ನ್ಯೂಸ್

ಕಾಂಗ್ರೆಸ್‌ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಪ್ರಚಾರದಲ್ಲಿ ಭಾಗವಹಿಸದಂತೆ ಮಾಜಿ ಸಿಎಂ ಕೆಸಿಆರ್​ಗೆ ನಿಷೇಧ

ಹೈದರಾಬಾದ್: ಸಾರ್ವತ್ರಿಕ ಚುನಾವಣೆಯ ಪ್ರಚಾರದಲ್ಲಿ ಭಾಗವಹಿಸದಂತೆ ತೆಲಂಗಾಣದ ಮಾಜಿ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರಿಗೆ ಕೇಂದ್ರ ಚುನಾವಣಾ ಆಯೋಗ ನಿಷೇಧ ಹೇರಿದೆ.

ಕಾಂಗ್ರೆಸ್‌ ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪಕ್ಕೆ ಗುರಿಯಾಗಿರುವ ಮಾಜಿ ಸಿಎಂ ಕೆಸಿಆರ್​ಗೆ ನಿರ್ಬಂಧ ವಿಧಿಸಲಾಗಿದೆ. ಮುಂದಿನ 48 ಗಂಟೆ ಕಾಲ ಪ್ರಚಾರದಲ್ಲಿ ಭಾಗಿಯಾಗದಂತೆ ಚುನಾವಣಾ ಆಯೋಗ ನಿರ್ಬಂಧ ವಿಧಿಸಿದೆ. ಇಂದು ರಾತ್ರಿ 8 ಗಂಟೆಯಿಂದ 48 ಗಂಟೆ ಕಾಲ ಅವರು ಪ್ರಚಾರ ನಡೆಸುವಂತಿಲ್ಲ.

ಏಪ್ರಿಲ್​ 5 ರಂದು ತೆಲಂಗಾಣದ ಸಿರಿಸಿಲ್ಲದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕೆಸಿಆರ್. ಕೀಳ ಪದಗಳನ್ನು ಬಳಸಿ ಕಾಂಗ್ರೆಸ್​ ನಾಯಕರ ವಿರುದ್ಧ ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿ ತೆಲಂಗಾಣ ನಾಯಕ ಜಿ.ನಿರಂಜನ್​ ದೂರು ನೀಡಿದ್ದರು. ಅದರ ವಿಚಾರಣೆ ನಡೆಸಿದ ಆಯೋಗವು ಕೆಸಿಆರ್ ಅವರಿಗೆ ಭಾನುವಾರ ರಾತ್ರಿ 8ರಿಂದ ಅನ್ವಯಿಸುವಂತೆ 48 ಗಂಟೆಗಳ ಪ್ರಚಾರ ನಿರ್ಬಂಧಿಸಿದೆ.

ತಮ್ಮ ವಿರುದ್ಧದ ದೂರಿಗೆ ಪ್ರತಿಕ್ರಿಯಿಸಿದ ಕೆಸಿಆರ್, ತಮ್ಮ ಟೀಕೆಗಳು ರಾಜ್ಯದಲ್ಲಿ ಕಾಂಗ್ರೆಸ್‌ನ ನೀತಿಗಳು ಮತ್ತು ಕಾರ್ಯಕ್ರಮಗಳಿಗೆ ಸೀಮಿತವಾಗಿದೆ. ಕಾಂಗ್ರೆಸ್ ನಾಯಕರ ವಿರುದ್ಧ ಯಾವುದೇ ವೈಯಕ್ತಿಕ ಟೀಕೆ ಮಾಡಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.

ಕೀಳು ಪದಗಳನ್ನು ಬಳಿಸಿ ಕಾಂಗ್ರೆಸ್ ನಾಯಕರ ವಿರುದ್ಧ ಅವಹೇಳನ ಮಾಡಿರುವ ಕೆಸಿಆರ್ ಅವರಿಗೆ 48 ಗಂಟೆಗಳ ಕಾಲ ಪ್ರಚಾರ ನಿರ್ಬಂಧ ಜೊತೆಗೆ ಅವರ ಕುರಿತು ಮಾತನಾಡಿರುವ ದೂರಿನ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಕೆಸಿಆರ್​ಗೆ ನೋಟಿಸ್ ನೀಡಲಾಗಿದೆ.