ಬಾಳೆಹೊನ್ನೂರು: ಪಟ್ಟಣದ ದುರ್ಗಾದೇವಿ ನವರಾತ್ರಿ ಪೂಜಾ ಸಮಿತಿ ಶರನ್ನವರಾತ್ರಿ ಮಹೋತ್ಸವ ಅಂಗವಾಗಿ ಶನಿವಾರ ರಾತ್ರಿ ಭದ್ರಾ ನದಿ ತಟದಲ್ಲಿ ಆಯೋಜಿಸಿದ್ದ ಭದ್ರಾರತಿ ಧಾರ್ಮಿಕ ಕಾರ್ಯಕ್ರಮ ವೈಭವದಿಂದ ನಡೆಯಿತು.
ಪ್ರಥಮ ಬಾರಿಗೆ ಭದ್ರಾ ನದಿಗೆ ವಿಶೇಷ ಧಾರ್ಮಿಕ ಪೂಜಾ ಕೈಂಕರ್ಯಗಳೊಂದಿಗೆ ಪೂಜೆ ಸಲ್ಲಿಸಿ ಕಲಶ ರೂಪದಲ್ಲಿ ಗಂಗೆಯನ್ನು ಪ್ರತಿಷ್ಠಾಪಿಸಿ ಪೂಜಿಸಲಾಯಿತು. ಬಳಿಕ ಕಾಶಿ, ಹರಿದ್ವಾರ, ಋಷಿಕೇಶದಲ್ಲಿ ನಡೆಯುವ ಗಂಗಾರತಿ ಮಾದರಿಯಲ್ಲಿ ತುಂಬಿ ಹರಿಯುವ ಭದ್ರಾ ನದಿಗೆ ಪಂಚ ಅರ್ಚಕರ ಸಮ್ಮುಖದಲ್ಲಿ ಧೂಪಾರತಿ ನೆರವೇರಿಸಿ ವಿಶೇಷವಾಗಿ ಅಲಂಕೃತವಾದ ಪಂಚಲೋಹದ ಆರತಿ ತಟ್ಟೆಯಲ್ಲಿ ಭದ್ರೆಗೆ ಆರತಿ ಬೆಳಗಲಾಯಿತು. ನಂತರ ಶಂಖ, ಜಾಗಟೆ, ಡಮರುಗ, ಚಾಮರದ ಸೇವೆ ನೆರವೇರಿಸಲಾಯಿತು. ಬಳಿಕ ನೆರೆದಿದ್ದ ಸಾವಿರಾರು ಜನರು ಭದ್ರಾ ನದಿಯ ಒಡಲಿಗೆ ವಿವಿಧ ಪುಷ್ಪಗಳನ್ನು ಅರ್ಪಿಸಿದರು.
ಅರ್ಚಕರಾದ ಸುಬ್ರಹ್ಮಣ್ಯ ಭಟ್, ಪ್ರಶಾಂತ್ ಭಟ್, ನಂದನ್ ಭಟ್, ಉತ್ತಮೇಶ್ವರ, ಪ್ರಸನ್ನಭಟ್, ಅಭಿಷೇಕ್ ಭಟ್ ಭದ್ರಾರತಿಯ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು.
ಸಮಿತಿ ಕೋಶಾಧಿಕಾರಿ ಭಾಸ್ಕರ್ ವೆನಿಲ್ಲಾ ಮಾತನಾಡಿ, ಪಟ್ಟಣದಲ್ಲಿ ನವರಾತ್ರಿ ಸಂದರ್ಭದಲ್ಲಿ ವಿಶೇಷ ಭದ್ರಾರತಿಯ ಧಾರ್ಮಿಕ ಕಾರ್ಯಕ್ರಮ ಇದೇ ಮೊದಲ ಬಾರಿ ನಡೆಸಲಾಗಿದೆ. ದುರ್ಗಾ ಸಮಿತಿಯು ವಿಶೇಷ ಕಲ್ಪನೆಗಳೊಂದಿಗೆ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಜನರ ಮೆಚ್ಚುಗೆಗೆ ಪಾತ್ರವಾಗಿದೆ ಎಂದರು.
ಸಮಿತಿ ಪ್ರಧಾನ ಕಾರ್ಯದರ್ಶಿ ಆರ್.ಡಿ.ಮಹೇಂದ್ರ ಮಾತನಾಡಿ, ಮಲೆನಾಡು ಮತ್ತು ಬಯಲುಸೀಮೆಯ ರೈತರ ಜೀವನಾಡಿಯಾದ ಭದ್ರಾ ನದಿಗೆ ಭದ್ರಾರತಿ ಕಾರ್ಯಕ್ರಮವನ್ನು ಧಾರ್ಮಿಕ ವಿಧಾನಗಳೊಂದಿಗೆ ನೆರವೇರಿಸಿದ್ದು ಸಮಸ್ತ ರೈತರು, ನದಿ ನೀರು ಬಳಕೆದಾರರಿಗೆ ಒಳಿತಾಗಲಿ ಎಂಬ ಆಶಯವನ್ನು ಸಮಿತಿ ಹೊಂದಿದೆ ಎಂದರು.
ರೈತರಿಗೆ ಉತ್ತಮ ಬೆಳೆ, ಬೆಲೆ ದೊರೆಯುತ್ತದೆ ಎಂಬ ನಂಬಿಕೆಯಿದೆ. ಮುಂದಿನ ವಷರ್ ಇನ್ನಷ್ಟು ವೈಭವಯುತವಾಗಿ ಭದ್ರಾರತಿ ನೆರವೇರಿಸಲಾಗುವುದು. ನವರಾತ್ರಿಯ ಎಲ್ಲ ಕಾರ್ಯಕ್ರಮಗಳಿಗೆ ಭಕ್ತರು ಸಂಪೂರ್ಣ ಸಹಕಾರ ನೀಡಿದ್ದರಿಂದ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದರು.
ಮಂಜು ಹೊಳೆಬಾಗಿಲು ನೇತೃತ್ವದಲ್ಲಿ ಉಕ್ಕಡದ ಮೂಲಕ ತುಂಬಿ ಹರಿಯುವ ಭದ್ರಾ ನದಿಯಲ್ಲಿ ನಡೆದ ವಿವಿಧ ಮಾದರಿಯ ಪಟಾಕಿಗಳ ಪ್ರದರ್ಶನ ನೋಡುಗರ ಗಮನ ಸೆಳೆಯಿತು. ಸಮಿತಿ ಕಾರ್ಯಾಧ್ಯಕ್ಷ ಬಿ.ಚನ್ನಕೇಶವ, ಜಂಟಿ ಕಾರ್ಯದರ್ಶಿ ಪ್ರಭಾಕರ್ ಪ್ರಣಸ್ವಿ, ಉಪಾಧ್ಯಕ್ಷ ಶಿವರಾಮ ಶೆಟ್ಟಿ, ಎಚ್.ಡಿ.ಸತೀಶ್, ಚೈತನ್ಯ ವೆಂಕಿ, ರೆನ್ನಿ ದೇವಯ್ಯ, ನಾರಾಯಣ ಶೆಟ್ಟಿ, ಸುಧಾಕರ್ ದಿಡಿಗೆಮನೆ, ನಾಗರಾಜ್ ಬರಗಲ್ ಇತರರಿದ್ದರು.