ನ್ಯೂಸ್

ಪಾಕಿಸ್ತಾನದಲ್ಲಿ ಭೂಕಂಪನ; ಜನರಲ್ಲಿ ಹೆಚ್ಚಿದ ಭೀತಿ; ಕಂಪನದ ತೀವ್ರತೆ ಎಷ್ಟಿತ್ತು ಗೊತ್ತಾ? Earthquake

earthquake | ಪಾಕಿಸ್ತಾನದಲ್ಲಿ ಶನಿವಾರ ಭೂಕಂಪನದ ಅನುಭವವಾಗಿದೆ. ಈ ಭೂಕಂಪದಿಂದ ಯಾವುದೇ ಹಾನಿಯಾದ ಬಗ್ಗೆ ಇನ್ನೂ ವರದಿಯಾಗಿಲ್ಲ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಪ್ರಕಾರ, ಪಾಕಿಸ್ತಾನದಲ್ಲಿ ಕಡಿಮೆ ತೀವ್ರತೆಯ ಭೂಕಂಪ ಸಂಭವಿಸಿದ್ದು, ಇದರ ಆಳ 15 ಕಿಲೋಮೀಟರ್ ಎಂದು ಹೇಳಲಾಗಿದೆ.

ಭೂಕಂಪದ ಕೇಂದ್ರಬಿಂದು ಅಫ್ಘಾನಿಸ್ತಾನದ ಹಿಂದೂ ಕುಶ್ ಪರ್ವತ ಪ್ರದೇಶದ ಬಳಿ ಇದೆ ಎಂದು ಹೇಳಲಾಗಿದೆ. ಇದು ಆಗಾಗ್ಗೆ ಭೂಕಂಪನ ಚಟುವಟಿಕೆಗಳಿಗೆ ಹೆಸರುವಾಸಿಯಾಗಿದೆ.

ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ತಜಿಕಿಸ್ತಾನ್ ಗಡಿ ಪ್ರದೇಶಗಳಲ್ಲಿ ಇಂದು (24) ಭೂಕಂಪನದ ಅನುಭವವಾಗಿದೆ. ರಿಕ್ಟರ್ ಮಾಪಕದಲ್ಲಿ ಇದರ ತೀವ್ರತೆ 4.2 ಎಂದು ದಾಖಲಾಗಿದೆ. ಸ್ಥಳೀಯ ಕಾಲಮಾನ ಬೆಳಗ್ಗೆ 9 ಗಂಟೆ ಸುಮಾರಿಗೆ ಭೂಕಂಪ ಸಂಭವಿಸಿದೆ. ಭೂಕಂಪನದಿಂದಾಗಿ ಜನರು ಭಯಭೀತರಾಗಿ ಮನೆಗಳಿಂದ ಹೊರಗೆ ಓಡಿ ಬಂದಿದ್ದಾರೆ.

ಭೂಕಂಪನವು ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾ, ಉತ್ತರ ಅಫ್ಘಾನಿಸ್ತಾನ ಮತ್ತು ತಜಕಿಸ್ತಾನದ ದೂರದ ಪ್ರದೇಶಗಳಲ್ಲಿ ಕಂಪನವನ್ನು ಉಂಟುಮಾಡಿತು. ಭೂಕಂಪ ವಿಜ್ಞಾನಿಗಳು ಹೇಳುವಂತೆ ಈ ಪ್ರದೇಶವು ಮೂರು ಟೆಕ್ಟೋನಿಕ್ ಪ್ಲೇಟ್‌ಗಳು ಸಂಧಿಸುವ ಸ್ಥಳದಲ್ಲಿ ಬರುತ್ತದೆ. ಹಾಗಾಗಿ ಇಲ್ಲಿ ಸೌಮ್ಯದಿಂದ ಮಧ್ಯಮ ತೀವ್ರತೆಯ ಭೂಕಂಪಗಳು ಹೆಚ್ಚಾಗಿ ಸಂಭವಿಸುತ್ತವೆ ಎನ್ನಲಾಗಿದೆ.

ಅಂದಹಾಗೆ ಪ್ರಸ್ತುತ ಯಾವುದೇ ಜೀವ ಅಥವಾ ಆಸ್ತಿಪಾಸ್ತಿಗೆ ನಷ್ಟ ಸಂಭವಿಸಿಲ್ಲ ಎಂದು ಹೇಳಲಾಗಿದೆ.

(ಏಜೆನ್ಸೀಸ್)