ಬೆಂಗಳೂರು: ಕೃಷಿ ಜಮೀನು ವಾರಸುದಾರರು ಮರಣ ಹೊಂದಿದ ನಂತರ ಕಾಲಕಾಲಕ್ಕೆ ಪೌತಿ ಖಾತೆಯಾಗದೆ ಉಳಿದಿರುವ 52.40 ಲಕ್ಷ ಪಹಣಿಗಳಲ್ಲಿ ಕೇವಲ 8.37 ಲಕ್ಷ ಆಸ್ತಿಗಳ ಇ-ಪೌತಿ ಪ್ರಕ್ರಿಯೆ ಪೂರ್ಣಗೊಂಡಿದ್ದು, 44 ಲಕ್ಷ ಪಹಣಿಗಳು ಮೃತರ ಹೆಸರಲ್ಲೇ ಉಳಿದಿವೆ.
2024ರ ಮೇನಲ್ಲಿ ಕಂದಾಯ ಇಲಾಖೆ ಅಭಿಯಾನ ಹಮ್ಮಿಕೊಂಡಿದ್ದರೂ ಇ-ಪೌತಿ ಪೂರ್ಣಗೊಂಡಿಲ್ಲ. ಸೆಪ್ಟೆಂಬರ್ ಅಂತ್ಯಕ್ಕೆ 8.37 ಲಕ್ಷ ಆಸ್ತಿಗಳ ಇ-ಪೌತಿ ಪೂರ್ಣಗೊಂಡಿದ್ದು, ವಿಎ/ಆರ್‌ಐ/ಎಸ್‌ಎಚ್‌ಒ ಲಾಗಿನ್‌ನಲ್ಲಿ 23.32 ಲಕ್ಷ ಅರ್ಜಿಗಳು ಬಾಕಿ ಉಳಿದಿವೆ. ಈ ಪೈಕಿ 8 ಲಕ್ಷ ಆಸ್ತಿಗಳು ಇ-ಪೌತಿಗೆ ಅರ್ಹವಾಗಿವೆ ಎಂದು ಅಧಿಕಾರಿಗಳು ಒಪ್ಪಿಕೊಂಡರೂ ಖಾತೆಗೆ ಮಾತ್ರ ಗ್ರೀನ್ ಸಿಗ್ನಲ್ ತೋರಿಸುತ್ತಿಲ್ಲ. ಒಟ್ಟಾರೆ ಶೇ.23.37 ಇ-ಪೌತಿ ಪೂರ್ಣವಾಗಿವೆ ಎಂದು ಕಂದಾಯ ಇಲಾಖೆ ಮಾಹಿತಿ ನೀಡಿದೆ.
ಕಂದಾಯ ಇಲಾಖೆ ಕೃಷಿ ಭೂಮಿಯೊಂದಿಗೆ ಆಧಾರ್ ಸೀಡಿಂಗ್ ನಡೆಸಿದಾಗ 4.20 ಕೋಟಿ ಕೃಷಿ ಆಸ್ತಿಗಳನ್ನು ಗುರುತಿಸಿತ್ತು. ಈ ಪೈಕಿ 2.25 ಕೋಟಿ ಭೂ ಮಾಲೀಕರು ಆಧಾರ್ ಲಿಂಕ್ ಮಾಡಿಸಿದ್ದರು. ಉಳಿದ ಆಸ್ತಿಗಳ ಪೈಕಿ 52.40 ಲಕ್ಷ ಭೂ ಮಾಲೀಕರು ಮೃತರಾಗಿದ್ದು, ಅವರ ಹೆಸರಿನಲ್ಲಿ ಪಹಣಿ ಇರುವುದು ಬೆಳಕಿಗೆ ಬಂದಿದೆ. ಇನ್ನೂ 70 ಲಕ್ಷ ಭೂಮಿಗಳು ಕೃಷಿಯೇತರ ಉದ್ದೇಶಕ್ಕೆ ಬಳಕೆಯಾಗಿರುವುದು ಗೊತ್ತಾಗಿತ್ತು. ಆದ್ದರಿಂದ ಪೌತಿ ಖಾತೆ ವರ್ಗಾವಣೆ ಆಗದ ಕಾರಣಕ್ಕೆ ವಾರಸುದಾರರಿಗೆ ಸರ್ಕಾರದ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ.
ಗ್ರಾಮ ಅಧಿಕಾರಿಗಳು, ಕಂದಾಯ ನಿರೀಕ್ಷಕ (ಆರ್‌ಐ) ಸೇರಿ ಕಂದಾಯ ಇಲಾಖೆ ಅಧಿಕಾರಿ ಗ್ರಾಮಗಳಿಗೆ ಹೋಗಿ ಬಾಕಿ ಇರುವ ಪೌತಿ ಖಾತೆಗಳ ವಿವರ ಪ್ರಕಟಿಸಿದಾಗ ಇದರ ನಡುವೆ ಸಾಕಷ್ಟು ಕಾನೂನು ತೊಡಕು ಎದುರಾಗಿದ್ದವು. ವಾರಸುದಾರರನ್ನು ಕರೆದು ಸ್ಥಳದಲ್ಲೇ ವಂಶವೃಕ್ಷ ತಯಾರಿಸಿ ಆಧಾರ್ ನಂಬರ್ ಪಡೆದು ಪೌತಿ ಖಾತೆ ಮಾಡುವ ಮೂಲಕ ಲಾನುಭವಿಗೆ ಸುಲಭವಾಗಿ ಖಾತೆ ನೀಡುವ ಪ್ರಯತ್ನ ಸಹ ನಡೆಸಲಾಗಿತ್ತು. ಕೊನೆಗೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಇತ್ತೀಚಿಗೆ ಇ-ಪೌತಿ ಅಭಿಯಾನ ಕುಂಠಿತವಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.
ವಿವಾದ ಇದ್ದರೆ ಪೆಂಡಿಂಗ್ ನ್ಯಾಯಾಲಯದಲ್ಲಿ ಸಿವಿಲ್ ವ್ಯಾಜ್ಯ ಇದ್ದರೆ, ವಾರಸುದಾರರಲ್ಲಿ ಒಮ್ಮತ ಇಲ್ಲದಿದ್ದರೆ ವಿವಾದಿತ ಪೌತಿ ಖಾತೆಗಳನ್ನು ಬಾಕಿ ಉಳಿಸಲಾಗುತ್ತದೆ. ಅದರಲ್ಲಿಯೂ ತಪ್ಪು ಮಾಹಿತಿ ಕೊಟ್ಟು ಪೌತಿ ಖಾತೆಗೆ ಅರ್ಜಿ ಸಲ್ಲಿಸಿದ್ದರೆ 15 ದಿನಗಳ ಒಳಗಾಗಿ ವಾರಸುದಾರರು ತಡೆ ಹಿಡಿಯಲು ಅವಕಾಶವಿದೆ.