ನ್ಯೂಸ್

ಡಿವಿಎಸ್, ಶೋಭಾ ಒಂದೇ ಮತಗಟ್ಟೆಯಲ್ಲಿ ಮತದಾನ

ಮೃತ್ಯುಂಜಯ ಕಪಗಲ್

ಬೆಂಗಳೂರು: ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸಂಸದ, ಮಾಜಿ ಸಿಎಂ ಡಿ.ವಿ.ಸದಾನಂದ ಗೌಡ ಹಾಗೂ ಅಭ್ಯರ್ಥಿ ಶೋಭಾ ಕರಂದ್ಲಾಜೆ ಒಂದೇ ಮತಗಟ್ಟೆಯಲ್ಲಿ ಮತದಾನ ಮಾಡಿದರು.

ಆರ್ ಎಂವಿ ಕ್ಲಬ್ ಸರ್ಕಾರಿ ಶಾಲೆ ಮತಗಟ್ಟೆಗೆ ಪತ್ನಿ ಜತೆಗೆ ಆಗಮಿಸಿದ ಡಿ.ವಿ.ಸದಾನಂದಗೌಡ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು. ಶೋಭಾ ಕರಂದ್ಲಾಜೆ ಕೂಡ ತಮ್ಮ ಹಕ್ಕು ಚಲಾಯಿಸಿ ಹೊರಬಂದರು‌.

ಕಾಲಿಗೆ ನಮಸ್ಕಾರ

ಇದೇ ವೇಳೆ ಸದಾನಂದ ಗೌಡರ ಕಾಲಿಗೆ ಶೋಭಾ ಕರಂದ್ಲಾಜೆ ನಮಸ್ಕರಿಸಿದರು. ದೊಡ್ಡ ಪ್ರಮಾಣದಲ್ಲಿ ಜನರು ಮತ ಚಲಾಯಿಸಲು ನಿಂತಿರುವುದಕ್ಕೆ ಡಿವಿಎಸ್ ಹರ್ಷ ವ್ಯಕ್ತಪಡಿಸಿದಾಗ ಶೋಭಾ ಕರಂದ್ಲಾಜೆ ಹೌದು, ಬೆಳಗ್ಗೆಯಿಂದ ಬಹುತೇಕ ಮತಗಟ್ಟೆಗಳ ಮುಂದೆ ಇದೇ ವಾತಾವರಣ ಕಂಡು ಬರುತ್ತಿದೆ ಎಂದು ಸಂತಸ ಹಂಚಿಕೊಂಡರು.

ನಂತರ ಸುದ್ದಿಗಾರರಿಗೆ ಸದಾನಂದ ಗೌಡ ಪ್ರತಿಕ್ರಿಯಿಸಿ, ಎಲ್ಲ ಮತದಾರರು ಮನೆಯಿಂದ ಹೊರ ಬಂದು ತಮ್ಮ ಹಕ್ಕು ಚಲಾಯಿಸಿ, ಪ್ರಜಾತಂತ್ರ ಉತ್ಸವವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.