Vipin Sahu Earnings: ಒಂದು ಕಾಲದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡಿದ್ದ 'ಲ್ಯಾಂಡ್ ಕರಾ ದೇ ಭಾಯ್' ವಿಡಿಯೋ ಮೂಲಕ ಜನಪ್ರಿಯತೆ ಗಳಿಸಿದ್ದ ವಿಪಿನ್ ಸಾಹು ಮತ್ತೆ ಸುದ್ದಿಯಾಗಿದ್ದಾರೆ. ಪ್ಯಾರಾಗ್ಲೈಡಿಂಗ್ ವೇಳೆ ಭಯಗೊಂಡು ಆದಷ್ಟು ಬೇಗ ಕೆಳಗಿಳಿಸುವಂತೆ ಇನ್ಸ್ಟ್ರಕ್ಟರ್ ಬಳಿ ಅಂಗಲಾಚಿದ್ದ ಅವರ ವಿಡಿಯೋ ಭಾರಿ ವೈರಲ್ ಆಗಿತ್ತು.
ಈ ವೈರಲ್ ವಿಡಿಯೋದಿಂದ ಒಟ್ಟು 42 ಲಕ್ಷ ರೂ. ಸಂಪಾದಿಸಿರುವುದಾಗಿ ವಿಪಿನ್ ಸಾಹು ತಿಳಿಸಿದ್ದಾರೆ. ಮೀಮ್ಸ್ ಬಳಕೆಯ ಹಕ್ಕುಗಳನ್ನು ಮಾರಾಟ ಮಾಡುವ ಮೂಲಕ 22 ಲಕ್ಷ ರೂ. ಹಾಗೂ ಯೂಟ್ಯೂಬ್ನಿಂದ ಸುಮಾರು 20 ಲಕ್ಷ ರೂ. ಆದಾಯ ಬಂದಿದೆ ಎಂದು ಕಂಟೆಂಟ್ ಕ್ರಿಯೇಟರ್ ನಿಶು ತಿವಾರಿ ಅವರೊಂದಿಗಿನ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ
2019ರಲ್ಲಿ ಹಿಮಾಚಲ ಪ್ರದೇಶದಲ್ಲಿ ಪ್ಯಾರಾಗ್ಲೈಡಿಂಗ್ ಮಾಡುತ್ತಿದ್ದ ವೇಳೆ ವಿಪಿನ್ ಸಾಹು ಅವರ ವಿಡಿಯೋ ಚಿತ್ರೀಕರಿಸಲಾಗಿತ್ತು. ಆ ವಿಡಿಯೋದಲ್ಲಿ ಭಯಗೊಂಡ ಅವರು ಪದೇಪದೆ 'ಲ್ಯಾಂಡ್ ಕರಾ ದೇ ಭಾಯ್' ಎಂದು ಕೂಗಿದ್ದರು. ಬಳಿಕ ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ, ಅವರ ಮಾತು ಜನಪ್ರಿಯ ಮೀಮ್ ಆಗಿ ಗುರುತಿಸಿಕೊಂಡಿತ್ತು.
ವೈರಲ್ ವಿಡಿಯೋದಿಂದ ಜನಪ್ರಿಯತೆ ಗಳಿಸುವ ಮೊದಲೇ ತಾವು ಹಲವು ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದಾಗಿ ವಿಪಿನ್ ತಿಳಿಸಿದ್ದಾರೆ. ಜಿಮ್ಗಳು ಹಾಗೂ ಟೈಲ್ಸ್ ಶೋರೂಮ್ಗಳನ್ನು ನಡೆಸುತ್ತಿದ್ದು, ಭಾರತ, ದುಬೈ ಮತ್ತು ಜಾರ್ಜಿಯಾದಲ್ಲೂ ವ್ಯವಹಾರ ಹೊಂದಿದ್ದಾರೆ. ಸದ್ಯ ಅವರು ಜಾರ್ಜಿಯಾದಲ್ಲಿ ವಾಸಿಸುತ್ತಿದ್ದಾರೆ.
ಇನ್ನು, ಎಂಟಿವಿ ರೋಡೀಸ್ನಲ್ಲಿ ಭಾಗವಹಿಸುವ ಮೂಲಕ ವೈರಲ್ ವಿಡಿಯೋದಿಂದ ಬಂದಿದ್ದ ತಮ್ಮ ಇಮೇಜ್ ಬದಲಿಸಲು ವಿಪಿನ್ ಬಯಸಿದ್ದರು. ಅಲ್ಲದೆ, ತಮ್ಮ ಎನ್ಜಿಒ ಮೂಲಕ ನಡೆಸುತ್ತಿರುವ ಸಮಾಜ ಸೇವಾ ಕಾರ್ಯಗಳ ಬಗ್ಗೆಯೂ ಜನರಿಗೆ ತಿಳಿಸುವುದು ಇದರ ಉದ್ದೇಶವಾಗಿತ್ತು ಎಂದು ಹೇಳಿದ್ದಾರೆ.