ನ್ಯೂಸ್

ಬಿಜೆಪಿಯೊಂದಿಗೆ ಚುನಾವಣಾ ಆಯೋಗ ಕೈ ಜೋಡಿಸಿದೆ ಎಂದ ರಾಹುಲ್: ಕರ್ನಾಟಕದ ಎಂಪಿ ಕ್ಷೇತ್ರದ ಹೆಸರು ಉಲ್ಲೇಖ! |Rahul Gandhi

Rahul Gandhi : ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಚುನಾವಣಾ ಆಯೋಗ ಬಿಜೆಪಿಯೊಂದಿಗೆ ಕೈಜೋಡಿಸಿ ಬೃಹತ್ ಮತ ಕಳ್ಳತನವಾಗಲು ನೆರವಾಗಿದೆ ಎಂದು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್, ಮತದಾರರ ಪಟ್ಟಿಗೆ ನಕಲಿ ಜನರನ್ನು ಸೇರಿಸಲಾಗುತ್ತಿದೆ ಎಂದು ಕರ್ನಾಟಕದ ಮತದಾರರ ಪಟ್ಟಿಯನ್ನು ತೋರಿಸುವ ಮೂಲಕ ವಾಗ್ದಾಳಿ ನಡೆಸಿದರು.

ಕಳೆದ ವರ್ಷ ನಡೆದ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಬೃಹತ್ ಮತ ಕಳ್ಳತನ ನಡೆದಿದ್ದು, 6.5 ಲಕ್ಷ ಮತಗಳಲ್ಲಿ 1 ಲಕ್ಷಕ್ಕೂ ಹೆಚ್ಚು ಮತಗಳ ಅಕ್ರಮವಾಗಿವೆ, ಮಹದೇವಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ನಡೆಸಿದ ಆಂತರಿಕ ಸಂಶೋಧನೆಯಲ್ಲಿ ಈ ಅಂಶ ಬೆಳಕಿಗೆ ಬಂದಿದ್ದು, ಒಂದು ಲಕ್ಷಕ್ಕೂ ಅಧಿಕ ಮತದಾರರಿಗೆ ಸರಿಯಾದ ವಿಳಾಸವಿಲ್ಲ ಎಂದರು.

2024 ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಅಂತಿಮ ಹಂತದವರಗೂ ನಿಕಟ ಸ್ಪರ್ಧೆ ಏರ್ಪಟ್ಟಿತ್ತು, ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಪ್ರತಿ ಸುತ್ತಿನಲ್ಲೂ ಮುನ್ನಡೆ ಕಾಯ್ದುಕೊಳ್ಳುತ್ತಲೇ ಬಂದಿದ್ದರು, ಆದರೆ ಕೊನೆಯಲ್ಲಿ ಬಿಜೆಪಿ ಅಭ್ಯರ್ಥಿ ಪಿಸಿ ಮೋಹನ್ 32,707 ಮತಗಳ ಅಂತರದಿಂದ ಗೆಲುವಿನ ಸಾಧಿಸಿದರು.

ಮತದಾರರ ಪಟ್ಟಿಗಳನ್ನು ಎಲೆಕ್ಟ್ರಾನಿಕ್ ರೂಪದಲ್ಲಿ ನೀಡುವಂತೆ ಚುನಾವಣಾ ಆಯೋಗಕ್ಕೆ ಅನೇಕ ಬಾರಿ ಮನವಿ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ, ಇದು ಅನುಮಾನ ಹೆಚ್ಚಾಗಲು ಕಾರಣವಾಗಿದೆ. ಒಂದು ವೇಳೆ ಆಯೋಗ ನಾವು ಕೇಳಿರುವುದನ್ನು ಒದಗಿಸಿದರೆ 30 ಸೆಕೆಂಡುಗಳಲ್ಲಿ ನಡೆದಿರುವ ವಂಚನೆ ಬಹಿರಂಗಗೊಳ್ಳುತ್ತದೆ ಎಂದು ತಿಳಿಸಿದರು.

ಆಗಸ್ಟ್ 8 ರಂದು ಬೆಂಗಳೂರಿನಲ್ಲಿ ವಿಪಕ್ಷ ನಾಯಕ ರಾಹುಲ್​ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಆಯೋಜಿಸಿರುವ ಚುನಾವಣಾ ಆಯೋಗದ ವಿರುದ್ಧದ  ಪ್ರತಿಭಟನಾ ಮೆರವಣಿಗೆಗೂ ಮುನ್ನ ಈ ಆರೋಪ ಕೇಳಿ ಬಂದಿದ್ದು, ರಾಜ್ಯದಲ್ಲಿ ಹೊಸ ಚರ್ಚೆಯನ್ನು ಹುಟ್ಟು ಹಾಕಿದೆ.(ಏಜೆನ್ಸೀಸ್)