ನವದೆಹಲಿ: ಕೋವಿಡ್-19 ಲಾಕ್ಡೌನ್ನಿಂದಾಗಿ ಉದ್ಯೋಗ ಕಡಿತಕ್ಕೆ ಒಳಗಾದ ಮಹಿಳೆಯೊಬ್ಬರು ನಡೆಸಿದ ಪ್ರಯೋಗ ಭರ್ಜರಿ ಯಶಸ್ವಿಯಾಗಿದೆ. ಈ ಪ್ರಯೋಗದಿಂದಾಗಿ ಈಗ ಬೀಪ್, ಪೀಪ್ ಮತ್ತು ಮೀಪ್ ಎಂಬ ಮೂರು ಬಾತುಕೋಳಿಗಳು ಮೊಟ್ಟೆಯೊಡೆದು ಹೊರಬಂದಿವೆ!
ಈ ಪ್ರಯೋಗ ನಡೆದಿರುವುದು ದೂರದ ಇಂಗ್ಲೆಂಡ್ನಲ್ಲಿ 29 ವರ್ಷದ ಚಾರ್ಲಿ ಲೆಲ್ಲೋ ಎಂಬುವರು ಸೂಪರ್ ಮಾರ್ಕೆಟ್ನಿಂದ ಮೂರು ಬಾತುಕೋಳಿಗಳ ಮೊಟ್ಟೆಗಳನ್ನು ತಂದಿದ್ದರು. ಉದ್ಯೋಗ ಕಡಿತಕ್ಕೆ ಒಳಗಾಗಿದ್ದರಿಂದ, ಬಿಡುವಿನ ಸಮಯವನ್ನು ಅರ್ಥಗರ್ಭಿತವಾಗಿ ಕಳೆಯಲು ನಿರ್ಧರಿಸಿದ್ದ ಅವರು, ಇಂಟರ್ನೆಟ್ ಅನ್ನು ತಡಕಾಡಿ, ಸೂಪರ್ಮಾರ್ಕೆಟ್ನಿಂದ ತಂದ ಮೊಟ್ಟೆಗಳನ್ನು ಮರಿಯಾಗಿಸುವುದು ಹೇಗೆ ಎಂಬುದನ್ನು ತಿಳಿದುಕೊಂಡರು.
ಬಳಿಕ ತಮ್ಮದೇ ಆದ ರೀತಿಯಲ್ಲಿ ಇನ್ಕ್ಯುಬೇಟರ್ ಅನ್ನು ಸಿದ್ಧಪಡಿಸಿದ ಅವರು, ಆ ಮೂರು ಮೊಟ್ಟೆಗಳನ್ನು ಅದರೊಳಗೆ ಇರಿಸಿದರು. ಅಂದಾಜು ಒಂದು ಒಂದು ತಿಂಗಳವರೆಗೆ ಇನ್ಕ್ಯುಬೇಟರ್ನಲ್ಲಿ ಮೊಟ್ಟೆಗಳಿಗೆ ಕಾವು ಕೊಟ್ಟರು. ಸರಿಯಾಗಿ ಒಂದು ತಿಂಗಳ ಬಳಿಕ ಅವರಿಗೆ ಚಿಂವ್, ಚಿಂವ್... ಎಂಬ ಸದ್ದು ಕೇಳಲಾರಂಭಿಸಿತು. ನೋಡಿದರೆ, ಮೂರು ಮೊಟ್ಟೆಗಳನ್ನು ಹೊಡೆದುಕೊಂಡು ಬಾತುಕೋಳಿ ಮರಿಗಳು ನಿಧಾನವಾಗಿ ಹೊರಬರಲಾರಂಭಿಸಿದ್ದವು. ಅವುಗಳಿಗೆ ಬೀಪ್, ಪೀಪ್ ಮತ್ತು ಮೀಪ್ ಎಂದು ಹೆಸರನ್ನಿಟ್ಟು, ಸಾಕಲಾರಂಭಿಸಿದ್ದಾರೆ.
ನಾನು ಕೆಲಸಕ್ಕೆ ಹೋಗುತ್ತಿದ್ದರೆ ಅದರಲ್ಲೇ ಸಂಪೂರ್ಣ ಸಮಯ ಕಳೆದುಹೋಗುತ್ತಿತ್ತು. ಇಂಥ ಪ್ರಯೋಗಗಳಿಗಾಗಲಿ ಅಥವಾ ಬಾತುಕೋಳಿಗಳನ್ನು ಸಾಕಲಾಗಲಿ ಸಮಯ ಸಿಗುತ್ತಿರಲಿಲ್ಲ. ಕೋವಿಡ್-19 ಲಾಕ್ಡೌನ್ನಿಂದಾಗಿ ಉದ್ಯೋಗ ಕಡಿತಕ್ಕೆ ಒಳಗಾಗಿದ್ದರಿಂದ, ಸಮಯವನ್ನು ಅರ್ಥಗರ್ಭಿತವಾಗಿ ಕಳೆಯಲು ಹೀಗೆ ಮಾಡಿದೆ. ಯಶಸ್ಸು ದಕ್ಕಿತು. ಇದೀಗ ಮರಿಗಳು ದೊಡ್ಡವಾಗುವವರೆಗೂ ಚೆನ್ನಾಗಿ ಸಾಕುತ್ತೇನೆ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.