ನ್ಯೂಸ್

2023 ರಲ್ಲಿ ಇದೇ ನನ್ನ ಅತ್ಯುತ್ತಮ ಚಿತ್ರ: ಅಷ್ಟಕ್ಕೂ ಶಾರೂಖ್ ಖಾನ್​ ಹೇಳಿದ ಸಿನಿಮಾ ಯಾವುದು?

ಮುಂಬೈ: ಬಾಲಿವುಡ್​ನ ಕಿಂಗ್​ ಖಾನ್​ ಎಂದೇ ಖ್ಯಾತರಾದ ನಟ ಶಾರುಖ್ ಖಾನ್ ಮತ್ತು ಮಾಸ್ಟರ್ ಕಥೆಗಾರ ಎಂದು ಕರೆಯಲ್ಪಡುವ ರಾಜಕುಮಾರ್ ಹಿರಾನಿ ಕಾಂಬಿನೇಷ್​ನ 'ಡಂಕಿ' ಸಿನಿಮಾ ತಯಾರಾಗಿದ್ದು, ಈ ಸಿನಿಮಾದ ಬಗ್ಗೆ ಇತ್ತೀಚೆಗಷ್ಟೇ ತಮ್ಮ ಜನ್ಮದಿನದಂದು ನಟ ಮನಬಿಚ್ಚಿ ಮಾತನಾಡಿದ್ದಾರೆ.

2023ರ ಡಿಸೆಂಬರ್​ 22 ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳಲು ಸಜ್ಜಾಗಿದ್ದು, ಟಾಲಿವುಡ್​ ಪ್ರಭಾಸ್​ ನಟನೆಯ ಬಹುನಿರೀಕ್ಷಿತ 'ಸಲಾರ್'​ ಜತೆಗೆ ಏಕಕಾಲಕ್ಕೆ ರಿಲೀಸ್​ ಆಗುವ ಮುಖೇನ ಬಾಕ್ಸ್​ ಆಫೀಸ್​ನಲ್ಲಿ ಭರ್ಜರಿ ಪೈಪೋಟಿ ಕೊಡಲು ಸಕಲ ತಯಾರಿಗಳನ್ನು ನಡೆಸುತ್ತಿದೆ. ಈ ಮಧ್ಯೆ ನವೆಂಬರ್​ 02 ರಂದು 58ನೇ ವಸಂತಕ್ಕೆ ಕಾಲಿಟ್ಟ ಶಾರೂಖ್ ಅವರ ಜನ್ಮದಿನದಂದೇ ​ಡಂಕಿ ಟೀಸರ್​ ಅನ್ನು ಅಧಿಕೃತವಾಗಿ ಅನಾವರಣಗೊಳಿಸಲಾಯಿತು.

ಕಾಮಿಡಿ, ಡ್ರಾಮಾ ಜಾನರ್​ನ ಈ ಚಿತ್ರವು ತಮ್ಮ ಹಿಂದಿನ ಸಿನಿಮಾಗಳಾದ 'ಜವಾನ್' ಮತ್ತು 'ಪಠಾನ್‌'ಗಿಂತ ಹೆಚ್ಚು ಮನರಂಜನೆ ನೀಡಲಿದೆ. 2023 ರಲ್ಲಿ 'ಡಂಕಿ' ನನ್ನ ಅತ್ಯುತ್ತಮ ಚಿತ್ರವಾಗಿದೆ ಎಂದು ಶಾರೂಖ್ ತಮ್ಮ ಅಭಿಮಾನಿಗಳಿಗೆ ತಿಳಿಸಿದರು.

ಈ ಹಿಂದೆ ಡಂಕಿ ಚಿತ್ರದ ಟೀಸರ್​ಗಾಗಿ ಭಾರೀ ಕಾತರ ವ್ಯಕ್ತಪಡಿಸಿದ್ದ ಎಸ್​ಆರ್​ಕೆ ಫ್ಯಾನ್ಸ್​, ಟೀಸರ್​ ವೀಕ್ಷಿಸಿದ ಬಳಿಕ ವ್ಯಾಪಕ ಮೆಚ್ಚುಗೆ ತಿಳಿಸಿದ್ದಾರೆ. ಸದ್ಯ ಸಿನಿಮಾವನ್ನು ತೆರೆಯ ಮೇಲೆ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ,(ಏಜೆನ್ಸೀಸ್).