ಬೆಂಗಳೂರು: ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಕೊನೆಗೂ ಪೊಲೀಸ್ ನೇಮಕಾತಿ ವಿಭಾಗದ ಡಿವೈಎಸ್ಪಿ ಮತ್ತು ಸಬ್ಇನ್ಸ್ಪೆಕ್ಟರ್ (ಆರ್ಎಸ್ಐ)ನನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ಇದರೊಂದಿಗೆ ನೇಮಕಾತಿ ವಿಭಾಗದ ಕಚೇರಿಯಲ್ಲಿಯೇ ಈವರೆಗೆ 6 ಮಂದಿ ಸೆರೆಸಿಕ್ಕಿದ್ದಾರೆ.
ಅಕ್ರಮ ಆರೋಪದ ಮೇಲೆ ಇತ್ತೀಚೆಗಷ್ಟೇ ಆಂತರಿಕ ಭದ್ರತಾ ವಿಭಾಗಕ್ಕೆ(ಐಎಸ್ಡಿ) ಎತ್ತಂಗಡಿ ಆಗಿದ್ದ ಡಿವೈಎಸ್ಪಿ ಶಾಂತಕುಮಾರ್ ಮತ್ತು ಆರ್ಎಸ್ಐ ಲೋಕೇಶಪ್ಪ ಬಂಧಿತರು. ಐಎಸ್ಡಿ ವಿಭಾಗಕ್ಕೆ ವರ್ಗಾವಣೆಯಾಗಿರುವ ಅಮೃತ್ ಪೌಲ್ ನೇಮಕಾತಿ ವಿಭಾಗದ ಎಡಿಜಿಪಿ ಆಗಿದ್ದಾಗ ಡಿಐಜಿ ಹುದ್ದೆ ಖಾಲಿ ಇತ್ತು. ಹಾಗಾಗಿ ಎಡಿಜಿಪಿ ಬಿಟ್ಟರೆ ಶಾಂತಕುಮಾರ್ ಅವರದ್ದು 2ನೇ ದೊಡ್ಡ ಹುದ್ದೆ ಆಗಿತ್ತು. ಎಸ್ಐ ನೇಮಕಾತಿ ಅಕ್ರಮ ಬೆಳಕಿಗೆ ಬರುತ್ತಿದಂತೆ ಶಾಂತಕುಮಾರ್ ಮೇಲೆ ಗಂಭೀರ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಸಿಐಡಿ ಅಧಿಕಾರಿಗಳು, ನೋಟಿಸ್ ಕೊಟ್ಟು ಗುರುವಾರ ವಿಚಾರಣೆಗೆ ಕರೆದಿದ್ದರು. ತನಿಖಾಧಿಕಾರಿ ಮುಂದೆ ಹಾಜರಾಗಿದ್ದ ಶಾಂತಕುಮಾರ್, ವಿಚಾರಣೆ ವೇಳೆ ಸಾಕ್ಷ್ಯ ಲಭ್ಯವಾದ ಕಾರಣ ಬಂಧಿಸಲಾಗಿದೆ.
ಸಕಾನ್ಸ್ಟೇಬಲ್ನಿಂದ ಡಿವೈಎಸ್ಪಿ ಹುದ್ದೆವರೆಗೆ: ನಗರ ಸಶಸ್ತ್ರ ಮೀಸಲು ಪಡೆಗೆ ಪೇದೆ ಆಗಿ ಇಲಾಖೆಗೆ ಸೇರಿದ ಶಾಂತಕುಮಾರ್, ನೇಮಕಾತಿ ವಿಭಾಗಕ್ಕೆ ಎರವಲು ಸೇವೆ ಮೇರೆಗೆ ನಿಯೋಜನೆಗೊಂಡು ಹಲವು ವರ್ಷ ಠಿಕಾಣಿ ಹೂಡಿದ್ದರು. 2006ರಲ್ಲಿ ಸಶಸ್ತ್ರ ಮೀಸಲು ಎಸ್ಐ(ಆರ್ಎಸ್ಐ) ಹುದ್ದೆಗೆ ಇನ್ ಸರ್ವೀಸ್ ಕೋಟಾದಡಿ ಆಯ್ಕೆಯಾಗಿ, ತುಮಕೂರು ಜಿಲ್ಲೆಯಲ್ಲಿ ಪ್ರೊಬೇಷನರಿ ಮುಗಿಸಿ ಬೆಂಗಳೂರು ನಗರ ಸಶಸ್ತ್ರ ಮೀಸಲು ಪಡೆಯಲ್ಲಿ ನಿಯೋಜನೆ ಗೊಂಡಿದ್ದರು. ಅಲ್ಲಿಂದ ಐಎಸ್ಡಿ ವಿಭಾಗಕ್ಕೆ ವರ್ಗವಾಗಿತ್ತು. ಮತ್ತೆ ಪ್ರಭಾವ ಬಳಸಿ 2010ರಲ್ಲಿ ನೇಮಕಾತಿ ವಿಭಾಗಕ್ಕೆ ಎರವಲು ಸೇವೆ ಮೇರೆಗೆ ಬಂದಿದ್ದರು. ಶಾಂತಕುಮಾರ್, ಯಾರೇ ಭೇಟಿಗೆ ಬಂದರೂ ಕಚೇರಿಗೆ ಕರೆಯದೆ ಸಿಐಡಿ ಆವರಣದ ಕ್ಯಾಂಟೀನ್ಲ್ಲೇ ವ್ಯವಹಾರ ನಡೆಸುತ್ತಿದ್ದರು. ಸಂಜೆ ಕಚೇರಿ ಸಮಯ ಮುಗಿದ ಮೇಲೆ ರಾತ್ರಿ ಹೊತ್ತಲ್ಲೇ ವ್ಯವಹಾರಗಳು ನಡೆಯು ತ್ತಿದ್ದವು ಎನ್ನಲಾಗಿದೆ. ಶಾಂತಕುಮಾರ್ 2006ರಲ್ಲಿ ಕಲಬುರಗಿಯ ನಾಗನಹಳ್ಳಿ ಪೊಲೀಸ್ ತರಬೇತಿ ಕಾಲೇಜಿನಲ್ಲಿ 1 ವರ್ಷದ ಆರ್ಎಸ್ಐ ಬುನಾದಿ ತರಬೇತಿ ಪಡೆದಿದ್ದರು.
ಅಕ್ರಮದ ಮಾಸ್ಟರ್ ಮೈಂಡ್: ಶಾಂತಕುಮಾರ್, ಅಕ್ರಮ ನೇಮಕಾತಿಯ ಮಾಸ್ಟರ್ವೆುೖಂಡ್ ಆಗಿದ್ದರು ಎನ್ನಲಾಗಿದೆ. ಸಿಐಡಿ ಆವರಣದಲ್ಲಿರುವ ಸ್ಟ್ರಾಂಗ್ ರೂಮ್ಲ್ಲಿದ್ದ ಅಭ್ಯರ್ಥಿಗಳ ಒಎಂಆರ್ ಶೀಟ್ಗಳನ್ನು ರಾತ್ರೋರಾತ್ರಿ ತೆಗೆದು ತಿದ್ದಿ ಅಧಿಕ ಅಂಕ ಬರುವಂತೆ ಮಾಡುತ್ತಿದ್ದರು. ಲಕ್ಷಾಂತರ ರೂ. ಕೊಟ್ಟು ಡೀಲ್ ಕುದುರಿಸಿರುವ ಅಭ್ಯರ್ಥಿಗಳಿಗೆ ಅನುಕೂಲ ಆಗುವಂತೆ ಬೇಕಾದ ಪರೀಕ್ಷಾ ಕೇಂದ್ರಗಳಲ್ಲಿಯೇ ಲಿಖಿತ ಪರೀಕ್ಷೆ ಬರೆಯಲು ಪ್ರವೇಶ ಪ್ರಮಾಣಪತ್ರವನ್ನು ಸಿದ್ಧಪಡಿಸಿ ಕೊಡುತ್ತಿದ್ದರಲ್ಲದೆ, ಯಾವೆಲ್ಲ ರೀತಿ ಅಕ್ರಮ ಎಸಗಬಹುದು ಎಂಬುದರ ಬಗ್ಗೆ ಪ್ಲಾ್ಯನ್ ರೂಪಿಸುತ್ತಿದ್ದರು ಎನ್ನಲಾಗಿದೆ.
ಶಿಷ್ಯನಾಗಿದ್ದ ಆರ್ಎಸ್ಐ: ನೇಮಕಾತಿ ವಿಭಾಗದ ಸ್ಟ್ರಾಂಗ್ ಕೊಠಡಿ ಒಎಂಆರ್ ಪ್ರತಿ ಇದ್ದ ಬಾಕ್ಸ್ಗಳ ಭದ್ರತೆಗೆ ಬಂಧಿತ ಸಶಸ್ತ್ರ ಮೀಸಲು ಪಡೆ ಆರ್ಎಸ್ಐ ಲೋಕೇಶಪ್ಪರನ್ನು ನಿಯೋಜಿಸಲಾಗಿತ್ತು. ಇವರು 2017-18ನೇ ಸಾಲಿನಲ್ಲಿ ಆರ್ಎಸ್ಐ ನೇಮಕಾತಿಯಲ್ಲಿ 2ನೇ ರ್ಯಾಂಕ್ ಪಡೆದು ಆಯ್ಕೆಗೊಂಡಿದ್ದು, ಮಂಗಳೂರಿನಲ್ಲಿ ಪೊ›ಬೇಷನರಿ ಆಗಿದ್ದರು. ಶಾಂತಕುಮಾರ್ ಸಲಹೆ ಮೇರೆಗೆ ನೇಮಕಾತಿ ವಿಭಾಗಕ್ಕೆ ಎರವಲು ಸೇವೆಗೆ ನಿಯೋಜನೆಗೊಂಡಿದ್ದರು. ಶಾಂತಕುಮಾರ್ ಕಡೆಯ ಅಭ್ಯರ್ಥಿಗಳ ಒಎಂಆರ್ ಪ್ರತಿಗಳು, ಅವರ ರೋಲ್ ನಂಬರ್ ಲೋಕೇಶಪ್ಪನಿಗೆ ಚೆನ್ನಾಗಿ ಗೊತ್ತಿತ್ತು. ಶಾಂತಕುಮಾರ್ ಗ್ಯಾಂಗ್ನಲ್ಲಿ ಸಕ್ರಿಯವಾಗಿದ್ದರು ಎನ್ನಲಾಗಿದೆ.
ಕಲಬುರಗಿ: ಪಿಎಸ್ಐ ನೇಮಕ ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿದಂತೆ ನಗರದ ಕೆಎಸ್ಆರ್ಪಿ ಸಹಾಯಕ ಕಮಾಂಡೆಂಟ್ (ಡಿವೈಎಸ್ಪಿ) ವೈಜನಾಥ ರೇವೂರ ಅವರನ್ನು ಅಮಾನತು ಮಾಡಿ ಸರ್ಕಾರ ಆದೇಶ ಹೊರಡಿಸಿದ್ದು, ಮತ್ತೊಂದೆಡೆ ಪ್ರಕರಣದ ಕಿಂಗ್ಪಿನ್ ಆರ್.ಡಿ.ಪಾಟೀಲ್ ಸಹಚರ ಶಿವಪ್ಪ ಆಲಮೇಲ್ನನ್ನು ವಶಕ್ಕೆ ಪಡೆದು ಸಿಐಡಿ ವಿಚಾರಣೆ ನಡೆಸುತ್ತಿದೆ. ಕಿಂಗ್ಪಿನ್ ಆರ್.ಡಿ.ಪಾಟೀಲ್ ಆಪ್ತನಾಗಿ ಗುರುತಿಸಿಕೊಂಡು ಹಲವು ಅಭ್ಯರ್ಥಿಗಳೊಂದಿಗೆ ಡೀಲ್ ಕುದುರಿಸಿದ್ದ ಅನುಮಾನದ ಮೇರೆಗೆ ರೇವೂರ ಅವರನ್ನು ಬಂಧಿಸಿ ಕೆಎಸ್ಆರ್ಪಿ ಅಧಿಕಾರಿಗಳಿಗೆ ಸಿಐಡಿ ಅಧಿಕಾರಿಗಳು ಮಾಹಿತಿ ನೀಡಿದ್ದರು. ಕೆಎಸ್ಆರ್ಪಿ ಹಿರಿಯ ಅಧಿಕಾರಿಗಳ ಶಿಫಾರಸಿನಂತೆ ರಾಜ್ಯ ಸರ್ಕಾರದ ಗೃಹ ಇಲಾಖೆ ಕಾರ್ಯದರ್ಶಿ ಗುರುವಾರ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮತ್ತೊಂದೆಡೆ ಹಲವು ದಿನಗಳಿಂದ ಸಿಐಡಿಯಿಂದ ತಪ್ಪಿಸಿಕೊಂಡಿದ್ದ ಶಿವಪ್ಪ ಆಲಮೇಲ್ನನ್ನು ಸಿಐಡಿ ಅಧಿಕಾರಿಗಳು ಗುರುವಾರ ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದು, ಪರೀಕ್ಷೆ ಅಕ್ರಮದಲ್ಲಿ ಈತನ ಪಾತ್ರದ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಇಬ್ಬರು ಜೈಲಿಗೆ: ಪ್ರಕರಣದಲ್ಲಿ ಬಂಧಿತರಾಗಿರುವ ಡಿವೈಎಸ್ಪಿ ಮಲ್ಲಿಕಾರ್ಜುನ ಸಾಲಿ, ಬೆರಳಚ್ಚು ವಿಭಾಗದ ಸಿಪಿಐ ಆನಂದ ಮೇತ್ರಿ ಅವರ ಸಿಐಡಿ ಕಸ್ಟಡಿ ಗುರುವಾರ ಮುಗಿದಿದೆ. ಆರೋಗ್ಯ ತಪಾಸಣೆ ಬಳಿಕ ನ್ಯಾಯಾಲಯದ ಮುಂದೆ ಹಾಜರುಪಡಿಸಿದ ಬಳಿಕ ನ್ಯಾಯಾಂಗ ವಶಕ್ಕೆ ಒಪ್ಪಿಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ 32 ಜನರನ್ನು ಬಂಧಿಸಿದ್ದು, 27 ಜನ ಜೈಲಿಗೆ ಹೋಗಿದ್ದಾರೆ. ಬಾಡಿ ವಾರಂಟ್ ಮೇಲೆ ಆರ್ಡಿ ಪಾಟೀಲ್ ಬೆಂಗಳೂರು, ಮೂವರು (ಎಂಎಸ್ಐ ಕಾಲೇಜಿನಲ್ಲಿ ಅಕ್ರಮ) ಸಿಐಡಿ (ಸ್ಟೇಷನ್ ಬಜಾರ್ ಠಾಣೆಯಲ್ಲಿ) ಕಸ್ಟಡಿಯಲ್ಲಿದ್ದಾರೆ.
ವಾರಂಟ್ ಇದ್ರೂ ಸಿಗದ ಆರೋಪಿಗಳು: ಆರ್.ಡಿ.ಪಾಟೀಲ್, ಮಂಜುನಾಥ ಮೇಳಕುಂದಿ ಬಾಯ್ಬಿಟ್ಟಿರುವ ಇನ್ನು ಹಲವು ಅಭ್ಯರ್ಥಿಗಳು ಕಣ್ಮರೆಯಾಗಿದ್ದು, ಸಿಐಡಿ ಟೀಮ್ ಶೋಧ ಮುಂದುವರಿಸಿದೆ. ಪಿಎಸ್ಐ ಆಯ್ಕೆಯಾಗಿರುವ ಶಾಂತಾಬಾಯಿ ಮತ್ತು ಮಂಜುನಾಥ ಮೇಳಕುಂದಿ ಸಹೋದರ ರವೀಂದ್ರ ವಿರುದ್ಧ ಬಂಧನ ವಾರಂಟ್ ಇದ್ದರೂ ಸಿಐಡಿಗೆ ಶರಣಾಗಿಲ್ಲ.
ವಿರೋಧಿಗಳು ಒಗ್ಗಟ್ಟು: ಹೊರಗಡೆ ಪರಮ ವೈರಿಗಳಾಗಿದ್ದ ಕಿಂಗ್ಪಿನ್ಗಳಾದ ಆರ್.ಡಿ.ಪಾಟೀಲ್ ಮತ್ತು ಮಂಜುನಾಥ ಮೇಳಕುಂದಿ ಜೈಲಿನಲ್ಲಿ ಮುಖಾಮುಖಿಯಾಗಿದ್ದು, ಪರಸ್ಪರ ದ್ವೇಷ ಮರೆತು ಒಗ್ಗಟ್ಟಾಗಿದ್ದಾರೆ ಎನ್ನಲಾಗಿದೆ. ಹೊರಗಡೆ ಇದ್ದಾಗ ಒಬ್ಬರನ್ನು ಮತ್ತೊಬ್ಬರು ಮಟ್ಟ ಹಾಕಲು ಯೋಜನೆ ರೂಪಿಸುತ್ತಿದ್ದರು.
ಜಾಮೀನು ಅರ್ಜಿ ವಜಾ: ಬಂಧಿತ ಇಬ್ಬರು ಅಭ್ಯರ್ಥಿಗಳ ಜಾಮೀನನ್ನು 1ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ತಿರಸ್ಕರಿಸಿದೆ. ಬಂಧಿತರಾದ ಚೇತನ ನಂದಗಾಂವ, ಅರುಣ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ ಇಬ್ಬರ ಮನವಿಯನ್ನು ನ್ಯಾಯಾಧೀಶ ಶುಕ್ಲಾಕ್ಷ ಪಾಲನ್ ತಿರಸ್ಕರಿಸಿದ್ದಾರೆ.