ಸೊರಬ: ಭಾರತೀಯ ಪರಂಪರೆಯಲ್ಲಿ ಯೋಗ, ಧ್ಯಾನ, ಪ್ರಾಣಾಯಾಮಗಳು ಮಹತ್ವ ಪಡೆದಿವೆ. ಹಾಗಾಗಿ ಇವುಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಕಾನುಕೇರಿ ಮಠದ ಶ್ರೀ ಘನಬಸವ ಅಮರೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ಕಾನುಕೇರಿ ಮಠದಲ್ಲಿ ಸದ್ಗುರು ಸೇವಾ ಟ್ರಸ್ಟ್, ಸೊರಬ ಟೌನ್ ವೀರಶೈವ ಸಮಾಜ ಸಮಿತಿ, ಅಕ್ಕನ ಬಳಗ, ಸುರಭಿ ಯೋಗ ಕೇಂದ್ರದಿಂದ ಭಾನುವಾರ ಆಯೋಜಿಸಿದ್ದ ಯೋಗ ತರಬೇತಿ ಶಿಬಿರದ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಯೋಗಾಭ್ಯಾಸದಿಂದ ದೈಹಿಕ ಮತ್ತು ಮಾನಸಿಕ ಸದೃಢತೆ ಸಾಧ್ಯ. ರಾಸಾಯನಿಕಗಳ ಬಳಕೆಯಿಂದಾಗಿ ನಾವು ತಿನ್ನುವ ಆಹಾರ ವಿಷಪೂರಿತ. ಹಾಗಾಗಿ ಯುಕ್ತ, ಹಿತಮಿತವಾದ, ಋತುಮಾನಕ್ಕೆ ಅನುಗುಣವಾದ ಆಹಾರ ಸೇವಿಸಬೇಕು. ದೇಹವೆಂಬುದು ಕರ್ಮ ಮತ್ತು ಧರ್ಮ ಸಾಧನೆ ಮಾಡುವ ಸಾಧನ ಎಂದು ತಿಳಿಸಿದರು.
ಗೊಗ್ಗೆಹಳ್ಳಿ ಮಠದ ಶ್ರೀ ಸಂಗಮೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ವೇದಗಳ ಕಾಲದಿಂದಲೂ ಋಷಿ ಮುನಿಗಳು, ಸಾಧು ಸಂತರು ಯೋಗದ ಮಹತ್ವ ಸಾರಿದ್ದಾರೆ. ಯೋಗ ಎಂದರೆ ಕೂಡುವುದು ಎಂಬ ಮಹತ್ವದ ಅರ್ಥ ಹೊಂದಿದೆ. ಯೋಗದಿಂದ ರೋಗ ದೂರವಾಗುತ್ತದೆ ಎಂದರು.
ಡಯಬಿಟಿಸ್ ರಿವರ್ಸ್ ಸತ್ಯ ಮತ್ತು ಮಿಥ್ಯ ಕುರಿತು ಶಿವಮೊಗ್ಗದ ಮಧುಮೇಹ ತಜ್ಞ ಡಾ. ಬಿ.ಪ್ರೀತಂ ಉಪನ್ಯಾಸ ನೀಡಿದರು. ಅಕ್ಕನ ಬಳಗದ ಅಧ್ಯಕ್ಷೆ ರೇಖಾ ಜಗದೀಶ್ ಕಾರ್ಯಕ್ರಮ ಉದ್ಘಾಟಿಸಿದರು. ಯೋಗ ಶಿಕ್ಷಕಿ ರೇಖಾ ನಾವುಡ ಯೋಗ ಕುರಿತು ಮಾಹಿತಿ ನೀಡಿದರು. ಸಾಗರದ ಪರಿಚಿತ್ ಯೋಗ ನೃತ್ಯ ನಡೆಸಿಕೊಟ್ಟರು.
ಸೊರಬ ಟೌನ್ ವೀರಶೈವ ಸಮಾಜದ ಅಧ್ಯಕ್ಷ ಎಂ.ಆರ್.ವಿಶ್ವನಾಥ, ನಾಗರಾಜ್ ಗುತ್ತಿ, ಜ್ಯೋತಿ ಮಂಜುನಾಥ್, ಡಿ.ಶಿವಯೋಗಿ, ಜಯಮಾಲಾ, ರೇಣುಕಮ್ಮ ಗೌಳಿ, ಪೂರ್ಣಿಮಾ, ನಿಜಗುಣ ಚಂದ್ರಶೇಖರ್, ಲಿಂಗರಾಜ್, ಮಂಜುನಾಥ್, ಜಯಂತಿ ಕೃಷ್ಣಮೂರ್ತಿ, ಸುರಭಿ ಯೋಗ ಕೇಂದ್ರದ ರಾಘವೇಂದ್ರ, ದಿನೇಶ್, ರಾಜೇಶ್ವರಿ ಸರಸ್ವತಿ ಇತರರಿದ್ದರು.