ಶಿವಮೊಗ್ಗ: ಡಿವಿಎಸ್(ದೇಶೀಯಾ ವಿದ್ಯಾಶಾಲಾ ಸಮಿತಿ) ಪದವಿಪೂರ್ವ (ಸ್ವತಂತ್ರ) ಕಾಲೇಜಿನ ಸುವರ್ಣ ಮಹೋತ್ಸವ ಮತ್ತು ಡಿವಿಎಸ್‌ನ ಅಮೃತ ಮಹೋತ್ಸವದ ಸಮಾರೋಪ ಸಮಾರಂಭ ಜ.4ರಿಂದ 6ರವರೆಗೆ ಡಿವಿಎಸ್ ಆವರಣದಲ್ಲಿ ನಡೆಯಲಿದೆ ಸಮಿತಿ ಉಪಾಧ್ಯಕ್ಷ ಎಸ್.ಪಿ.ದಿನೇಶ್ ತಿಳಿಸಿದರು.
1972ರಲ್ಲಿ ಆರಂಭಗೊಂಡು ಪ್ರಸ್ತುತ 1,300 ವಿದ್ಯಾರ್ಥಿಗಳು ಶಿಕ್ಷಣ ನೀಡುತ್ತಿರುವ ಡಿವಿಎಸ್ ಪಿಯು ಸ್ವತಂತ್ರ ಕಾಲೇಜಿಗೆ ಈಗ 50ರ ಸಂಭ್ರಮ. ರಾಜ್ಯದಲ್ಲಿ ಪ್ರಾರಂಭಗೊಂಡ ಎರಡು ಸ್ವತಂತ್ರ ಪಿಯು ಕಾಲೇಜುಗಳಲ್ಲಿ ಶಿವಮೊಗ್ಗದ ಡಿವಿಎಸ್ ಕೂಡ ಒಂದಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಜ.4ರಂದು ಬೆಳಗ್ಗೆ 11ಕ್ಕೆ ಮೈಸೂರು ರಾಜ ವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸುವರ್ಣ ಮಹೋತ್ಸವ ಉದ್ಘಾಟಿಸುವರು. ಜ.6ರಂದು ಸಂಜೆ 4.30ಕ್ಕೆ ಡಿವಿಎಸ್‌ನ ಅಮೃತ ಮಹೋತ್ಸವ ಸಮಾರೋಪ ಸಮಾರಂಭವನ್ನು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಉದ್ಘಾಟಿಸುವರು. ಸುಸಜ್ಜಿತ ಪ್ರಯೋಗಾಲಯಗಳು, ಅತಿ ದೊಡ್ಡ ಮತ್ತು ಅತ್ಯುತ್ತಮವಾದ ಗ್ರಂಥಾಲಯ ಹೊಂದಿದ್ದು ಇದುವರೆಗೆ 64 ರ‌್ಯಾಂಕ್ ಪಡೆದಿದೆ. ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆ, ಸಾಂಸ್ಕೃತಿಕ ಸ್ಪರ್ಧೆ, ಕ್ರೀಡೆಗೂ ಒತ್ತು ನೀಡಲಾಗುತ್ತಿದೆ. ಸುವರ್ಣ ಮಹೋತ್ಸವ ಸಂಭ್ರಮಾಚರಣೆ ನಿಮಿತ್ತ ಇತ್ತೀಚೆಗೆ ಆಯೋಜನೆಗೊಂಡಿದ್ದ ಡಿವಿಎಸ್ ಆವಿಷ್ಕಾರ ವಸ್ತು ಪ್ರದರ್ಶನ ಕೂಡ ಯಶಸ್ವಿಯಾಗಿದೆ ಎಂದರು.
600ಕ್ಕಿಂತ ಅಧಿಕ ಪಡೆದವರಿಗೆ ಉಚಿತ ಶಿಕ್ಷಣ:
ಎಸ್ಸೆಸ್ಸೆಲ್ಸಿಯಲ್ಲಿ 600ಕ್ಕಿಂತ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಡಿವಿಎಸ್ ಸಂಸ್ಥೆಯಲ್ಲಿ ಪ್ರಥಮ ಪಿಯುಸಿಗೆ ಉಚಿತ ಪ್ರವೇಶ ನೀಡಲಾಗುತ್ತಿದ್ದು, ಸಂಸ್ಥೆಯ ಇತಿಹಾಸದಲ್ಲೇ ಕಳೆದ ಬಾರಿ 156 ವಿದ್ಯಾರ್ಥಿಗಳಿಗೆ ಶುಲ್ಕವಿಲ್ಲದೆ ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗಕ್ಕೆ ಪ್ರವೇಶ ನೀಡಲಾಗಿದೆ. ಕಾಲೇಜಿನ ಪ್ರಥಮ ಪಿಯುಸಿ ಟಾಪರ್‌ಗಳಿಗೆ ದ್ವಿತೀಯ ಪಿಯುಗೆ ಉಚಿತ ಪ್ರವೇಶ ನೀಡಲಾಗುತ್ತಿದೆ ಎಂದು ಹೇಳಿದರು.
ಸಮಿತಿ ಅಧ್ಯಕ್ಷ ಕೆ.ಎನ್.ರುದ್ರಪ್ಪ ಕೊಳಲೆ, ಕಾರ್ಯದರ್ಶಿ ಎಸ್.ರಾಜಶೇಖರ್, ಸಹ ಕಾರ್ಯದರ್ಶಿ ಡಾ. ಎ.ಸತೀಶ್‌ಕುಮಾರ್ ಶೆಟ್ಟಿ, ಖಜಾಂಚಿ ಬಿ.ಗೋಪಿನಾಥ್, ನಿರ್ದೇಶಕರಾದ ಕೆ.ಬಸಪ್ಪಗೌಡ, ಎಂ.ರಾಜು, ಡಾ. ಎಚ್.ಮಥುನಾಥ ಸುದ್ದಿಗೋಷ್ಠಿಯಲ್ಲಿದ್ದರು.