ನ್ಯೂಸ್

ಕಗ್ಗದ ಬೆಳಕು ಅಂಕಣ| ಎಂದೂ ಸಿಗದು ನಾಳೆ, ನಿರ್ಲಿಪ್ತರಾಗಿ ಬಾಳುವುದೇ ವಿವೇಕ

| ಲೇಖಕರು: ಕವಿತಾ ಅಡೂರು, ಪುತ್ತೂರು

ದಿವಸದಿಂ ದಿವಸಕ್ಕೆ ನಿಮಿಷದಿಂ ನಿಮಿಷಕ್ಕೆ|

ಭವಿಷಿಯ ಚಿಂತಿಸದೆ ಬದುಕ ನೂಕುತಿರು||

ವಿವರಗಳ ಜೋಡಿಸುವ ಯಜಮಾನ ಬೇರಿಹನು|

ಸವೆಸು ನೀಂ ಜನುಮವನು-ಮಂಕುತಿಮ್ಮ||682||

ದಿವಸದಿಂದ ದಿವಸಕ್ಕೆ ನಿಮಿಷದಿಂದ ನಿಮಿಷಕ್ಕೆ ಭವಿಷ್ಯದ ಕುರಿತಾಗಿ ಚಿಂತಿಸದೆ ಬದುಕನ್ನು ನಡೆಸು. ವಿವರಗಳನ್ನು ಜೋಡಿಸುವ ಯಜಮಾನನು ಬೇರೊಬ್ಬನಿದ್ದಾನೆ. ಹಾಗಾಗಿ ನೀನು ನಿಶ್ಚಿಂತೆಯಿಂದ ಜನುಮವನ್ನು ಸವೆಸು ಎನ್ನುತ್ತದೆ ಈ ಕಗ್ಗ.

ಪುಟ್ಟ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಚಿಂತೆಯ ಹೊರೆಯನ್ನು ಹೊರದವರು ಯಾರೂ ಇಲ್ಲ. ಚಿಂತೆಯೊಂದಿಗೆ ಆರಂಭವಾಗುವ ಜೀವಿತವು ಚಿಂತೆಯೊಂದಿಗೆ ಕೊನೆಯಾಗುತ್ತದೆ. ಮನೋಬಲವನ್ನು ಕುಗ್ಗಿಸುವ ಚಿಂತೆಯ ಮೂಲವಿರುವುದು ವ್ಯಕ್ತಿಯ ಅಂತರಂಗದಲ್ಲಿ ಎಂಬ ಸತ್ಯವನ್ನು ಅರಿತರೆ, ಆಗ ಚಿಂತೆಯೇ ಇರುವುದಿಲ್ಲ. ಆದರೆ ಬಾಹ್ಯ ಪ್ರಚೋದನೆಯಿಂದ ಕ್ಷೋಭೆಗೆ ಒಳಗಾಗುವ ಆಂತರ್ಯವು ಸಂಯಮದಿಂದ ಯೋಚಿಸಲಾರದು. ಕೆಲವರಂತು ಯಾವುದಾದರೂ ಒಂದು ಚಿಂತೆಗೆ ಜೋತುಬಿದ್ದು, ಸೋಲು ಮನದೊಂದಿಗೆ ತಮ್ಮ ಸುತ್ತಲೂ ನೋವು- ನಿರಾಶೆಯನ್ನೇ ಹಂಚುತ್ತಿರುತ್ತಾರೆ. ಪ್ರತಿಯೊಬ್ಬರಿಗೂ ತನ್ನನ್ನು ತಾನು ಗುರುತಿಸಿಕೊಳ್ಳಬೇಕು, ಪ್ರಾಮುಖ್ಯತೆಯನ್ನು ಪಡೆಯಬೇಕು ಎಂಬ ಹಂಬಲ. ಅದಕ್ಕಾಗಿ ಆಸ್ತಿ-ಅಂತಸ್ತು, ಅಧಿಕಾರಗಳನ್ನು ಬೆಂಬತ್ತುತ್ತಾರೆ. ಅನೇಕಾನೇಕ ಆಸೆಗಳು ವ್ಯಕ್ತಿಯ ಇತಿಮಿತಿಯನ್ನು ಮೀರಿ ಬೆಳೆದಿರುತ್ತವೆ. ಇವೆಲ್ಲವೂ ವ್ಯಕ್ತಿಯ ಆಂತರಿಕ ಶೂನ್ಯತೆಯನ್ನು ತುಂಬಿಸಿಕೊಳ್ಳುವ ಪ್ರಯತ್ನವಾಗಿದೆ. ಒಳಗಿರುವ ಅಭದ್ರತೆಯನ್ನು, ಅಭಾವವನ್ನು ತೊಲಗಿಸಲು ಬಯಕೆಗಳನ್ನು ಬೆನ್ನಟ್ಟುವುದು ಸಾಮಾನ್ಯವಾಗಿದೆ. ಜೊತೆಗೆ ಪಡೆದುದರ ಬಗೆಗೆ ಸಂತೃಪ್ತಿ ಹೊಂದದೆ, ಬರಲಿರುವ ನಾಳೆಗಳ ಬಗೆಗೆ ಸದಾ ಅತಂಕಿತರಾಗಿರುತ್ತಾರೆ. ಹೀಗೆ ನಿನ್ನೆ ನಾಳೆಗಳ ಬಗ್ಗೆ ಯೋಚಿಸುತ್ತಾ ಈ ದಿನವನ್ನು ವ್ಯರ್ಥವಾಗಿಸುತ್ತಾರೆ.

ಭವಿಷ್ಯವನ್ನು ನೆನೆದು ಮನುಷ್ಯರು ಚಿಂತಿತರಾಗುವಂತೆ ಮಾಡುವಲ್ಲಿ ಆತನೊಳಗೆ ಅವಿತಿರುವ ಷಡ್ರಿಪುಗಳ ಕಾರ್ಯವು ಬಹಳ ದೊಡ್ಡದು. ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳೆಂಬ ಆರು ಬಗೆಯ ರಿಪುಗಳು ಮನುಷ್ಯ ಮನಸ್ಸನ್ನು ಆಳುತ್ತಿರುತ್ತವೆ. ವಿವೇಚನೆಯನ್ನು ಕಳೆದುಕೊಂಡ ವ್ಯಕ್ತಿಯು ಭಾವೋದ್ವೇಗಕ್ಕೆ ಒಳಗಾಗಿ ಪ್ರತಿಕ್ಷಣವನ್ನೂ ಉದ್ವಿಘ್ನತೆಯಿಂದ ಕಳೆಯುತ್ತಾನೆ. ಆತನಲ್ಲಿ ಮುಂದಾಲೋಚನೆ ಇಲ್ಲದ ಮಹತ್ವಾಕಾಂಕ್ಷೆ, ವಿಚಿತ್ರ ಅಭೀಪ್ಸೆಗಳು ಹುಚ್ಚೆದ್ದು ಕುಣಿಯುತ್ತಿರುತ್ತವೆ. ಇದರಿಂದಾಗಿ ತಾನಂದುಕೊಂಡಂತೆಯೇ ನಾಳೆಗಳು ಸುಂದರವಾಗಿರಬಹುದೆ ಎಂದು ಚಿಂತಿಸುತ್ತಾ ಭಯಭೀತನಾಗುತ್ತಾನೆ. ಸದಾ ಸಂದೇಹ ದಿಂದ ಬದುಕನ್ನು ಎದುರುಗೊಳ್ಳುತ್ತಾನೆ. ಇಷ್ಟಕ್ಕೂ ಹೀಗೆ ದಿನ

ದಿನವೂ, ನಿಮಿಷನಿಮಿಷವೂ ಭವಿತವ್ಯವನ್ನು ನೆನೆದು ಆತಂಕಕ್ಕೆ ಒಳಗಾಗುವುದರಿಂದ ಏನು ಪ್ರಯೋಜನ? ಮನುಷ್ಯನ ಜೀವನವಷ್ಟೇ ಅಲ್ಲ, ಆತನ ದೇಹದಲ್ಲಿರುವ ಜೀರ್ಣಾಂಗ ವ್ಯವಸ್ಥೆ, ಶಾಸೋಚ್ವಾಸ, ರಕ್ತಪರಿಚಲನೆ ಮುಂತಾದವು ಕೂಡ ಆತನ ನಿಯಂತ್ರಣದಲ್ಲಿ ಇಲ್ಲ. ಸೂತ್ರದ ಗೊಂಬೆಯಾಟದಲ್ಲಿ ಬಳಕೆಯಾಗುವ ಗೊಂಬೆಗಳಂತೆ ಭೂಮಿಯೆಂಬ ರಂಗಸ್ಥಳದಲ್ಲಿ ಕಾಣದ ಕೈಯೊಂದು ಜೀವ ಗಳನ್ನು ಆಡಿಸುತ್ತದೆ. ಆ ಅದೃಶ್ಯ ಕೈಗಳು ಕೊಡವಿಕೊಂಡರೆ ಗೊಂಬೆಗಳಿಗೆ ಯಾವ ನೆಲೆಯೂ ಇರುವುದಿಲ್ಲ. ಮನುಷ್ಯನು ಎಷ್ಟೇ ವಿದ್ಯಾವಂತನಾಗಿದ್ದರೂ, ಜ್ಞಾನವಂತನಾಗಿದ್ದರೂ ತನ್ನ ಭವಿತವ್ಯವನ್ನು ತನಗೆ ಬೇಕಾದಂತೆ ರೂಪಿಸಿಕೊಳ್ಳಲಾರ. ತನ್ನ ಬದುಕಿನಲ್ಲಿ ಯಾವಾಗ ಏನು ಸಂಭವಿಸುತ್ತದೆ ಎನ್ನುವುದನ್ನೂ ತಿಳಿದುಕೊಳ್ಳಲಾರ. ಈ ಅನಿಶ್ಚಿತತೆ ಇರುವುದರಿಂದಲೇ ಮನುಷ್ಯನು ಸದಾ ನಾಳೆಗಳ ಬಗೆಗೆ ಚಿಂತಿತನಾಗಿರುತ್ತಾನೆ. ಆದರೆ ಎಷ್ಟು ಚಿಂತಿಸಿದರೂ ಅದರಿಂದೇನೇನೂ ಉಪಯೋಗವಿಲ್ಲ. ನಾಳೆ ಎನ್ನುವುದು ಎಂದಿಗೂ ಸಿಗುವುದಿಲ್ಲ, ಸಿಕ್ಕಾಗ ಇಂದುಆಗಿರುತ್ತದೆ, ಇಂದು ಎನ್ನುವುದು ನಿನ್ನೆಯಾಗಿ ಬಿಟ್ಟಿರುತ್ತದೆ.

ಜಗವೆಂಬ ಮನೆಯನ್ನು ಪಾಲಿಸಲು ಯಜಮಾನನೊಬ್ಬನಿದ್ದಾನೆ. ಆತನ ನಡೆ, ನಿರ್ಧಾರಗಳನ್ನು ಯಾರೂ ಊಹಿಸಲಾರರು, ತಿಳಿಯಲಾರರು. ದೊಡ್ಡದೊಂದು ಕಾರ್ಖಾನೆಯಲ್ಲಿ ಕೆಲಸ ಮಾಡುವ ಸಾಮಾನ್ಯ ಕಾರ್ವಿುಕರಿಗೆ, ತಮಗೆ ಕೆಲಸ ಕೊಟ್ಟು ಬದುಕಿಗೆ ದಾರಿ ಮಾಡಿಕೊಟ್ಟ ಧಣಿಯನ್ನು ಪ್ರತಿನಿತ್ಯ ಕಾಣುವುದಕ್ಕೋ, ಒಡನಾಡುವುದಕ್ಕೋ ಅವಕಾಶವಿರುವುದಿಲ್ಲ. ಆತನು ತಾನಿರುವಲ್ಲಿಂದ ಮಾಡಿದ ಆದೇಶವನ್ನು ನಿಷ್ಠೆಯಿಂದ ಅನುಸರಿಸುವುದಷ್ಟೇ ಕಾರ್ವಿುಕರಿಗಿರುವ ಆಯ್ಕೆ. ಅಂತೆಯೇ ಅವ್ಯಕ್ತನಾಗಿರುವ ಜಗದೊಡೆಯನ ಅಪ್ಪಣೆಯನ್ನು ನಿಷ್ಠೆಯಿಂದ ಪಾಲಿಸುವುದು ಮನುಷ್ಯನಿಗೆ ಕರ್ತವ್ಯವಾಗಬೇಕು. ಯಜಮಾನನ ಕಾರುಣ್ಯವನ್ನು ಗಳಿಸಲು ಕೆಲಸಗಾರನುವಿಧೇಯತೆಯಿಂದ, ಕಾರ್ಯಕ್ಷಮತೆಯಿಂದ ನಡೆದುಕೊಳ್ಳುವಂತೆಯೇ; ಜಗದ ಊಳಿಗಕ್ಕೆ ಬಂದಿರುವ ನಾವೂ ಸತ್ಪಾತ್ರರಾಗಬೇಕು. ಕಾವ ದೇವನಿಗೆ ಸಂಪೂರ್ಣ ಶರಣಾಗತರಾದಾಗ ನಾಳೆಗಳ ಚಿಂತೆ ಕಾಡುವುದಿಲ್ಲ. ಅವ್ಯಕ್ತ ಶಕ್ತಿಯೊಂದು ಪ್ರತಿಕ್ಷಣವೂ ಜೊತೆಗಿದ್ದು ಮುನ್ನಡೆಸುತ್ತಿರುವ ಅನುಭವವಾಗುತ್ತದೆ. ಆದುದರಿಂದ ಕಳೆದುದಕ್ಕೆ ಶೋಕಿಸುವ ಅಗತ್ಯವಿಲ್ಲ, ಅದನ್ನು ಮತ್ತೆ ಸರಿಪಡಿಸಲು ಯಾರಿಗೂ ಸಾಧ್ಯ ವಿಲ್ಲ. ಭವಿಷ್ಯವನ್ನು ಕುರಿತು ಚಿಂತಿಸುವುದರಿಂದಲೂ ಪ್ರಯೋಜನ ವಿಲ್ಲ. ಯಾಕೆಂದರೆ ಅದನ್ನು ನಿರ್ಣಯಿಸುವವರು ನಾವಲ್ಲ. ಹಾಗಾಗಿ ವರ್ತಮಾನದಲ್ಲಿ ನಿರ್ಲಿಪ್ತರಾಗಿ ಬಾಳುವುದೇ ವಿವೇಕ. ಸತ್ಸಂಗ, ಸಚ್ಛಿಂತನೆ, ಸತ್ಕಾರ್ಯಗಳೊಂದಿಗೆ ಸತ್ಪಥದಲ್ಲಿ ನಡೆದರೆ ಸಾರ್ಥಕತೆಯ ಅನುಭವವಾಗುತ್ತದೆ. ಅದು ನಾಳೆಗಳನ್ನು ಸುಂದರಗೊಳಿಸುತ್ತದೆ.

(ಲೇಖಕರು ಉಪನ್ಯಾಸಕರು, ಕವಯಿತ್ರಿ)

(ಪ್ರತಿಕ್ರಿಯಿಸಿ: vvsudina@gmail.com, kaviadoor@gmail.com)