ನ್ಯೂಸ್

ಕೋವಿಡ್ ಅಲೆ ಭೀತಿ, ಬೂಸ್ಟರ್​ ಡೋಸ್​ಗೆ ಬೇಡಿಕೆ; ನೋಂದಣಿ ಹೆಚ್ಚಳ, ಕೋವಿಡ್ ಪೋರ್ಟಲ್​ನಲ್ಲಿ ಜ. 7ರವರೆಗೂ ಸ್ಲಾಟ್ ಬುಕಿಂಗ್

ಬೆಂಗಳೂರು: ಕೋವಿಡ್ ಸೋಂಕು ಪ್ರಕರಣಗಳ ಸಂಖ್ಯೆ ಗಣನೀಯವಾಗಿ ತಗ್ಗಿದ್ದು ಜನಜೀವನ ಸಹಜಸ್ಥಿತಿಗೆ ಮರಳಿದ್ದರಿಂದ ಮುನ್ನೆಚ್ಚರಿಕೆ ಡೋಸ್ ಪಡೆಯುವ ಬಗ್ಗೆ ನಿರಾಸಕ್ತಿ ಹೊಂದಿದ್ದ ಜನರು ಇದೀಗ ಹೊಸ ಅಲೆಯ ಆತಂಕದಿಂದಾಗಿ ಮತ್ತೆ ಲಸಿಕೆ ಪಡೆಯಲು ಒಲವು ತೋರುತ್ತಿದ್ದಾರೆ.

ಚೀನಾ ಸೇರಿ ಕೆಲ ದೇಶಗಳಲ್ಲಿ ಕೋವಿಡ್ ಪ್ರಕರಣಗಳ ಏರಿಕೆ ಹಿನ್ನೆಲೆಯಲ್ಲಿ ತಜ್ಞರ ಶಿಫಾರಸಿನಂತೆ ಸರ್ಕಾರ ಮುನ್ನೆಚ್ಚರಿಕೆ ಕ್ರಮಗಳನ್ನು ಜಾರಿಗೊಳಿಸಿದ ಬೆನ್ನಲ್ಲೇ ರಾಜ್ಯದಲ್ಲಿ ಲಸಿಕೆಗಾಗಿ ಹೆಸರು ನೋಂದಾಯಿಸುವವರ ಸಂಖ್ಯೆ ಹೆಚ್ಚಳವಾಗಿದೆ. ಈಗಾಗಲೇ ಕೋವಿನ್ ಪೋರ್ಟಲ್ ಮೂಲಕ ಜ. 7ರವರೆಗೂ ಲಸಿಕೆಗಾಗಿ ಸ್ಲಾಟ್ ಕಾಯ್ದಿರಿಸಲಾಗಿದೆ. ಇದರಿಂದಾಗಿ ಲಸಿಕೆಗೆ ಮತ್ತೆ ಬೇಡಿಕೆ ಹೆಚ್ಚಾಗುತ್ತಿದೆ.

ಕೆಲ ದೇಶಗಳಲ್ಲಿ ವ್ಯಾಪಕವಾಗಿ ಹರಡುತ್ತಿರುವ ಬಿಎಫ್-7 ಒಮಿಕ್ರಾನ್‌ಗಿಂತ ವೇಗವಾಗಿ ಹರಡುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸೋಂಕು ಪ್ರಕರಣಗಳು ವರದಿಯಾಗುತ್ತಿವೆ. ಅಲ್ಲದೆ ದೇಶದಲ್ಲಿ ಈಗಾಗಲೇ ನಾಲ್ಕು ಬಿಎಫ್-7 ಸೋಂಕು ಪ್ರಕರಣಗಳು ವರದಿಯಾಗಿವೆ. ಹಾಗಾಗಿ ಜನರು ಸೋಂಕಿನಿಂದ ಪಾರಾಗಲು ಮುನ್ನೆಚ್ಚರಿಕೆ ಡೋಸ್ ಪಡೆಯುವುದು ಸೂಕ್ತ ಎಂದು ತಜ್ಞರು ಸೂಚಿಸಿದ್ದಾರೆ. ಹಾಗಾಗಿ ಲಸಿಕೆ ಪಡೆಯಲು ಜನರು ಆಸಕ್ತಿ ವಹಿಸುತ್ತಿದ್ದಾರೆ ಎನ್ನುವುದಕ್ಕಿಂತ ಈಗಷ್ಟೇ ಆರ್ಥಿಕತೆಯಿಂದ ಚೇತರಿಸಿಕೊಳ್ಳುತ್ತಿರುವ ಕಂಪನಿಗಳು, ಕೈಗಾರಿಕೆಗಳು, ಕಾರ್ಖಾನೆಗಳು ತಮ್ಮ ನೌಕರರಿಗೆ ಲಸಿಕೆ ಕೊಡಿಸಲು ಮುಂದಾಗಿವೆ.

5.5 ಕೋಟಿ ಮಂದಿಗೆ ಲಸಿಕೆ ವಿತರಣೆ:: ರಾಜ್ಯದಲ್ಲಿ 2021ರ ಜ.16ರಿಂದ ಕೋವಿಡ್ ಲಸಿಕೆ ವಿತರಣೆ ಪ್ರಾರಂಭವಾಯಿತು. ಈವರೆಗೂ ಐದುವರೆ ಕೋಟಿಗೂ ಅಧಿಕ ಮಂದಿ ಎರಡು ಡೋಸ್ ಲಸಿಕೆ ಪಡೆದಿದ್ದು, ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಕೆಯಾದ್ದರಿಂದ ಬಹುತೇಕರು ಮುನ್ನೆಚ್ಚರಿಕೆ ಡೋಸ್ ಲಸಿಕೆ ಪಡೆಯಲಿಲ್ಲ. ರಾಜ್ಯದಲ್ಲಿ ಈವರೆಗೂ ಕೇವಲ ಒಂದು ಕಾಲು ಕೋಟಿ ಮಂದಿ ಮಾತ್ರವೇ ಮುನ್ನೆಚ್ಚರಿಕೆ ಡೋಸ್ ಪಡೆದಿದ್ದಾರೆ. ಈಗ ಹೊಸ ಅಲೆಯ ಭೀತಿಯಿಂದಾಗಿ ಪತ್ತೆ ಲಸಿಕೆ ಪಡೆಯಲು ಮುಂದಾಗುತ್ತಿದ್ದಾರೆ.

ಖಾಸಗಿ ಆಸ್ಪತ್ರೆಗಳಲ್ಲಿ ಸದ್ಯ 1.5 ಲಕ್ಷ ಡೋಸ್ ಲಸಿಕೆ ಲಭ್ಯವಿದ್ದು, ಅರ್ಹರು ಕೂಡಲೇ ಮುನ್ನೆಚ್ಚರಿಕೆ ಡೋಸ್ ಲಸಿಕೆ ಪಡೆದುಕೊಳ್ಳಬೇಕು. ಮಾಸ್ಕ್, ವ್ಯಕ್ತಿಗತ ಅಂತರ ಸೇರಿ ಕೋವಿಡ್ ನಿಯಮ ಪಾಲಿಸುವ ಮೂಲಕ ಸೋಂಕು ಹರಡದಂತೆ ಎಚ್ಚರ ವಹಿಸಬೇಕು.’ | ಡಾ. ಪ್ರಸನ್ನ, ಮಾಜಿ ಅಧ್ಯಕ್ಷರು, ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್‌ಗಳ ಒಕ್ಕೂಟ (ನಾ)

ಸರ್ಕಾರಿ ಕೇಂದ್ರಗಳಲ್ಲಿ ಲಸಿಕೆ ಉಚಿತ: ಆರಂಭದಲ್ಲಿ ಮೊದಲ ಡೋಸ್ ಪಡೆದ 28 ದಿನಗಳ ನಂತರ ಎರಡನೇ ಡೋಸ್ ಲಸಿಕೆ ನೀಡಲಾಯಿತು. ನಂತರದಲ್ಲಿ ಎರಡನೇ ಡೋಸ್ ಅವಧಿಯನ್ನು ಮೂರು ತಿಂಗಳಿಗೆ ವಿಸ್ತರಿಸಲಾಯಿತು. ಎರಡು ಡೋಸ್ ಪಡೆದ ಆರು ತಿಂಗಳ ನಂತರ ಮುನ್ನೆಚ್ಚರಿಕೆ ಡೋಸ್ ಲಸಿಕೆ ನೀಡಲಾಗುತ್ತಿದ್ದು, ಸರ್ಕಾರಿ ಲಸಿಕಾ ಕೆಂದ್ರಗಳಲ್ಲಿ ಉಚಿತವಾಗಿ ಲಸಿಕೆ ಲಭ್ಯವಿದ್ದು, ಖಾಸಗಿಯಲ್ಲಿ 350 ರೂ. ನೀಡಿ ಲಸಿಕೆ ಪಡೆಯಬಹುದು.