ನ್ಯೂಸ್

ಮೈಸೂರು ಸುತ್ತಮುತ್ತ ಪ್ರದೇಶದಲ್ಲಿ ಭೂಕಂಪನ, ಕೆಲವು ಸೆಕೆಂಡ್​ ನಡುಗಿದ ಭೂಮಿ: ಮನೆಯಿಂದ ಹೊರಬಂದ ಜನ

ಮೈಸೂರು: ಮೈಸೂರು ನಗರದ ಸುತ್ತಮುತ್ತಲ ಪ್ರದೇಶಗಳಾದ ಕೆ.ಆರ್​. ನಗರ, ಸಾಲಿಗ್ರಾಮ, ಹೊಸೂರು ಹೋಬಳಿ ವ್ಯಾಪ್ತಿಯ ಗ್ರಾಮಗಳು, ಹುಣಸೂರು ತಾಲೂಕು ಹಿರಿಕ್ಯಾತನಹಳ್ಳಿ, ಪಿರಿಯಾಪಟ್ಟಣ ಬೆಟ್ಟದಪುರ ಸೇರಿ ಹಲವು ಭಾಗಗಳಲ್ಲಿ ಶುಕ್ರವಾರ ಸಂಜೆ ಲಘು ಭೂಕಂಪನವಾಗಿದೆ. 5 ಸೆಕೆಂಡ್​ ಕಾಲ ಭೂಮಿ ನಡುಗಿತು ಎನ್ನಲಾಗಿದೆ. ಲಾಕ್​ಡೌನ್​ ಹಿನ್ನೆಲೆಯಲ್ಲಿ ಮನೆಯಲ್ಲೇ ಇದ್ದ ಜನರು ಇದರಿಂದ ಆತಂಕಗೊಂಡು ಹೊರಗೋಡಿ ಬಂದರು ಎನ್ನಲಾಗಿದೆ.

ಸೋಮವಾರಪೇಟೆ ಮತ್ತು ಕುಶಾಲನಗರ ಬಳಿಯಿರುವ ಹಾರಂಗಿ ಜಲಾಶಯದಲ್ಲಿ ಇರುವ ಸಿಸ್ಮೋಗ್ರಾಫ್​ನಲ್ಲಿ 2.6 ತೀವ್ರತೆ ದಾಖಲಾಗಿರುವುದಾಗಿ ಹಾರಂಗಿ ವಿಭಾಗದ ಇಂಜಿನಿಯರ್​ ನಾಗರಾಜು ಹೇಳಿದ್ದಾರೆ.

ಮುಂಜನಹಳ್ಳಿ ಗ್ರಾಮದಲ್ಲಿ ಪಾತ್ರೆಗಳು ಮತ್ತು ಮನೆಯ ಹೆಂಚುಗಳು ನೆಲಕ್ಕೆ ಬಿದ್ದಿವೆ. ಹೀಗಾಗಿ ಬೆಚ್ಚಬಿದ್ದಿರುವ ಜನರು ಮನೆಯೊಳಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ.