ನ್ಯೂಸ್

ಲಡಾಖ್​ನಲ್ಲಿ ಘರ್ಷಣೆ ವೇಳೆ ಅಮಾನವೀಯವಾಗಿ ವರ್ತಿಸಿದ ಚೀನಿ ಯೋಧರು

ನವದೆಹಲಿ: ಕೆಲದಿನಗಳ ಹಿಂದೆ ಲಡಾಖ್​ ಪ್ರಾಂತ್ಯದ ವಾಸ್ತವ ಗಡಿರೇಖೆಯ ಬಳಿಯ ಪ್ಯಾಂಗಾಂಗ್​ ತ್ಸೊ ಸರೋವರದ ಬಳಿ ನಡೆದ ಘರ್ಷಣೆಯ ವೇಳೆ ಚೀನಿ ಯೋಧರು ದೊಣ್ಣೆ, ಮುಳ್ಳುತಂತಿ ಸುತ್ತಿದ್ದ ಬಡಿಗೆಗಳಿಂದ ಹಲ್ಲ ಮಾಡಿದ್ದಲ್ಲದೆ, ಕಲ್ಲು ತೂರಾಟ ಮಾಡಿ ಅಮಾನವೀಯ ಹಾಗೂ ಅನೈತಿಕವಾಗಿ ವರ್ತಿಸಿರುವುದಾಗಿ ಭಾರತೀಯ ಸೇನಾಪಡೆ ಮೂಲಗಳು ಆಕ್ರೋಶ ವ್ಯಕ್ತಪಡಿಸಿವೆ.

ಕಾಲು ಕೆರೆದುಕೊಂಡು ಜಗಳ ತೆಗೆದ ಚೀನಿ ಯೋಧರು ಮೊದಲೇ ತಂದಿದ್ದ ದೊಣ್ಣೆಗಳು, ಮುಳ್ಳುತಂತಿ ಸುತ್ತಿದ್ದ ಬಡಿಗೆಗಳನ್ನು ಬಳಸಿ ಅಮಾನವೀಯವಾಗಿ ಹಲ್ಲೆ ಮಾಡಿದರು. ಸಾಲದ್ದಕ್ಕೆ ಕಲ್ಲು ತೂರಾಟ ನಡೆಸಿದ್ದರಿಂದ ಭಾರತೀಯ ಯೋಧರಿಗೆ ಗಂಭೀರ ಗಾಯಗಳಾದವು ಎಂದು ಹೇಳಿವೆ.

ಸಂಖ್ಯೆ ಕಡಿಮೆಯಿದ್ದರೂ ಭಾರತೀಯ ಯೋಧರು ಧೈರ್ಯವಾಗಿ ಚೀನಿ ಯೋಧರ ದಾಳಿಯನ್ನು ಹಿಮ್ಮೆಟ್ಟಿಸಿದರು. ಅವರ ಮೇಲೆ ಪ್ರತಿದಾಳಿಯನ್ನೂ ಮಾಡಿದರು. ಆ ದಾಳಿಯಲ್ಲಿ ಚೀನಿ ಯೋಧರೂ ಗಾಯಗೊಂಡರು ಎಂದು ತಿಳಿಸಿವೆ.

ಭಾರತೀಯ ಯೋಧರು ಕಡಿಮೆ ಸಂಖ್ಯೆಯಲ್ಲಿ ಇರುವುದನ್ನು ನೋಡಿಕೊಂಡು, ಸಂಚು ರೂಪಿಸಿ, ಅವರಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಚೀನಿ ಯೋಧರು ದಾಳಿ ಮಾಡಿದ್ದಾರೆ. ಇಂಥ ವಂಚಕ ದಾಳಿಗಳು ಪೀಪಲ್ಸ್​ ಲಿಬರೇಷನ್​ ಆರ್ಮಿಯ ಹೆಗ್ಗುರುತಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿವೆ.