ನ್ಯೂಸ್

EC case: ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದಲ್ಲಿ ಜಯಪ್ರದಾ ಖುಲಾಸೆ

Webdesk - Narayanaswamy

ನವದೆಹಲಿ: ಚುನಾವಣಾ ನೀತಿ ಸಂಹಿತೆ(EC case) ಉಲ್ಲಂಘನೆ ಪ್ರಕರಣದಲ್ಲಿ ನಟಿ ಹಾಗೂ ಮಾಜಿ ಸಂಸದೆ ಜಯಪ್ರದಾ ಅವರಿಗೆ ರಿಲೀಫ್ ಸಿಕ್ಕಿದೆ. ನ್ಯಾಯಾಲಯ ಅವರನ್ನು ದೋಷಮುಕ್ತಗೊಳಿಸಿದೆ.

ಜಯಪ್ರದಾ ವಿರುದ್ಧ 2019ರ ಲೋಕಸಭೆ ಚುನಾವಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿದ್ದವು. ರಾಂಪುರದ ನ್ಯಾಯಾಲಯ ಬುಧವಾರ(ಅ.16) ತೀರ್ಪು ನೀಡಿದೆ. ನೂರಪುರ ಗ್ರಾಮದಲ್ಲಿ ನೀತಿ ಸಂಹಿತೆ ಇದ್ದರೂ ರಸ್ತೆ ಉದ್ಘಾಟನೆ ಮಾಡಿದ್ದಾರೆ ಎಂಬ ಆರೋಪ ಜಯಪ್ರದಾ ಅವರ ಮೇಲಿತ್ತು.

ಜಯಪ್ರದಾ ವಿರುದ್ಧ ಒಂದು ಪ್ರಕರಣ ಕೆಮ್ರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಜಯಪ್ರದಾ ಈಗಾಗಲೇ ಖುಲಾಸೆಗೊಂಡಿದ್ದಾರೆ. ಇದಲ್ಲದೇ ನೀತಿ ಸಂಹಿತೆ ಇದ್ದರೂ ರಸ್ತೆ ಉದ್ಘಾಟನೆ ಮಾಡಿದ ಆರೋಪ ಕೇಳಿಬಂದಿತ್ತು. ಅದರ ವಿಡಿಯೋ ಪ್ರಸಾರವಾದ ನಂತರ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು.

ಪೊಲೀಸರು ತನಿಖೆ ನಡೆಸಿ ನಟಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಅದರ ವಿಚಾರಣೆ ನಡೆದು ಈ ನಿರ್ಧಾರ ಕೈಗೊಳ್ಳಲಾಗಿದೆ. ಜಯಪ್ರದಾ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಸಾಕ್ಷ್ಯಾಧಾರಗಳ ಕೊರತೆಯಿಂದ ಜಯಪ್ರದಾ ಅವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ನ್ಯಾಯಾಲಯದಿಂದ ಹೊರಬಂದ ನಂತರ ಜಯಪ್ರದಾ ನ್ಯಾಯಾಲಯಕ್ಕೆ ಧನ್ಯವಾದ ಅರ್ಪಿಸಿದರು. ನಮಗೆ ನ್ಯಾಯ ಸಿಕ್ಕಿದೆ ಎಂದು ಹೇಳಿದರು.