ನ್ಯೂಸ್

ಭೀಮ ಟೀಸರ್ ವೈರಲ್; ವಿಜಯ್ ಹುಟ್ಟುಹಬ್ಬಕ್ಕೆ ಹೊಸ ಚಿತ್ರ ಘೋಷಣೆ

‘ದುನಿಯಾ’ ವಿಜಯ್​ಗೆ ಶುಕ್ರವಾರ ಹುಟ್ಟುಹಬ್ಬದ ಸಂಭ್ರಮ. ‘ವೀರ ಸಿಂಹ ರೆಡ್ಡಿ’ ಚಿತ್ರದ ಮೂಲಕ ಟಾಲಿವುಡ್​ಗೆ ಎಂಟ್ರಿ ಕೊಟ್ಟಿರುವ ಅವರು, ಸದ್ಯ ಆ ಚಿತ್ರದ ಯಶಸ್ಸಿನ ಖುಷಿಯಲ್ಲಿದ್ದಾರೆ. ಜತೆಗೆ ‘ಸಲಗ’ ಬಳಿಕ ‘ಭೀಮ’ ಚಿತ್ರದ ಮೂಲಕ ಮತ್ತೆ ನಿರ್ದೇಶನಕ್ಕಿಳಿದಿರುವ ವಿಜಯ್, ಈ ಬಾರಿಯ ಹುಟ್ಟುಹಬ್ಬವನ್ನು ಆನೇಕಲ್ ಸಮೀಪದ ಹುಟ್ಟೂರಾದ ಕುಂಬಾರನಹಳ್ಳಿಯಲ್ಲಿರುವ ತಂದೆ-ತಾಯಿ ಸಮಾಧಿ ಬಳಿ 49ನೇ ವರ್ಷದ ಹುಟ್ಟುಹಬ್ಬವನ್ನು ಅಭಿಮಾನಿಗಳ ಜತೆ ಆಚರಿಸಿಕೊಂಡಿದ್ದಾರೆ.

ಇದೇ ಸಂದರ್ಭದಲ್ಲಿ ಮಾಧ್ಯಮಗಳಿಗೆ ‘ಭೀಮ’ ಚಿತ್ರತಂಡ ಪರಿಚಯಿಸಿದ ಅವರು, ‘ಅಪ್ಪ-ಅಮ್ಮ ಇಲ್ಲದೆ ನಾನಿಲ್ಲ. ಹುಟ್ಟುಹಬ್ಬವನ್ನು ತಂದೆ-ತಾಯಿ ಸಮ್ಮುಖದಲ್ಲಿ ಆಚರಿಸಿಕೊಳ್ಳುತ್ತಿರುವುದಕ್ಕೆ ಖುಷಿಯಿದೆ. ಶುಂಠಿ ಅಲಿಯಾಸ್ ಜಿಂಜರ್ ಪಾತ್ರದಲ್ಲಿ ‘ಕಾಕ್ರೋಚ್’ ಸುಧಿ, ಗಿರಿಜಾ ಪಾತ್ರದಲ್ಲಿ ಪ್ರಿಯಾ ಶಠಮರ್ಷಣ, ಬ್ಲ್ಯಾಕ್ ಡ್ರಾಗನ್ ಮಂಜು, ಗಿಲಿಗಿಲಿ ಚಂದ್ರು, ಆಶ್ ಮೆಲೋ ಸೇರಿದಂತೆ ಹಲವು ಹೊಸ ಕಲಾವಿದರು ನಟಿಸುತ್ತಿದ್ದಾರೆ. ನನ್ನ ಭಾಗದ ಚಿತ್ರೀಕರಣ ಇನ್ನಷ್ಟೇ ಆರಂಭವಾಗಬೇಕಿದೆ ಎಂದು ಚಿತ್ರದ ಬಗ್ಗೆ ಮಾಹಿತಿ ನೀಡಿದರು ನಿರ್ದೇಶಕ-ನಾಯಕ ವಿಜಯ್.

‘ಭೀಮ’ ಮೂಲಕ ಹೊಸ ಬಗೆಯ ಕಥೆಯನ್ನು ತೆರೆಯ ಮೇಲೆ ತರುವ ಪ್ರಯತ್ನ ಮಾಡುತ್ತಿದ್ದೇನೆ. ಈ ಕಾಲದ ಹುಡುಗರ ನಡುವೆ ನಡೆಯುವ ಕಥೆ. ಮಾಸ್ತಿ ಅದ್ಭುತವಾಗಿ ಡೈಲಾಗ್ಸ್ ಬರೆದಿದ್ದಾರೆ’ ಎಂದು ಹೇಳಿಕೊಂಡರು. ಇದೇ ಸಂದರ್ಭದಲ್ಲಿ ವಿಜಯ್ ನಾಯಕನಾಗಿ ನಟಿಸುತ್ತಿರುವ 29ನೇ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಆ ಚಿತ್ರವನ್ನು ಜಡೇಶ್ ಹಂಪಿ ನಿರ್ದೇಶಿಸುತ್ತಿದ್ದು, ಜಗದೀಶ್ ಮತ್ತು ಕೃಷ್ಣ ಸಾರ್ಥಕ್ ಅವರೇ ನಿರ್ವಿುಸಲಿದ್ದಾರೆ.