ನವದೆಹಲಿ: ಮುದ್ರಿತ ಪಾಸ್ಪೋರ್ಟ್ ಬದಲಿಗೆ ಎಲೆಕ್ಟ್ರಾನಿಕ್ ಪಾಸ್ಪೋರ್ಟ್ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. 2021ರ ಶುರುವಿನ ಹೊತ್ತಿಗೆ ಪಾಸ್ಪೋರ್ಟ್ ವಿತರಣೆ ಆರಂಭವಾಗುವ ಸಂಭವವಿದೆ. ಪಾಸ್ಪೋರ್ಟ್ ವಂಚನೆ (ಫೋರ್ಜರಿ) ತಡೆಯುವುದು ಹಾಗೂ ವಿಮಾನ ನಿಲ್ದಾಣಗಳಲ್ಲಿ ವಲಸೆ ಪ್ರಕ್ರಿಯೆ ಬೇಗನೆ ಮುಗಿಸಲು ನೆರವಾಗುವುದು ಈ ಯೋಜನೆಯ ಉದ್ದೇಶವಾಗಿದೆ.
ಪ್ರಾಯೋಗಿಕವಾಗಿ 20,000 ಅಧಿಕೃತ ಮತ್ತು ರಾಜತಾಂತ್ರಿಕ ಇ-ಪಾಸ್ಪೋರ್ಟ್ಗಳನ್ನು ಮಂಜೂರು ಮಾಡಲಾಗಿದೆ. ಅವುಗಳಲ್ಲಿ ಎಲೆಕ್ಟ್ರಾನಿಕ್ ಮೈಕ್ರೋಪ್ರೋಸೆಸರ್ ಚಿಪ್ಗಳನ್ನು ಅಳವಡಿಸಲಾಗಿದೆ. ಇದನ್ನೂ ಓದಿ:ಕಾರಿನಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ನಾಲ್ವರನ್ನು ರಕ್ಷಿಸಿದ ಸ್ಥಳೀಯರು
ಇ-ಪಾಸ್ಪೋರ್ಟ್ಗಳು ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆಯ (ಐಸಿಎಒ) ಮಾನದಂಡಗಳಿಗೆ ಅನುಗುಣವಾಗಿ ಇವೆ. ಇ-ಪಾಸ್ಪೋರ್ಟ್ ಯೋಜನೆ ಅನುಷ್ಠಾನಕ್ಕಾಗಿ ಮಾಹಿತಿ ತಂತ್ರಜ್ಞಾನ (ಐಟಿ) ಸೌಕರ್ಯ ಸ್ಥಾಪಿಸಲು ಸರ್ಕಾರ ಸಂಸ್ಥೆಯೊಂದನ್ನು ಆಯ್ಕೆ ಮಾಡಲಿದೆ.
ಇ-ಪಾಸ್ಪೋರ್ಟ್ ಚಾಲ್ತಿಗೆ ಬರುವುದರಿಂದ ಭಾರತೀಯರ ಪ್ರವಾಸ ದಾಖಲೆಪತ್ರದ ಭದ್ರತಾ ಅಂಶಗಳು ಬಲಗೊಳ್ಳಲಿವೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಜೂನ್ 24ರಂದು ಹೇಳಿದ್ದರು.
ಚಿಪ್ ನೆರವಿನೊಂದಿಗೆ ಕಾರ್ಯಾಚರಿಸುವ ಸುಧಾರಿತ ಭದ್ರತಾ ಅಂಶಗಳ್ನೊಳಗೊಂಡ ಇ-ಪಾಸ್ಪೋರ್ಟ್ ರೂಪಿಸಲು ನಾಸಿಕ್ನಲ್ಲಿರುವ ಭಾರತೀಯ ಭದ್ರತಾ ಪ್ರೆಸ್ ಹಾಗೂ ರಾಷ್ಟ್ರೀಯ ಮಾಹಿತಿ ಕೇಂದ್ರದೊಂದಿಗೆ ತಮ್ಮ ಸಚಿವಾಲಯ ಕೆಲಸ ಮಾಡುತ್ತಿದೆ ಎಂದು ಸಚಿವರು ತಿಳಿಸಿದ್ದರು.