ನ್ಯೂಸ್

ಶೆಟ್ಟಿಹಳ್ಳಿ ಕೆರೆ ರಕ್ಷಣೆಗೆ ಹಿಡಿದ ಗ್ರಹಣ

* ಬೊಂಬೆನಾಡಿನ ಜಲಮೂಲ ರಕ್ಷಿಸಲು ಅಧಿಕಾರಿಗಳ ನಿರ್ಲಕ್ಷ್ಯ

*ಒತ್ತುವರಿ ಜತೆಗೆ ಕಸ ವಿಲೇ ಹಾಟ್‌ಸ್ಪಾಟ್

ಅಭಿಲಾಷ್ ತಿಟ್ಟಮಾರನಹಳ್ಳಿ ಚನ್ನಪಟ್ಟಣ

ನಗರದ ಹೃದಯ ಭಾಗದಲ್ಲಿರುವ ಶೆಟ್ಟಿಹಳ್ಳಿ ಕೆರೆ ರಕ್ಷಿಸುವ ಕೆಲಸಕ್ಕೆ ಗ್ರಹಣ ಹಿಡಿದಿದೆ. ಒಂದೆಡೆ ಒತ್ತುವರಿಯಾದರೆ, ಮತ್ತೊಂದೆಡೆ ತ್ಯಾಜ್ಯ ವಿಲೇವಾರಿಯಿಂದ ಕೆರೆ ಒತ್ತುವರಿಯಾಗುತ್ತಿದೆ.

ಕೆರೆ ಸಂರಕ್ಷಣೆಗೆ ಸರ್ಕಾರಗಳು ಅನೇಕ ಕಾನೂನು ರೂಪಿಸಿವೆ. ಇದರೊಂದಿಗೆ, ನಾನಾ ಸಂಘ-ಸಂಸ್ಥೆಗಳು ಕೆರೆಗಳ ರಕ್ಷಣೆಗೆ ಟೊಂಕ ಕಟ್ಟಿ ಹೋರಾಡಿರುತ್ತಿವೆ. ಆದರೆ, ಬೊಂಬೆನಾಡು ಚನ್ನಪಟ್ಟಣದ ಹೃದಯ ಭಾಗದಲ್ಲಿರುವ ಶೆಟ್ಟಿಹಳ್ಳಿ ಕೆರೆ ರಕ್ಷಿಸಿಕೊಳ್ಳಲು ಸಂಬಂಧಿಸಿದ ಅಧಿಕಾರಿಗಳೇ ನಿರ್ಲಕ್ಷ್ಯ ವಹಿಸುತ್ತಿದ್ದಾರೆಯೇ ಎಂಬ ಅನುಮಾನ ಮೂಡಿದೆ.

ಜನರಿಗೆ ಆಹ್ಲಾದಕರ ವಾತಾವರಣ ನೀಡಬೇಕಿದ್ದ ಕೆರೆ ವಾತಾವರಣ ದಿನದಿಂದ ದಿನಕ್ಕೆ ಗಬ್ಬು ನಾರುತ್ತಿದ್ದು, ಈ ಭಾಗದ ಜನತೆ ಕಿರಿಕಿರಿ ಅನುಭವಿಸುವಂತಾಗಿದೆ.

ತ್ಯಾಜ್ಯ ವಿಲೇ ತಾಣ:

ಶೆಟ್ಟಿಹಳ್ಳಿ ಕೆರೆಯಲ್ಲಿ ನೀರಿನ ನೆಲೆ ಕಾಣದಂತೆ ಜೊಂಡು ಬೆಳೆದಿದ್ದು, ಇದರ ಜತೆಗೆ ನಗರದ ಕೊಳಚೆಯೂ ಸೇರೆ ಕೆರೆಯೊಡಲು ನಲುಗುತ್ತಿದೆ. ಕೆರೆ ಆವರಣ ತ್ಯಾಜ್ಯ ವಿಲೇಯ ಹಾಟ್‌ಸ್ಪಾಟ್ ಆಗಿದ್ದು, ಇದು ಕೆರೆಯೇ ಎಂಬ ಅನುಮಾನ ಮೂಡಿಸುವಷ್ಟರ ಮಟ್ಟಿಗೆ ಹಾಳಾಗಿದೆ. ಕೆರೆಯಲ್ಲಿನ ಕಲುಷಿತ ನೀರು ಹಾಗೂ ತ್ಯಾಜ್ಯದ ದುರ್ವಾಸನೆಯಿಂದ ಕೆರೆಯ ಪಕ್ಕದ ನಿವಾಸಿಗಳು ದಿನನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ಕೆರೆ ಏರಿ, ರಸ್ತೆ ಪೊದೆಗಳಿಂದ ಸಂಪೂರ್ಣವಾಗಿ ಮುಚ್ಚಿದ್ದು, ಸೊಳ್ಳೆ, ಹಾವುಗಳ ವಾಸಸ್ಥಾನವಾಗಿ ಬದಲಾಗಿದೆ. ಕೆರೆ ಪಕ್ಕದಲ್ಲಿಯೇ ಶಾಲಾ-ಕಾಲೇಜು ಹಾಗೂ ಬಡಾವಣೆ ನಿರ್ಮಾಣವಾಗಿದ್ದು, ಈ ಭಾಗದ ಜನತೆಗೆ ಈ ಕೆರೆ ಶಾಪವಾಗಿ ಕಾಡುತ್ತಿದೆ.

ಒತ್ತುವರಿಗಿಲ್ಲ ಭಯ

ನಗರದ ಮಂಗಳವಾರಪೇಟೆಯ ಸ.ನಂ.13ರ ಶೆಟ್ಟಿಹಳ್ಳಿ ಕೆರೆ ಜಾಗ ಒಟ್ಟು 20.14 ಎಕರೆಯಲ್ಲಿದೆ. ಇದರಲ್ಲಿ ಒಂದೂವರೆ ಎಕರೆಗೂ ಹೆಚ್ಚು ಜಾಗ ಒತ್ತುವರಿದಾರರ ಪಾಲಾಗಿದೆ. ಒಂದು ಕಾಲದಲ್ಲಿ ಜನ-ಜಾನುವಾರುಗಳಿಗೆ ನೀರುಣಿಸುತ್ತಿದ್ದ ಶೆಟ್ಟಿಹಳ್ಳಿ ಕೆರೆಯ ಈ ದುಸ್ಥಿತಿಗೆ ಆಡಳಿತ ವ್ಯವಸ್ಥೆಯ ಕಾರಣ ಎಂದರೆ ತಪ್ಪಾಗಲಾರದು. ಹಲವಾರು ವರ್ಷಗಳಿಂದ ಕೆರೆ ಒತ್ತುವರಿಯನ್ನು ರಾಜಾರೋಷವಾಗಿ ಮಾಡಲಾಗುತ್ತಿದ್ದು, ಕೆರೆ ಒತ್ತುವರಿ ತಡೆಯಲು ವಿಫಲಗೊಂಡ ಕಾರಣ, ಪ್ರಸುತ್ತ ಒತ್ತುವರಿ ಮುಂದುವರಿದಿದೆ.

ಕ್ರಮ ಕೈಗೊಂಡಿಲ್ಲ

ಈ ಹಿಂದೆ ಕೆರೆ ಒತ್ತುವರಿ ವಿಚಾರದ ಬಗ್ಗೆ ಹಲವು ಸಂಘ-ಸಂಸ್ಥೆಗಳು ಹಾಗೂ ಸಾಮಾಜಿಕ ಕಾರ್ಯಕರ್ತರು ಧ್ವನಿ ಎತ್ತುವ ಜತೆಗೆ ಲೋಕಾಯುಕ್ತಕ್ಕೆ ದೂರು ನೀಡಿದ ಹಿನ್ನೆಲೆಯಲ್ಲಿ ಅಧಿಕಾರಿಗಳು ಕೆರೆ ಜಾಗ ಸರ್ವೇ ಮಾಡಿ, 1.28 ಎಕರೆಯನ್ನು 26 ಜನರು ಒತ್ತುವರಿ ಮಾಡಿದ್ದಾರೆ ಎಂದು ಗುರುತಿಸಿ, ತೆರವಿಗೆ ನೋಟಿಸ್ ಜಾರಿ ಮಾಡಿದ್ದರು.ಅಂತೆಯೇ ಒತ್ತುವರಿ ತೆರವಿಗೆ ಮುಂದಾದ ವೇಳೆ ಕೆಲವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆಗೆ ಬ್ರೇಕ್ ಬಿದ್ದಿತ್ತು. ತಡೆಯಾಜ್ಞೆ ಆದೇಶವನ್ನು ತೆರವುಗೊಳಿಸುವ ಸಂಬಂಧ ಇದುವರೆಗೂ ಸಂಬಂಧಿಸಿದ ಇಲಾಖೆ ಅಥವಾ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲದ ಕಾರಣ ಮತ್ತಷ್ಟು ಒತ್ತುವರಿಗೆ ಕಡಿವಾಣ ಇಲ್ಲದಂತಾಗಿದೆ.

ರಕ್ಷಿಸುವ ಕೆಲಸವಾಗಲಿ

ಶೆಟ್ಟಿಹಳ್ಳಿ ಕೆರೆಯ ಸಾಕಷ್ಟು ಜಾಗವನ್ನು ಈಗಾಗಲೇ ಹಲವು ಆಕ್ರಮಿಸಿಕೊಂಡಿದ್ದಾರೆ. ಕೆರೆ ಜಾಗದಲ್ಲಿ ಅಕ್ರಮವಾಗಿ ಮನೆ ಕಟ್ಟಿದ್ದಾರೆೆ. ನ್ಯಾಯಾಲಯದ ತಡೆಯಾಜ್ಞೆ ತೆರವು ಮಾಡಿಸುವ ಸಂಬಂಧ ಅಧಿಕಾರಿಗಳು ತುರ್ತು ಕಾನೂನು ಕ್ರಮಕೈಗೊಳ್ಳುವ ಅವಶ್ಯಕತೆ ಇದೆ. ಸರ್ಕಾರದ ಪರವಾಗಿ ವಕೀಲರನ್ನು ನೇಮಿಸಿಕೊಂಡು ಅಕ್ರಮವಾಗಿ ನಿರ್ಮಾಣವಾಗಿರುವ ಜಾಗದ ಬಗ್ಗೆ ನ್ಯಾಯಾಲಯಕ್ಕೆ ಮನವರಿಕೆ ಮಾಡಿ, ಈ ವಿಚಾರವಾಗಿ ಬಂದಿರುವ ತಡೆಯಾಜ್ಞೆ ರದ್ದುಪಡಿಸಿ, ಕೆರೆಯ ಜಾಗ ಉಳಿಸಲು ಮುಂದಾಗಬೇಕಿದೆ.

ಪ್ಲೀಡಿಂಗ್ ಅಧಿಕಾರಿ ವಿರುದ್ಧ ಆರೋಪ

ಶೆಟ್ಟಿಹಳ್ಳಿ ಕೆರೆ ಒತ್ತುವರಿ ಬಗ್ಗೆ ಪತ್ರಿಕೆಗೆ ಮಾಹಿತಿ ಹಂಚಿಕೊಂಡಿರುವ ಆಜಾದ್ ಬ್ರಿಗೇಡ್ ಪದಾಧಿಕಾರಿಗಳಾದ ಗಜೇಂದ್ರ ಸಿಂಗ್ ಮತ್ತು ಸುರೇಶ್, ರಾಮಕೃಷ್ಣ, ನಗರದ ಹೃದಯ ಭಾಗದಲ್ಲಿ ಹಾಗೂ ತಾಲೂಕು ಆಡಳಿತ ಸೌಧದ ಕಣ್ಣಳತೆಯಲ್ಲಿರುವ ಶೆಟ್ಟಿಹಳ್ಳಿ ಕೆರೆ ಒತ್ತುವರಿಯಾಗುತ್ತಿದೆ. ಸದರಿ ಒತ್ತುವರಿ ವಿರುದ್ಧ ನಾವು ಸಂಬಂಧಪಟ್ಟ ಅಧಿಕಾರಿಗಳಿಗೆ 2019ರಲ್ಲಿ ದೂರು ಸಲ್ಲಿಸಿದ್ದೆವು. ಅಂದಿನ ತಹಸೀಲ್ದಾರ್ ಸುದರ್ಶನ್ ಕೆರೆ ಸರ್ವೇ ಮಾಡಿಸಿ, ಒತ್ತುವರಿಯಾಗಿರುವುದನ್ನು ಗುರುತಿಸಿ ತೆರವುಗೊಳಿಸಲು ಮುಂದಾಗಿದ್ದರು.

ಆದರೆ, ಒತ್ತುವರಿದಾರರು 2019ರ ಮಾರ್ಚ್‌ನಲ್ಲಿ ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದ ಕಾರಣ ತೆರವು ಕಾರ್ಯಕ್ಕೆ ಬ್ರೇಕ್ ಬಿದ್ದಿತ್ತು. ಆದರೆ, ಸಂಬಂಧಪಟ್ಟ ಅಧಿಕಾರಿಗಳು ಸದರಿ ತಡೆಯಾಜ್ಞೆ ತೆರೆವುಗೊಳಿಸಲು ಯಾವುದೇ ಪ್ರಯತ್ನಕ್ಕೆ ಮುಂದಾಗಿಲ್ಲ. ಹೈಕೋರ್ಟ್‌ನಲ್ಲಿ ಶೆಟ್ಟಹಳ್ಳಿಕೆರೆ ಒತ್ತುವರಿ ಸಂಬಂಧ ಒಟ್ಟು 3 ರಿಟ್ ಅರ್ಜಿಗಳು ಸಲ್ಲಿಕೆಯಾಗಿವೆ. ಆದರೆ, ವಿಚಾರಣೆ ಕೈಗೆತ್ತಿಕೊಂಡಿಲ್ಲ. ಈ ಮೂರು ಪ್ರಕರಣಗಳಲ್ಲಿ ರಾಮನಗರ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರನ್ನು ಪ್ಲೀಡಿಂಗ್ ಆಫೀಸರ್ ಆಗಿ ನೇಮಕ ಮಾಡಲಾಗಿದ್ದು, ಅವರು ಸದರಿ ತಡೆಯಾಜ್ಞೆ ತೆರೆವುಗೊಳಿಸಲು ಕಾರ್ಯೊನ್ಮುಖವಾಗದೇ ನಿರ್ಲಕ್ಷ ವಹಿಸಿದ್ದಾರೆ ಎಂದು ಆರೋಪಿಸಿದ್ದಾರೆ.