ಈ ಸಂದರ್ಭದಲ್ಲಿ ಪ್ರಖ್ಯಾತ ಗಾಯಕರಾದ ಹರಿಹರನ್ ಹಾಗೂ ಲೆಸ್ಲಿ ಇವರ ಅರ್ಥಗರ್ಭಿತ ಹಾಡೊಂದು ನೆನಪಾಗುತ್ತಿದೆ: ‘ಕೃಷ್ಣ ನೀ ಬೇಗನೆ ಬಾರೋ... ಜಗತ್ತು ತುಂಬಾ ಆಪತ್ತಿನಲ್ಲಿದೆ. ನೀನು ಯೇಸುವಾಗಿ ಬಾ ಅಥವಾ ಅಲ್ಲಾನಾಗಿ ಬಾ ಅಥವಾ ರಾಮ- ಕೃಷ್ಣರಾಗಿ ಬಾ. ಹೇಗಾದರೂ ಬಾ. ಯಾಕೆಂದರೆ ಇಲ್ಲಿ ಹೃನ್ಮನ ಪರಿವರ್ತನೆಯ ಅಗತ್ಯ ತುಂಬಾ ಇದೆ’. ನಿಜ, ಯೇಸು ಮಗದೊಮ್ಮೆ ಹುಟ್ಟಿ ಬರಬೇಕಾದ ಕಾಲವಿದು.
ಪ್ರೀತಿ, ದಯೆ, ಸೇವೆ, ಕ್ಷಮೆ, ವಿಶ್ವಾಸ, ಸಹಬಾಳ್ವೆ ಇಂತಹ ಶ್ರೇಷ್ಠ ಮೌಲ್ಯಗಳು ನಶಿಸಿ ಹೋಗುತ್ತಿರುವ ಈ ಕಾಲದಲ್ಲಿ ಯೇಸು ಕ್ರಿಸ್ತ, ಬಸವಣ್ಣ, ಕನಕದಾಸ, ಬುದ್ಧ, ಮಹಾವೀರ, ಶ್ರೀ ನಾರಾಯಣ ಗುರು ಇವರಂತಹ ಕ್ರಾಂತಿಕಾರಿ ಸಮಾಜ ಸುಧಾರಕರು ಬೇಕಾಗಿರುವಂತಹ ಕಾಲವಿದು. ಏಕೆಂದರೆ ಇಂದು ಎಲ್ಲಿ ನೋಡಿದರೂ ಯುದ್ಧ, ದ್ವೇಷ, ವಿಭಜನೆ, ದ್ರೋಹ, ಅಸತ್ಯ, ಅಸಹನೆ ರಾರಾಜಿಸುತ್ತಿದೆ. ಇಂತಹ ಸಂದರ್ಭದಲ್ಲಿ ಯೇಸು ನೀಡಿದ ಸಂದೇಶವೇನೆಂದರೆ, ಎಲ್ಲ ಪಂಥಾಹ್ವಾನಗಳ ನಡುವೆ ಭರವಸೆಯಿಂದ ಮುನ್ನಡೆಯಿರಿ ಎಂಬುದಾಗಿದೆ. ಅಂಥ ಧ್ಯೆರ್ಯ ನೀಡುವ ಹಬ್ಬವಿದು. ಈ ಸಾರ್ವತ್ರಿಕ ಸಂದೇಶವನ್ನು ಸ್ವೀಕರಿಸೋಣ. ಅಸತ್ಯದಿಂದ ಸತ್ಯದೆಡೆಗೆ, ಅಂಧ ಕಾರದಿಂದ ಬೆಳಕಿನೆಡೆಗೆ ಹಾಗೂ ಮನುಷ್ಯತ್ವದ ಜೀವನದೆಡೆಗೆ ಪುನರುತ್ಥಾನರಾಗೋಣ.