ವಿನೋದ್ ಮೂಡಗದ್ದೆ ಗೋಣಿಕೊಪ್ಪ
ಸಾವಿರಾರು ವರ್ಷಗಳಿಂದ ಭಕ್ತರನ್ನು ಪೊರೆಯುತ್ತಿರುವ ದೇವಿ ದುರ್ಗಾಪರಮೇಶ್ವರಿಗೆ ಪೊನ್ನಂಪೇಟೆ ತಾಲೂಕಿನ ಬೆಳ್ಳೂರಿನಲ್ಲಿ ಸುಂದರವಾದ ಪ್ರಕೃತಿಯ ಮಡಿಲಿನಲ್ಲಿ ದೇವಾಲಯವಿದ್ದು, ಅಪಾರ ಭಕ್ತರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಹುಲ್ಲಿನ ಮಾಡಿನಿಂದ ಆರಂಭವಾಗಿ ಇದೀಗ ಉತ್ತಮವಾದ ಕಟ್ಟಡ ನೆಲೆನಿಂತಿದೆ.
ಹಲವು ವರ್ಷಗಳ ಹಿಂದೆ ಬಾಚರಣಿಯಂಡ ಕುಟುಂಬದ ಹಿರಿಯರು ದನ ಮೇಯಿಸುತ್ತಿದ್ದಾಗ ದೇವಿಯು ಪ್ರತ್ಯಕ್ಷಳಾದಳೆಂದು, ನಂತರ ಇಲ್ಲಿ ಕಾಡು ಕಡಿದು ನೋಡಿದಾಗ ದೇವಾಲಯದ ಅವಶೇಷ ಕಂಡಿದೆ. ನಂತರ ಅಲ್ಲಿ ದೇವರನ್ನು ಮರು ಪ್ರತಿಷ್ಠಾಪಿಸಿ ಪೂಜೆಯನ್ನು ಆರಂಭಿಸಲಾಗಿದೆ ಎಂಬೂದು ಹಿರಿಯರ ಮಾತು. ಅಂದಿನಿಂದ ಪ್ರತಿನಿತ್ಯ ಪೂಜೆ ನೆರವೇರಿಸಿಕೊಂಡು ಬರಲಾಗುತ್ತಿದೆ. ಇತ್ತೀಚೆಗೆ ದೇವಾಲಯಕ್ಕೆ ಆಡಳಿತ ಮಂಡಳಿ ಸ್ಥಾಪಿಸಿ ಅದ್ದೂರಿಯಾಗಿ ಉತ್ಸವ ಆಚರಿಸಿಕೊಂಡು ಬರಲಾಗುತ್ತಿದೆ.
ಟಿಪ್ಪು ದಾಳಿ: ಟಿಪ್ಪು ಸುಲ್ತಾನ್ ಕೊಡಗಿನ ಮೇಲೆ ದಾಳಿ ಮಾಡಿದ ಸಂದರ್ಭ ಈ ದೇವಾಲಯಕ್ಕೂ ಹಾನಿಗೊಳಿಸಿದ ಎನ್ನುತ್ತಾರೆ ಸ್ಥಳೀಯರು. ದೇವಾಲಯದ ಜೀರ್ಣೋದ್ಧಾರ ಸಂದರ್ಭ ಬಾವಿಯಲ್ಲಿ ವಿರೂಪಗೊಂಡ ವಿಗ್ರಹಗಳು ಸಿಕ್ಕಿದ್ದವು. ಇವು ಬಳಪದ ಕಲ್ಲಿನಿಂದ ಕೆತ್ತಿದ್ದ ವಿಗ್ರಹಗಳಾಗಿದ್ದವು. ದೇವಾಲಯಲ್ಲಿ ಚಾಮುಂಡೇಶ್ವರಿ ದೇವರ ಜತೆ ಭದ್ರಕಾಳಿ, ಅಯ್ಯಪ್ಪ ಮತ್ತು ಕೇತಪ್ಪ ದೇವರನ್ನೂ ಆರಾಧಿಸಲಾಗುತ್ತದೆ. ದೇವಾಲಯಕ್ಕೆ ಸಂಬಂಧಿಸಿದಂತೆ ದೇವರ ಬನ ಕೂಡ ಇದೆ. ಇಲ್ಲಿ ತಪಸ್ವಿ ಅಯ್ಯಪ್ಪ ದೇವರು ನೆಲೆನಿಂತಿದ್ದಾರೆ. ನೂರೇರ ಕುಟುಂಬ ಈ ದೇವಾಲಯದ ತಕ್ಕ ಮುಖ್ಯಸ್ಥರಾಗಿದ್ದಾರೆ.
ದೇವರ ಕಾರ್ಣಿಕದ ಕುರಿತು ಕಥೆಯೊಂದು ಪ್ರಚಾರದಲ್ಲಿದ್ದು, ಈ ಹಿಂದೆ ಅಂದರೆ 1976ನೇ ಇಸವಿ ಆಸುಪಾಸಿನಲ್ಲಿ ಅಷ್ಠಬಂಧ ಬ್ರಹ್ಮಕಳಸೋತ್ಸವ ನಡೆಸಲಾಗಿತ್ತು. ಕೊನೆಯ ದಿನ 108 ಕಳಸಾಭಿಷೇಕ ನಡೆಸಿ ಕಳಸವನ್ನು ಅಲ್ಲಿಯೇ ಇರಿಸಲಾಗಿತ್ತು. ಕೆಲವು ಜನರು ದೇವಾಲಯದ ಆವರಣದಲ್ಲಿ ಮತ್ತು ಕೆಲವರು ಕಳಸದ ಸಮೀಪ ಮಲಗಿದ್ದರು. ಮಧ್ಯರಾತ್ರಿ ದೇವಾಲಯದ ಎದುರಿಗಿರುವ ಅಯ್ಯಪ್ಪ ಮತ್ತು ಭದ್ರಕಾಳಿ ದೇವಾಲಯದಿಂದ ದಂಡು ಬಂದಂತೆ ಸದ್ದಾಗಿದೆ. ದೇವಾಲಯದಲ್ಲಿ ಇರುವವರಿಗೆ ಯಾರಿಗೂ ಇದರ ಅರಿವಿಲ್ಲ. ಪಕ್ಕದಲ್ಲಿ ಇದ್ದ ಮನೆಯವರಿಗೆ ಈ ಸದ್ದು ಕೇಳಿಸಿದೆ. ಬೆಳಗ್ಗೆ ಎದ್ದು ನೋಡುವಾಗ ಕಳಸದ ಸಮೀಪ ಮಲಗಿದ್ದವರನ್ನು ಯಾರೋ ದೂರಕ್ಕೆ ಮಲಗಿಸಿದಂತೆ ಇದ್ದರು. ನಂತರ ಕೇಳಿಸಿ ನೋಡಿದಾಗ ಅವು ಗಣಗಳ ಕೆಲಸ ಅಂತ ಕಂಡುಬಂದಿದೆ. ದೇವರ ಗಣಗಳು ಅಷ್ಠಬಂಧವನ್ನು ಸ್ವೀಕರಿಸಲು ಬಂದವು ಎಂದು ತಿಳಿಸಿದ್ದಾರೆ ಎನ್ನುತ್ತಾರೆ ಹಿರಿಯರು.
ಪ್ರತಿ ವರ್ಷ ಏಪ್ರಿಲ್ 7ರಿಂದ 13 ರವರೆಗೆ ದೇವಾಲಯದ ವಾರ್ಷಿಕ ಉತ್ಸವ ನೆರವೇರುತ್ತದೆ. ಮೊದಲ ದಿನ ಅಂಕುರಾರ್ಪಣೆ ನಡೆಸಿ, ಕೊಡಿಮರ ಏರಿಸಲಾಗುತ್ತದೆ. ಮಾರನೇ ದಿನ ಉತ್ಸವ ಬಲಿ ಹೊರಡುತ್ತದೆ. 5 ದಿನ ದೇವರ ಬಲಿ ನಡೆಯುತ್ತದೆ. 6ನೇ ದಿನ ನೆರಪು. ಕೊನೆ ದಿನ ದೇವರ ಜಳಕ ನಡೆಸಿ ದೇವರ ಬಲಿ ನಡೆಯುತ್ತದೆ.
ಪ್ರತಿ ಮೂರು ಅಥವಾ 12 ವರ್ಷಕ್ಕೆ, ಅನುಕೂಲ ಆದಂತೆ ಲಕ್ಷ್ಮಣ ತೀರ್ಥ ಹೊಳೆಯಲ್ಲಿ ನೀರಿರುವ ಸಂದರ್ಭದಲ್ಲಿ ಅವಿಭೃತ ಸ್ನಾನ ಮಾಡಲಾಗುತ್ತದೆ. ಸುಮಾರು 8 ಕಿಮೀ ದೂರ ಸಾಗಿ ಬರುವಾಗ ದಾರಿಯುದ್ಧಕ್ಕೂ ಕಟ್ಟೆ ಪೂಜೆ ನಡೆಯುತ್ತದೆ.
ಪ್ರತಿ ಮೂರು ವರ್ಷಕ್ಕೊಮ್ಮೆ ಅಯ್ಯಪ್ಪ ಉತ್ಸವ, ಭದ್ರಕಾಳಿ ಉತ್ಸವ ಮತ್ತು ಕೇತಮ್ಮ ದೇವರಿಗೆ ವರ್ಷಂಪ್ರತಿ ಉತ್ಸವ ನಡೆಯುತ್ತದೆ. ಜತೆಗೆ ಪ್ರತಿ ವರ್ಷ ಬೇಡು ಹಬ್ಬವೂ ನಡೆಯುತ್ತದೆ. ಇತ್ತೀಚೆಗಿನ ವರ್ಷದಲ್ಲಿ ನವರಾತ್ರಿ ಸಂದರ್ಭ ದೇವಿಗೆ ವಿಶೇಷ ಅಲಂಕಾರ ಪೂಜೆ ನೆರವೇರುತ್ತಿದೆ.
ಹಬ್ಬದ ಮುಂಚಿತವಾಗಿ ಈ ದೇವರ ಕೆರೆಯ ಸುತ್ತ ಸ್ವಚ್ಛಗೊಳಿಸಿ ತೋರಣ ಕಟ್ಟಲಾಗುತ್ತದೆ. ಅದರ ನಂತರ ಯಾರೂ ಈ ಕೆರೆಯ ನೀರನ್ನು ಬಳಸುವಂತಿಲ್ಲ.
ಸುಮಾರು 500-600 ವರ್ಷಗಳ ಹಿಂದೆ ರಾಮಣ್ಣ ಎಂಬ ಪುರೋಹಿತರು ದೇವಾಲಯದಲ್ಲಿ ಪೂಜೆ ನೆರವೇರಿಸುತ್ತಿದ್ದರು. ಅವರ ಮಕ್ಕಳು, ಮೊಮ್ಮಕ್ಕಳು ಇತ್ತೀಚಿನ ವರ್ಷಗಳವರೆಗೆ ಪೂಜೆಯಲ್ಲಿ ನಿರತರಾಗಿದ್ದರು. ಈಗ ಶಿರಸಿ ಮೂಲದ ಪುರೋಹಿತರು ಪೂಜೆ ಮಾಡುತ್ತಿದ್ದಾರೆ.