ನ್ಯೂಸ್

ಪ್ರಾಥಮಿಕ ಶಾಲಾ ಶಿಕ್ಷಕರ ಸಮಸ್ಯೆ ಶೀಘ್ರ ಇತ್ಯರ್ಥ; ಮಧು ಬಂಗಾರಪ್ಪ

ಬೆಂಗಳೂರು: ಪ್ರಾಥಮಿಕ ಶಾಲಾ ಶಿಕ್ಷಕ(ಪಿಎಸ್‌ಟಿ)ರ ಸಿ ಅಂಡ್ ಆರ್ ಸಮಸ್ಯೆಯನ್ನು ಆದಷ್ಟು ಶೀಘ್ರ ಇತ್ಯರ್ಥ ಮಾಡಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ತಮ್ಮ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 2017 ರಲ್ಲಿ ಒಂದು ಕಾನೂನು ಮಾಡಿದ್ದರು. ಆಗ ನೋಡಿಕೊಂಡು ಮಾಡಬೇಕಿತ್ತು. ಅವತ್ತು ಸ್ವಲ ನ್ಯೂನತೆ ಆಗಿದೆ. ಏಳು ವರ್ಷಗಳಿಂದ ಹಿಂಬಡ್ತಿ ಆಗಿದೆ. ಸಿ ಅಂಡ್ ಆರ್ ರೂಲ್ಸ್ ಆಗಿರುವುದರಿಂದ ಸರ್ಕಾರದ ಮಟ್ಟದಲ್ಲಿ ಚರ್ಚೆ ಆಗಬೇಕು. ಈ ಬಗ್ಗೆ ನಾನು ಸಿಎಂ ಜೊತೆಗೆ ಮಾತಾಡಿದ್ದೇನೆ. ಅನ್ಯಾಯ ಆದವರಿಗೆ ಸಹಾಯ ಆಗುವ ರೀತಿಯಲ್ಲಿ ಹೇಗೆ ಮಾಡಬೇಕು. ಆದಷ್ಟು ಶೀಘ್ರದಲ್ಲೇ ಇತ್ಯರ್ಥಪಡಿಸುತ್ತೇವೆ ಎಂದು ತಿಳಿಸಿದರು.

ಸಿಎಂ ಸಮಯ ಕೊಟ್ಟ ಬಳಿಕ ಸಮಸ್ಯೆ ಚರ್ಚೆ ಮಾಡುತ್ತೇವೆ. ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಖಾಸಗಿ ಶಿಕ್ಷಣ ಸಂಸ್ಥೆ ಸಂಘದವರು ಕರಾಳ ದಿನ ಮಾಡುತ್ತಿರುವುದು ತಪ್ಪು. ಏನೇ ತೊಂದರೆ ಇದ್ದರೂ ಚರ್ಚೆ ಮಾಡಬೇಕು. ಆಗಸ್ಟ್ 15 ರಂದು ಕರಾಳ ದಿನ ಮಾಡಬಾರದು. ಸಂಘದವರ ಜೊತೆಗೆ ಮಾತನಾಡಿದ್ದೇನೆ. ಅವರು ಸಹ ಖುಷಿಯಾಗಿದ್ದಾರೆ. ಕರಾಳ ದಿನ ಆಚರಣೆ ವಾಪಸ್ ತೆಗೆದುಕೊಂಡಿದ್ದಾರೆ ಎಂದು ಮಧು ಬಂಗಾರಪ್ಪ ಹೇಳಿದರು.