಿಸಲಾಗಿತ್ತು. (ನಂತರದ ದಿನಗಳಲ್ಲಿ ಅನುದಾನದ ಹೊಂದಾಣಿಕೆ ಮತ್ತು ವಿನ್ಯಾಸದ ಬದಲಾವಣೆಯಿಂದಾಗಿ ವೆಚ್ಚದಲ್ಲಿ ಏರಿಳಿತಗಳಾಗಿವೆ). ತಳ ಅಂತಸ್ತಿನಲ್ಲಿ ಪಾರ್ಕಿಂಗ್, ನೆಲ ಅಂತಸ್ತಿನಲ್ಲಿ ಮೀನು ಮತ್ತು ಮಾಂಸದ ಮಾರುಕಟ್ಟೆ ಹಾಗೂ ಮೇಲಿನ ಅಂತಸ್ತುಗಳಲ್ಲಿ ತರಕಾರಿ ಮತ್ತು ಇತರ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿತ್ತು.

ರಸ್ತೆ ಬದಿಯಲ್ಲೇ ವ್ಯಾಪಾರ 

ಮಾರುಕಟ್ಟೆ ಕಟ್ಟಡ ಪೂರ್ಣಗೊಳ್ಳದ ಕಾರಣ, ಹತ್ತಾರು ವರ್ಷಗಳಿಂದ ವ್ಯಾಪಾರ ಮಾಡುತ್ತಿದ್ದ ನೂರಾರು ವ್ಯಾಪಾರಿಗಳು ಇಂದು ಅನಿವಾರ್ಯವಾಗಿ ರಸ್ತೆ ಬದಿಯ ಫುಟ್‌ಪಾತ್‌ಗಳನ್ನೇ ಆಶ್ರಯಿಸಿದ್ದಾರೆ. ಕಂಕನಾಡಿಯ ಪ್ರಸಿದ್ಧ ಹೂವಿನ ಮಾರುಕಟ್ಟೆ ಇಂದು ಧೂಳು ಮತ್ತು ಬಿಸಿಲಿನ ನಡುವೆ ರಸ್ತೆ ಬದಿಯಲ್ಲೇ ನಡೆಯುತ್ತಿದೆ. ಮಳೆಗಾಲದಲ್ಲಿ ಕೆಸರು, ಬೇಸಿಗೆಯಲ್ಲಿ ಧೂಳಿನ ನಡುವೆ ತರಕಾರಿ ವ್ಯಾಪಾರ ನಡೆಯುತ್ತಿದ್ದು, ಗ್ರಾಹಕರು ಮೂಗು ಮುಚ್ಚಿಕೊಂಡು ಸಂಚರಿಸುವಂತಾಗಿದೆ. ಮಾರುಕಟ್ಟೆ ಕಾಮಗಾರಿ ನಡೆಯುತ್ತಿರುವ ಪ್ರದೇಶವು ನಗರದ ಅತ್ಯಂತ ಜನನಿಬಿಡ ವೃತ್ತಗಳಲ್ಲಿ ಒಂದಾಗಿದೆ. ಕಾಮಗಾರಿಯ ಸಾಮಗ್ರಿಗಳು ಮತ್ತು ರಸ್ತೆ ಬದಿಯ ವ್ಯಾಪಾರದಿಂದಾಗಿ ಬಸ್‌ಗಳು ನಿಲ್ಲಲು ಸರಿಯಾದ ಜಾಗವಿಲ್ಲದೆ, ಸಂಚಾರ ದಟ್ಟಣೆ ಉಂಟಾಗುತ್ತಿದೆ. ಈ ಭಾಗದ ರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರಿಗೆ ನಿಗದಿತ ನಿಲ್ದಾಣವಿಲ್ಲದೆ ಅವರು ಪರದಾಡುವಂತಾಗಿದೆ. 

ಅನುದಾನದ ಕೊರತೆ

 ಆರಂಭದಲ್ಲಿ ಪಾಲಿಕೆ ಮತ್ತು ಸ್ಮಾರ್ಟ್‌ಸಿಟಿ ನಡುವಿನ ಅನುದಾನ ಹಂಚಿಕೆಯ ಗೊಂದಲ, ಕಟ್ಟಡದ ನಕ್ಷೆ ಮತ್ತು ವಿನ್ಯಾಸದಲ್ಲಿ ಆಗಾಗ ಮಾಡಿದ ಬದಲಾವಣೆ, ಕಾಮಗಾರಿ ವಹಿಸಿಕೊಂಡ ಗುತ್ತಿಗೆದಾರರ ಆಮೆಗತಿಯ ಕೆಲಸ ಮತ್ತು ಕಾರ್ಮಿಕರ ಕೊರತೆ, ಮಧ್ಯಂತರದಲ್ಲಿ ಎದುರಾದ ಕೋವಿಡ್‌ನಿಂದಾಗಿ ಒಂದೂವರೆ ವರ್ಷಗಳ ಕಾಲ ಕೆಲಸ ಸ್ಥಗಿತಗೊಂಡಿತ್ತು. 

ಮಹಾನಗರ ಪಾಲಿಕೆಯ ಮಹತ್ವಾಕಾಂಕ್ಷೆಯ ಯೋಜನೆ ಕಂಕನಾಡಿ ಮಾರ್ಕೆಟ್ ನಿರ್ಮಾಣ ಕಳೆದ ಏಳು ವರ್ಷಗಳಿಂದ ಕುಂಟುತ್ತಾ ಸಾಗುತ್ತಿದ್ದು, ವೇಗ ನೀಡುವಂತೆ ಸ್ಮಾರ್ಟ್‌ಸಿಟಿಗೆ ಸೂಚನೆ ನೀಡಲಾಗಿದೆ. ಬಹುತೇಕ ಮಾರ್ಕೆಟ್ ನಿರ್ಮಾಣ ಕಾಮಗಾರಿಗೆ ತಾಂತ್ರಿಕ ತೊಂದರೆಗಳನ್ನು ನಿವಾರಿಸಲಾಗಿದೆ. ಕೆಲವೇ ತಿಂಗಳುಗಳಲ್ಲಿ ಕಂಕನಾಡಿ ಮಾರ್ಕೆಟ್ ಕಾಮಗಾರಿ ಪೂರ್ಣಗೊಳ್ಳಲಿದೆ.

— ವೇದವ್ಯಾಸ ಕಾಮತ್, ಶಾಸಕ