ನ್ಯೂಸ್

ಬಿಟ್ಟೆನೆಂದರೂ ಬಿಡದ ಹೆಮ್ಮಾರಿ ಕರೊನಾ, 70 ದಿನಗಳಾದರೂ ದೇಹದಲ್ಲೇ ಠಿಕಾಣಿ, ಗುಣಮುಖರಾದವರಲ್ಲಿ ಪದೇಪದೆ ಸೋಂಕು

ವುಹಾನ್​: ಕರೊನಾ ಜನ್ಮಸ್ಥಾನವಾದ ವುಹಾನ್​ನಲ್ಲಿ ಮಹಾಮಾರಿಯನ್ನು ಹಬ್ಬುವುದನ್ನು ನಿಯಂತ್ರಿಸಲಾಗಿದೆ. ಲಾಕ್​​ಡೌನ್​ ನಿರ್ಬಂಧ ತೆರವುಗೊಳಿಸಲಾಗಿದೆ. ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಆದರೆ, ಹೊಸದೊಂದು ಆತಂಕ ಮತ್ತೆ ಅಲ್ಲಿ ಎದುರಾಗಿದೆ. ಮಾತ್ರವಲ್ಲ ಇಟಲಿ, ದಕ್ಷಿಣ ಕೊರಿಯಾದಲ್ಲೂ ಇಂಥದ್ದೇ ಕಳವಳ ವ್ಯಕ್ತವಾಗಿದೆ.

ಕೋವಿಡ್​ ಗುಣಲಕ್ಷಣದಿಂದ ಮುಕ್ತರಾದ, ಪರೀಕ್ಷೆಯಲ್ಲಿ ನೆಗೆಟಿವ್​ ಫಲಿತಾಂಶ ಬಂದ ರೋಗಿಗಳನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಇದಾಗಿ ತಿಂಗಳುಗಳೇ ಕಳೆದರೂ ಕರೊನಾ ವೈರಸ್​ ಮಾತ್ರ ಅವರ ದೇಹದಿಂದ ದೂರಾಗುತ್ತಿಲ್ಲ. ವುಹಾನ್​ವೊಂದರಲ್ಲಿ ಇಂಥ ಹತ್ತಾರು ರೋಗಿಗಳಿದ್ದಾರೆ.

ವ್ಯಕ್ತಿಯೊಬ್ಬ ಗುಣಮುಖವಾಗಿ 70 ದಿನಗಳೇ ಕಳೆದಿವೆ. ಈ ಅವಧಿಯಲ್ಲಿ ನಡೆಸಿದ ಹತ್ತು ಪರೀಕ್ಷೆಯಲ್ಲಿ ಒಂದೆರಡು ನೆಗೆಟಿವ್​ ಬಂದರೆ ಉಳಿದೆಲ್ಲವೂ ಪಾಸಿಟಿವ್​ ಆಗಿವೆ. ನಾನು ಆರೋಗ್ಯದಿಂದ ಇದ್ದೇನೆ. ಆದರೆ, ಪರೀಕ್ಷೆಯ ಫಲಿತಾಂಶಗಳಲ್ಲಿ ಪಾಸಿಟವ್​ ಬರುತ್ತಿದೆ ಎನ್ನುವುದು ರೋಗಿಯ ಆಳಲು. ಮೂರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದರೂ ವೈರಸ್​ನಿಂದ ಆತನಿಗೆ ಮುಕ್ತಿಯಿಲ್ಲದಂತಾಗಿದೆ. ಇನ್ನೂ ಕೆಲವರಲ್ಲಿ ಗುಣಮುಖರಾದ 50-60 ದಿನಗಳಲ್ಲಿ ಸೋಂಕು ಮತ್ತೆ ಕಾಣಿಸಿಕೊಳ್ಳುತ್ತಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ಜಾಗತಿಕವಾಗಿ ಕರೊನಾ ಶಂಕಿತರನ್ನು 14 ದಿನಗಳವರೆಗೆ ಕ್ವಾರಂಟೈನ್​ನಲ್ಲಿ ಇಡಲಾಗುತ್ತದೆ. ಆದರೆ, ಇದಾದ ಬಳಿಕವೂ ಅವರಲ್ಲಿ ಯಾವುದೇ ಲಕ್ಷಣಗಳಿಲ್ಲದಿದ್ದರೂ ಸೋಂಕಿಗೆ ಒಳಗಾಗಿರುವ ಸಾಧ್ಯತೆಗಳಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

ದಕ್ಷಿಣ ಕೊರಿಯಾದಲ್ಲೂ ಇಂಥ ಸಾವಿರಕ್ಕೂ ಅಧಿಕ ರೋಗಿಳಿದ್ದಾರೆ. ಗುಣಮುಖರಾದ ಬಳಿಕ ಕೆಲವರಲ್ಲಿ ನಾಲ್ಕು ಅಥವಾ ಅದಕ್ಕೂ ಹೆಚ್ಚಿನ ದಿನಗಳ ಬಳಿಕ ಸೋಂಕು ಇರುವುದು ಕಂಡುಬಂದಿದೆ. ಇಟಲಿಯಲ್ಲೂ ಕೂಡ ಒಂದು ತಿಂಗಳ ಬಳಿಕ ಗುಣಮುಖರಾದವರನ್ನು ಪರೀಕ್ಷೆಗೊಳಪಡಿಸಿದಾಗ ಸೋಂಕು ಇನ್ನೂ ದೂರಾಗದಿರುವುದು ಗೊತ್ತಾಗಿದೆ.

ಗುಣಮುಖರಾದ ಬಳಿಕ ರೋಗದ ಯಾವುದೇ ಲಕ್ಷಣಗಳಿಲ್ಲದೇ ಇದ್ದರೂ ಸೋಂಕು ಹೊಂದಿರುವುದು ಗೊತ್ತಾಗುತ್ತಿದೆ. ಅಂಥವರಲ್ಲಿ ಕೆಲವರಷ್ಟೇ ಮತ್ತೆ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ ಎಂದು ಚೀನಾದ ಪೀಕಿಂಗ್​ ವಿವಿ ಸಾಂಕ್ರಾಮಿಕ ರೋಗಗಳ ವಿಭಾಗದ ನಿರ್ದೇಶಕ ವಾಂಗ್​ ಗಿಕಿಯಾಂಗ್​ ತಿಳಿಸಿದ್ದಾರೆ. ಆದರೆ, ವೈರಸ್​ನ ಈ ಗುಣಕ್ಕೆ ಕಾರಣವೇನು ಎಂಬುದು ಗೊತ್ತಾಗುತ್ತಿಲ್ಲ ಎಂದು ವೈದ್ಯರು ಹೇಳುತ್ತಿದ್ದಾರೆ.