ಜಯಪುರ: ಕರಾಟೆಯಂತಹ ಕ್ರೀಡೆಗಳು ಮಕ್ಕಳಲ್ಲಿ ಆತ್ಮಸ್ಥೈರ್ಯ ಹೆಚ್ಚಿಸುವಲ್ಲಿ ಸಹಕಾರಿ ಎಂದು ಜಯಪುರ ಪಿಎಸ್‌ಐ ಅಂಬರೀಷ್ ಹೇಳಿದರು.
ಜಯಪುರದಲ್ಲಿ ಭಾನುವಾರ ಐಡಿಯಲ್ ಸ್ಪೋರ್ಟ್ಸ್ ಮಾರ್ಷಲ್ ಆರ್ಟ್ಸ್ ಕರಾಟೆ ಅಸೋಸಿಯೇಷನ್ ಆಶ್ರಯದಲ್ಲಿ ನಡೆದ ದಸರಾ ಕರಾಟೆ ಶಿಬಿರದ ಸಮಾರೋಪದಲ್ಲಿ ಮಾತನಾಡಿ, ಇಂದಿನ ಮಕ್ಕಳು ಅಂಕ ಗಳಿಕೆಯ ಹಿಂದೆ ಬಿದ್ದಿರುವ ಪರಿಣಾಮ ವ್ಯಾವಹಾರಿಕ ಹಾಗೂ ಸಾಮಾಜಿಕ ಜ್ಞಾನ ಇಲ್ಲದಂತಾಗಿದೆ. ಹೀಗಾಗಿ ಸಣ್ಣ ಸಮಸ್ಯೆಗಳನ್ನು ಎದುರಿಸಲಾಗದೆ ಖಿನ್ನತೆಗೊಳಗಾಗುವುದನ್ನು ಕಾಣುತ್ತಿದ್ದೇವೆ. ಹೀಗಾಗಿ ಶಿಕ್ಷಕಕರು ಹಾಗೂ ಪಾಲಕರು ಜೀವನದ ಸಮಸ್ಯೆಗಳನ್ನು ಧೈರ್ಯವಾಗಿ ಎದುರಿಸುವ ಆತ್ಮಸ್ಥೈರ್ಯ ಬೆಳೆಸುವ ನಿಟ್ಟಿನಲ್ಲಿ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸಬೇಕು ಎಂದು ತಿಳಿಸಿದರು.
ಬಿಜಿಎಸ್ ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿ ಎ.ಸಿ.ವಜ್ರಪ್ಪ ಮಾತನಾಡಿ, ಹೆಣ್ಣು ಮಕ್ಕಳಿಗೆ ರಕ್ಷಣೆಗೆ ಕರಾಟೆ ಕಲಿಯುವುದು ಅನಿವಾರ್ಯ. ಇದರಿಂದ ಆರೋಗ್ಯ ವೃದ್ಧಿ ಜತೆಗೆ ಓದಿನಲ್ಲಿ ಏಕಾಗ್ರತೆ ಹೆಚ್ಚುತ್ತದೆ ಎಂದರು.
ಐಡಿಯಲ್ ಸ್ಪೋರ್ಟ್ಸ್ ಮಾರ್ಷಲ್ ಆರ್ಟ್ಸ್ ಕರಾಟೆ ಅಸೋಸಿಯೇಷನ್ ಜಯಪುರದ ಅಧ್ಯಕ್ಷ ಕಿಬ್ಳಿ ಪ್ರಸನ್ನಕುಮಾರ್ ಮಾತನಾಡಿ, ಪ್ರಸ್ತುತ ವಿದ್ಯಾವಂತರ ಸಂಖ್ಯೆ ಹೆಚ್ಚುತ್ತಿದ್ದರೂ ನೈತಿಕ ಮೌಲ್ಯ ಕಡಿಮೆಯಾಗುತ್ತಿರುವುದು ಬೇಸರದ ಸಂಗತಿ. ಹೀಗಾಗಿ ಸಮಾಜದಲ್ಲಿ ಮಹಿಳಾ ದೌರ್ಜನ್ಯ, ಅಪರಾಧ ಚಟುವಟಿಕೆಗಳು ಹೆಚ್ಚುತ್ತಿವೆ. ಮಹಿಳೆಯರು ಕರಾಟೆ ಕಲಿತು ತಮ್ಮ ರಕ್ಷಣೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ಹಾಗೂ ಪದಕ ವಿತರಿಸಲಾಯಿತು. ಕರಾಟೆ ಶಿಕ್ಷಕ ಆರ್.ಮಣಿಕಂಠ, ಕ್ಲಬ್ ಕಾರ್ಯದರ್ಶಿ ವಿಶ್ವನಾಥ್ ಗುಡ್ಡೇತೋಟ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಮೇಶ್, ಉಪಾಧ್ಯಕ್ಷೆ ಅಶ್ವಿನಿ ಶೆಟ್ಟಿ, ಮುಖ್ಯಶಿಕ್ಷಕಿ ರೇವತಿ, ಸ್ಪಂದನ ಸ್ವಯಂಸೇವಾ ಸಂಸ್ಥೆಯ ಸುಶ್ಮಿತಾ, ಮಮತಾ, ಹರೀಶ್, ವಿಶ್ವನಾಥ್ ಕೆಳಕೊಡಿಗೆ ಇತರರಿದ್ದರು.