ಎಂ ಎನ್ ಕೋಟೆ: ಸಮರ್ಪಕ ವಿದ್ಯುತ್ ಪೂರೈಸುವಂತೆ ಒತ್ತಾಯಿಸಿ ಅರೇಹಳ್ಳಿ, ಬೆಟ್ಟದಹಳ್ಳಿ, ಶಿವನೇಹಳ್ಳಿ ಭಾಗದ ರೈತರು ಶುಕ್ರವಾರ ಗುಬ್ಬಿ ತಾಲೂಕು ಹೊಸಕೆರೆ ಬೆಸ್ಕಾಂ ಕಚೇರಿಗೆ ತೆರಳಿ ಶಾಖಾಧಿಕಾರಿ ಕಾಂತರಾಜು ಅವರಿಗೆ ಮನವಿ ಸಲ್ಲಿಸಿದರು.
ರೈತ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅರೇಹಳ್ಳಿ ಮಂಜುನಾಥ್ ಮಾತನಾಡಿ, ಬೇಸಿಗೆ ಕಾಲದಲ್ಲಿ ಸಮರ್ಪಕ ವಿದ್ಯುತ್ ಪೂರೈಸದ ಕಾರಣ ಅಡಕೆ, ತೆಂಗಿನ ತೋಟ ಒಣಗುತ್ತಿವೆ. ಬೆಳಗ್ಗೆ, ಸಂಜೆ ಕನಿಷ್ಠ 6ಗಂಟೆ ವಿದ್ಯುತ್ ಪೂರೈಸಿದರೆ ರೈತರಿಗೆ ಅನುಕೂಲವಾಗುತ್ತದೆ ಎಂದರು.
ಬೆಸ್ಕಾಂ ಶಾಖಾಧಿಕಾರಿ ಕಾಂತರಾಜು ಮಾತನಾಡಿ, ಬೇಸಿಗೆ ಇರುವುದರಿಂದ ಮೈನ್ ಸ್ಟೇಷನ್‌ನಿಂದಲೇ ಸಮಸ್ಯೆಯಾಗಿದೆ. ರೈತರ ಸಮಸ್ಯೆಯನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದು ಬಗೆಹರಿಸಲಾಗುವುದು. ಸರ್ಕಾರದಿಂದ ವಿದ್ಯುತ್ ಉಪಸ್ಥಾವರ ಘಟಕ ನಿರ್ಮಾಣಕ್ಕೆ ಅನುಮೋದನೆ ಸಿಕ್ಕಿದ್ದು, ಮಂಚಲದೊರೆ, ಹೂವಿನಕಟ್ಟೆ, ಪಿನ್ನೆನ್ನಹಳ್ಳಿ ಭಾಗದಲ್ಲಿ ಗ್ರಾಪಂ ವತಿಯಿಂದ ಜಾಗ ನೀಡಿದರೆ ವಿದ್ಯುತ್ ಸಮಸ್ಯೆ ಇರುವುದಿಲ್ಲ ಎಂದರು.
ರೈತ ಸಂಘದ ಸದಸ್ಯರಾದ ಕುರಿ ಶಿವಣ್ಣ, ಸಿದ್ದೇಶ್, ಸಂತೋಷ್, ಹೇಮಂತ್, ಅರುಣ್, ಸುನೀಲ್, ಗುರು, ಮಂಜು, ಸಿದ್ದರಾಮಣ್ಣ, ರೇಣುಕಪ್ಪ ಇದ್ದರು.