ಡಿವಿಎಸ್ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಸಂಸತ್-2024ರಲ್ಲಿ ವಿದ್ಯಾರ್ಥಿಗಳು ಮತದಾನ ಮಾಡಿದರು. ಸಿ.ಕೆ.ಶ್ರೀಧರ್, ಎನ್.ಎಸ್.ಜ್ಯೋತಿ, ಜಿ.ಎಸ್.ವೆಂಕಟೇಶ್, ಆರ್.ಗಾಯತ್ರಿ, ನಾಗರಾಜ್ ನಾಯ್ಕ ಇತರರಿದ್ದರು.  
ನ್ಯೂಸ್

ಮತ ಚಲಾಯಿಸಿ ಡಿವಿಎಸ್ ವಿದ್ಯಾರ್ಥಿಗಳ ಸಂಭ್ರಮ

ಶಿವಮೊಗ್ಗ: ವಿದ್ಯಾರ್ಥಿಗಳಿಗೆ ದೇಶದಲ್ಲಿ ನಡೆಯುವ ಚುನಾವಣಾ ಪ್ರಕ್ರಿಯೆ ಬಗ್ಗೆ ಜಾಗೃತಿ ಮೂಡಿಸಲು ಶಾಲಾ ಸಂಸತ್ ಪ್ರಕ್ರಿಯೆ ಸಹಕಾರಿ ಎಂದು ಡಿವಿಎಸ್ ಸಂಯುಕ್ತ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಉಪಪ್ರಾಚಾರ್ಯ ಸಿ.ಕೆ.ಶ್ರೀಧರ್ ಹೇಳಿದರು.

ಶಾಲೆಯಲ್ಲಿ ಏರ್ಪಡಿಸಿದ್ದ ಸಂಸತ್-2024 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂದಿನ ವಿದ್ಯಾರ್ಥಿಗಳು ಭವಿಷ್ಯ ಭಾರತದ ಸದೃಢ ಪ್ರಜೆಗಳು. ದೇಶದ ಅಭಿವೃದ್ಧಿಯಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ತರವಾಗಿದೆ ಎಂದು ತಿಳಿಸಿದರು.
ಶಾಲಾ ಸಂಸತ್ ಚುನಾವಣೆಯಲ್ಲಿ ವಿದ್ಯಾರ್ಥಿಗಳು ಮತದಾನ ಮಾಡಿ ಸಂಭ್ರಮಿಸಿದರು. ಇವಿಎಂ ಮತಯಂತ್ರದ ಮೂಲಕ ವಿದ್ಯಾರ್ಥಿಗಳಿಗೆ ಚುನಾವಣೆ ನಡೆಸಿದ್ದು ವಿಶೇಷವಾಗಿತ್ತು. 700ಕ್ಕೂ ಅಧಿಕ ವಿದ್ಯಾರ್ಥಿಗಳು ನಾಲ್ಕು ಮತಗಟ್ಟೆಗಳಲ್ಲಿ ಮತದಾನ ಮಾಡಿದರು. ವಿದ್ಯಾರ್ಥಿನಿಯರಿಗೆ ಪಿಂಕ್ ಮತಗಟ್ಟೆ ವ್ಯವಸ್ಥೆ ಕಲ್ಪಿಸಲಾಗಿತ್ತು.
ಚುನಾವಣೆ ಅಧಿಸೂಚನೆ, ನಾಮಪತ್ರ ಸಲ್ಲಿಕೆ, ಪರಿಶೀಲನೆ, ಚುನಾವಣಾ ಪ್ರಚಾರ, ವಿದ್ಯಾರ್ಥಿಗಳಿಂದ ಮತದಾನ ಪ್ರಕ್ರಿಯೆ, ಮತ ಎಣಿಕೆ ಸೇರಿ ಚುನಾವಣೆಯಲ್ಲಿ ನಡೆಯುವ ಎಲ್ಲ ಪ್ರಕ್ರಿಯೆ ನಡೆಸಲಾಯಿತು. ಶಾಂತಿಯುತ ಮತದಾನಕ್ಕಾಗಿ ಎನ್‌ಸಿಸಿ ವಿದ್ಯಾರ್ಥಿಗಳನ್ನು ನಿಯೋಜಿಸಲಾಗಿತ್ತು. ಎ ಪಕ್ಷ ಆಡಳಿತ ಪಕ್ಷವಾಗಿ ಚುನಾಯಿತಗೊಂಡಿತು. ಬಿ ಪಕ್ಷಕ್ಕೆ ಪ್ರತಿಪಕ್ಷ ಸ್ಥಾನ ಲಭಿಸಿತು.
ಹಿರಿಯ ಶಿಕ್ಷಕ ಜಿ.ಎಸ್.ವೆಂಕಟೇಶ್, ಶಾಲಾ ಸಂಸತ್ತಿನ ಮುಖ್ಯ ಚುನಾವಣಾ ಆಯುಕ್ತೆ ಎನ್.ಎಸ್.ಜ್ಯೋತಿ, ಮತಗಟ್ಟೆ ಅಧಿಕಾರಿಗಳಾಗಿ ನಾಗರಾಜ್ ನಾಯ್ಕ, ಆರ್.ಗಾಯತ್ರಿ, ಕೇಶವಪ್ರಸಾದ್, ಪ್ರದೀಪ್ ಕಾರ್ಯ ನಿರ್ವಹಿಸಿದರು.