ನ್ಯೂಸ್

ಪ್ರಖ್ಯಾತ ಆಟೋಮೊಬೈಲ್ ಕಂಪನಿಗೆ ಆದಾಯ ತೆರಿಗೆ ಇಲಾಖೆಯ ನೋಟಿಸ್; 2,160 ಕೋಟಿ ರೂ. ಟ್ಯಾಕ್ಸ್​​ ಬಾಕಿ

ನವದೆಹಲಿ: ಆಟೋಮೊಬೈಲ್ ದೈತ್ಯ ಮಾರುತಿ ಸುಜುಕಿ ಇಂಡಿಯಾ ಆದಾಯ ತೆರಿಗೆ ಇಲಾಖೆಯಿಂದ 2160 ಕೋಟಿ ರೂಪಾಯಿ ನೋಟಿಸ್‌ಗಳನ್ನು ಸ್ವೀಕರಿಸಿದೆ. ಇದನ್ನು ಸ್ವತಃ ಮಾರುತಿ ಸುಜುಕಿ ಬಹಿರಂಗಪಡಿಸಿದೆ.  ಅಕ್ಟೋಬರ್ 3 ರಂದು ಷೇರು ವಿನಿಮಯ ಕೇಂದ್ರಕ್ಕೆ ಅಧಿಸೂಚನೆಯಲ್ಲಿ ಇದನ್ನು ಬಹಿರಂಗಪಡಿಸಿದೆ. 

ಮಾರುತಿ ಸುಜುಕಿ ಆದಾಯ ತೆರಿಗೆ ಇಲಾಖೆಯಿಂದ 2,160 ಕೋಟಿ ರೂಪಾಯಿಗಳ ಬಾಕಿಗೆ ಕರಡು ಮೌಲ್ಯಮಾಪನ ಆದೇಶವನ್ನು ಸ್ವೀಕರಿಸಿದೆ. ವಿಶೇಷವೆಂದರೆ ಈ ವಿಷಯ 2019-20ನೇ ಹಣಕಾಸು ವರ್ಷಕ್ಕೆ ಸಂಬಂಧಿಸಿದೆ. ಈಗ ನೋಟಿಸ್‌ಗಳು ಬಂದಿವೆ. ಪರಿಹಾರ ಸಮಿತಿಯ ಮುಂದೆ ತನ್ನ ಆಕ್ಷೇಪಣೆಗಳನ್ನು ದಾಖಲಿಸುವುದಾಗಿ ಕಂಪನಿಯು ಆದೇಶಕ್ಕೆ ಪ್ರತಿಕ್ರಿಯೆಯಾಗಿ ತಿಳಿಸಿದೆ.

ಕಂಪನಿಯು  2019-20 ಹಣಕಾಸು ವರ್ಷದ ಕರಡು ಮೌಲ್ಯಮಾಪನ ಆದೇಶವನ್ನು ಸ್ವೀಕರಿಸಿದೆ, ಇದರಲ್ಲಿ ಹಿಂದಿರುಗಿದ ಆದಾಯಕ್ಕೆ (ಕಂಪನಿಯು ತನ್ನ ಆದಾಯ ತೆರಿಗೆ ರಿಟರ್ನ್‌ನಲ್ಲಿ ಬಹಿರಂಗಪಡಿಸಿದ ಆದಾಯ) ಸಂಬಂಧಿಸಿದಂತೆ ರೂ 21,597 ಮಿಲಿಯನ್ ಮೊತ್ತದ ಕೆಲವು ಸೇರ್ಪಡೆಗಳು/ನಿರಾಕರಣೆಗಳನ್ನು ಪ್ರಸ್ತಾಪಿಸಲಾಗಿದೆ ಎಂಬ ಮಾಹಿತಿ ನೀಡಿದೆ. ಆದರೆ ಈ ಆದೇಶವು ಕಂಪನಿಯ ಹಣಕಾಸು ಕಾರ್ಯಾಚರಣೆಗಳು ಅಥವಾ ಇತರ ಚಟುವಟಿಕೆಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.

ಕರಡು ಮೌಲ್ಯಮಾಪನ ಆದೇಶದ ವಿತರಣೆ : ಸಾಮಾನ್ಯವಾಗಿ, ಕಂಪನಿಯ ವಿರುದ್ಧ ಮೌಲ್ಯಮಾಪನ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ನಂತರ ತೆರಿಗೆ ಇಲಾಖೆಯಿಂದ ಕರಡು ಮೌಲ್ಯಮಾಪನ ಆದೇಶವನ್ನು ನೀಡಲಾಗುತ್ತದೆ.  ಇದು ಒಟ್ಟು ಆದಾಯ ಅಥವಾ ನಷ್ಟ, ಪಾವತಿಸಬೇಕಾದ ತೆರಿಗೆ ಅಥವಾ ಮರುಪಾವತಿಸಬಹುದಾದ ವಿವರಗಳು ಮತ್ತು ಮೌಲ್ಯಮಾಪನ ಮಾಡುವ ಅಧಿಕಾರಿಯಿಂದ ಪ್ರಕ್ರಿಯೆಗಳನ್ನು ಕೈಗೊಂಡ ಅವಧಿಗೆ ಸಂಬಂಧಿಸಿದ ಇತರ ಪ್ರಮುಖ ವಿವರಗಳನ್ನು ಒಳಗೊಂಡಿರುತ್ತದೆ.

ಸೆಪ್ಟೆಂಬರ್ 2023 ರಲ್ಲಿ ಮಾರುತಿ ಸುಜುಕಿ ಇಂಡಿಯಾ ತನ್ನ ಅತ್ಯಧಿಕ ಮಾಸಿಕ ಮಾರಾಟವನ್ನು ದಾಖಲಿಸಿದ ಒಂದು ದಿನದ ನಂತರ ಅಕ್ಟೋಬರ್ 3 ರಂದು ಆದೇಶವನ್ನು ಹೊರಡಿಸಲಾಗಿದೆ. ಕಳೆದ ತಿಂಗಳು ಕಂಪನಿಯ ಒಟ್ಟು ಸಗಟು ಮಾರಾಟವು ವರ್ಷದಿಂದ ವರ್ಷಕ್ಕೆ 2.8 ಶೇಕಡಾ ಏರಿಕೆಯಾಗಿ 181,343 ಯುನಿಟ್‌ಗಳಿಗೆ ತಲುಪಿದೆ.

ಕಳೆದ ವರ್ಷ ಇದೇ ಸಮಯದಲ್ಲಿ ಡೀಲರ್‌ಗಳಿಗೆ ರವಾನಿಸಲಾದ ಘಟಕಗಳ ಸಂಖ್ಯೆ 176,306 ಆಗಿತ್ತು. ಮಾರುತಿ ಸುಜುಕಿ ಇಂಡಿಯಾದ ಷೇರುಗಳು ಅಕ್ಟೋಬರ್ 3 ರ ವಹಿವಾಟಿನಲ್ಲಿ ಬಿಎಸ್‌ಇಯಲ್ಲಿ ರೂ 10,340.90 ಕ್ಕೆ ಕೊನೆಗೊಂಡಿತು, ಹಿಂದಿನ ದಿನದ ಮುಕ್ತಾಯಕ್ಕಿಂತ 2.46 ಶೇಕಡಾ ಕಡಿಮೆಯಾಗಿದೆ.