ಶಿವಮೊಗ್ಗ: ಆಲಮೇಲಮ್ಮ ದೇವಿ ಶಾಪದಿಂದ ಮೈಸೂರು ಮಹಾಸಂಸ್ಥಾನದ ರಾಜರಿಗೆ ಮಕ್ಕಳಾಗಲ್ಲ ಎಂಬುದನ್ನು ಒಂದು ದೃಷ್ಟಿಕೋನದಲ್ಲಿ ನಂಬುವುದು ಕಷ್ಟ. ಆ ಶಾಪ ಇಂದು ಯಾವುದೇ ಪ್ರಭಾವ ಬೀರುವುದಿಲ್ಲ ಎಂದು ಮೈಸೂರು ಮಹಾ ಸಂಸ್ಥಾನದ ರಾಜ ವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅಭಿಪ್ರಾಯಪಟ್ಟರು.
ಡಿವಿಎಸ್ ಆವರಣದಲ್ಲಿ ಬುಧವಾರ ಡಿವಿಎಸ್ ಸ್ವತಂತ್ರ ಪಿಯು ಕಾಲೇಜಿನ ಸುವರ್ಣ ಮಹೋತ್ಸವ ಉದ್ಘಾಟಿಸಿ, ಅಮೃತ ಮಹೋತ್ಸವದ ಸ್ಮರಣಾರ್ಥ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅವರು, ಮುಮ್ಮಡಿ ಕೃಷ್ಣರಾಜ ಚಾಮರಾಜ ಒಡೆಯರ್ ಅವರಿಗೆ ಸ್ವಂತ ಮಕ್ಕಳಿಲ್ಲದ ಕಾರಣ ಆ ಕಾಲದಲ್ಲಿ ಆ ಅಪನಂಬಿಕೆ ಬಂದಿತ್ತು. ಹಲವು ರಾಜಮನೆತನಗಳಲ್ಲಿ ಆ ರೀತಿಯ ಪ್ರಚಾರ ನಡೆದಿತ್ತು ಎಂದರು.
ರಾಜಮನೆತನಗಳಿಗೆ ಉತ್ತರಾಧಿಕಾರಿ ಇಲ್ಲದಿದ್ದರೆ ರಾಜ್ಯವನ್ನು ಮುನ್ನಡೆಸುವುದು ಸಾಧ್ಯವಿಲ್ಲ. ಅಂತಹ ರಾಜ್ಯಗಳನ್ನು ಬ್ರಿಟಿಷರ ಆಳ್ವಿಕೆಗೆ ಒಳಪಡಿಸಬೇಕಿತ್ತು ಎಂಬ ನಿಯಮ ಜಾರಿಗೆ ತಂದಿದ್ದರು. ಆದರೆ ಇಂದು ಅಂತಹ ಶಾಪವನ್ನು ನಂಬುವುದು ಕಷ್ಟ ಎಂದು ಹೇಳಿದರು.
ಪುರಾತನ ಕಾಲದಿಂದಲೂ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಿಕೊಂಡು ಬರಲಾಗಿದೆ. ಮುಮ್ಮಡಿ ಕೃಷ್ಣರಾಜ ಒಡೆಯರ್ ಸಾಂಸ್ಕೃತಿಕ ಬದಲಾವಣೆಗೆ ಬೀಜ ಬಿತ್ತಿದರು. ಯಕ್ಷಗಾನಕ್ಕೆ ವಿಶೇಷವಾಗಿ ಪ್ರೋತ್ಸಾಹ ನೀಡಲಾಗಿತ್ತು. ದೇವಸ್ಥಾನಗಳ ಮರು ನಿರ್ಮಾಣ ಮೂಲಕ ಸಂಗೀತ, ನೃತ್ಯ ಸೇರಿ ಮತ್ತಿತರರ ಕಲೆಗೆ ಪ್ರೋತ್ಸಾಹ ನೀಡಲಾಗುತ್ತಿತ್ತು. ಜಯಚಾಮರಾಜ ಒಡೆಯರ್ ಅವರು 108 ಕೃತಿಗಳನ್ನು ರಚಿಸಿದ್ದರು ಎಂದು ಯದುವೀರ ಒಡೆಯರ್ ಹೇಳಿದರು.
ಅಲ್ಲದೆ ಶಿಕ್ಷಣದಲ್ಲಿ ಮೀಸಲಾತಿಯನ್ನು ಅಂದಿನ ಕಾಲದಲ್ಲೇ ನೀಡಿತ್ತು. ಕಳೆ ವರ್ಗದವರ ಅನುಕೂಲಕ್ಕಾಗಿ ಪ್ರಾಥಮಿಕ ಶಾಲೆಯಿಂದ ಮೈಸೂರು ವಿವಿವರೆಗೂ ಮೀಸಲಾತಿ ನೀಡಲಾಗುತ್ತಿತ್ತು. ಹಾಲಿ ಇಂದು ಶಿಕ್ಷಣದ ಜತೆಗೆ ರಾಜಕೀಯದಲ್ಲಿ ಹೆಣ್ಣು ಮಕ್ಕಳಿಗೆ ಮೀಸಲಾತಿ ನೀಡಲಾಗುತ್ತಿದೆ. ಇದು ಒಳ್ಳೆಯ ಬೆಳವಣಿಗೆ ಕೂಡ ಆಗಿದೆ ಎಂದರು.