ನ್ಯೂಸ್

ನಟೋರಿಯಸ್‌ ರೌಡಿ ದುಬೆ ಸಾವಿನ ಕುರಿತು ವೈದ್ಯರು ಹೇಳಿದ್ದೇನು?

ಕಾನ್ಪುರ : ಇಂದು ಬೆಳಗ್ಗೆ ಎನ್‌ಕೌಂಟರ್‌ನಲ್ಲಿ ಹತ್ಯೆಯಾಗಿರುವ ಕುಖ್ಯಾತ ರೌಡಿ ವಿಕಾಸ್‌ ದುಬೆಯ ಬಗ್ಗೆ ಇದೀಗ ಹಲವಾರು ಅನುಮಾನಗಳ ಹುತ್ತ ಸುಳಿದಾಡುತ್ತಿರುವ ಮಧ್ಯೆಯೇ, ಆತ ಹೇಗೆ ಸತ್ತಿದ್ದಾನೆ ಎಂಬ ಬಗ್ಗೆ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.

ಆಸ್ಪತ್ರೆಯ ಪ್ರಾಂಶುಪಾಲರಾದ ಡಾ. ಆರ್ಬಿ ಕಮಲ್ ಮಾಧ್ಯಮಗಳ ಜತೆ ಮಾತನಾಡುತ್ತಾ, "ವಿಕಾಸ್ ದುಬೆ ಅವರ ಎದೆಗೆ ಮೂರು ಮತ್ತು ಅವರ ತೋಳಿನ ಮೇಲೆ ಒಂದು ಗುಂಡು ಗಾಯಗಳಾಗಿವೆ" ಎಂದು ಹೇಳಿದ್ದಾರೆ.

ಘಟನೆಯಲ್ಲಿ ಗಾಯಗೊಂಡಿದ್ದ ಪೊಲೀಸರ ಸ್ಥಿತಿ ಸ್ಥಿರವಾಗಿರುವುದಾಗಿ ವೈದ್ಯರು ಹೇಳಿದ್ದಾರೆ.

ಈತನನ್ನು ಕರೆದೊಯ್ಯುತ್ತಿದ್ದ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ (ಎಸ್‌ಯುವಿ) ಇಂದು ಬೆಳಗ್ಗೆ ಪಲ್ಟಿಯಾದಾಗ ವಿಕಾಸ್ ದುಬೆ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಂತೆ ಎನ್‌ಕೌಂಟರ್ ನಡೆದಿರವುದಾಗಿ ಪೊಲೀಸ್ ಹೇಳಿಕೆ ನೀಡಿದ್ದಾರೆ. ಇದರ ಬೆನ್ನಲ್ಲೇ ಈತನಿಗೆ ಹೇಗೆ ಗುಂಡುಗಳು ಬಿದ್ದಿವೆ ಎಂಬ ಬಗ್ಗೆ ವೈದ್ಯರು ಸ್ಪಷ್ಟಪಡಿಸಿದ್ದಾರೆ.

ಕಳೆದ ವಾರ ಎಂಟು ಪೊಲೀಸರನ್ನು ಹತ್ಯೆ ಮಾಡಿದ ಬಳಿಕ ವಿಕಾಸ್ ದುಬೆ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ, ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ. ನಂತರ ಆತನನ್ನು ಮಹಾಕಾಲ ದೇವಾಲಯದಲ್ಲಿ ಪತ್ತೆ ಮಾಡಲಾಗಿತ್ತು. ಈತ ದೇವಾಲಯಕ್ಕೆ ಹೋಗಿರುವ ಸುದ್ದಿ ತಿಳಿಯುತ್ತಿದ್ದಂತೆಯೇ ಕಾರ್ಯಪ್ರವೃತ್ತರಾಗಿದ್ದ ಪೊಲೀಸರು ಆತನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದರು.

ಆತನನ್ನು ಮಧ್ಯಪ್ರದೇಶದ ಉಜ್ಜಯಿನಿ ನಗರದಿಂದ ಮತ್ತೆ ಕಾನ್ಪುರಕ್ಕೆ ಬರುತ್ತಿದ್ದ ಸಮಯದಲ್ಲಿ ಜೋರಾಗಿ ಮಳೆ ಶುರುವಾಗಿದ್ದರಿಂದ ಕಾರು ಪಲ್ಟಿಯಾಗಿತ್ತು. ದನದ ಹಿಂಡು ಬಂದಿದ್ದರಿಂದ ತಪ್ಪಿಸಲು ಹೋಗಿ ಕಾರು ಪಲ್ಟಿಯಾಗಿತ್ತು. ಈ ಸಮಯದಲ್ಲಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ ದುಬೆ ಪೊಲೀಸರೊಬ್ಬರಿಂದ ಪಿಸ್ತೂಲ್ ಕಿತ್ತುಕೊಂಡು ಓಡಿಹೋಗಲು ಪ್ರಯತ್ನಿಸಿದ್ದಾನೆ. ಪೊಲೀಸರು ಶರಣಾಗುವಂತೆ ಹೇಳಿದರೂ ಪಿಸ್ತೂಲ್‌ ಹಾರಿಸಿದ್ದರಿಂದ ಎನ್‌ಕೌಂಟರ್‌ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯಲ್ಲಿ ಮೂವರು ಸಬ್ ಇನ್ಸ್‌ಪೆಕ್ಟರ್, ಕಾನ್‌ಸ್ಟೆಬಲ್ ಮತ್ತು ಇಬ್ಬರು ಎಸ್‌ಟಿಎಫ್ ಕಮಾಂಡೋಗಳು ಗಾಯಗೊಂಡಿದ್ದಾರೆ ಎಂದು ಯುಪಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು (ಕಾನೂನು ಮತ್ತು ಸುವ್ಯವಸ್ಥೆ) ಪ್ರಶಾಂತ್ ಕುಮಾರ್ ತಿಳಿಸಿದ್ದಾರೆ.ಅವರ ಸ್ಥಿತಿ ಸ್ಥಿರವಾಗಿರುವುದಾಗಿ ಹೇಳಲಾಗಿದೆ.

ಈ ನಡುವೆಯೇ ಇದು ನಕಲಿ ಎನ್‌ಕೌಂಟರ್‌ ಆಗಿದ್ದು, ತನಿಖೆ ನಡೆಸಬೇಕು ಎಂದು ಪ್ರತಿಪಕ್ಷಗಳು ಹೇಳುತ್ತಿದ್ದು, ಈ ಕುರಿತು ಸುಪ್ರೀಂಕೋರ್ಟ್‌ಗೂ ಅರ್ಜಿ ಸಲ್ಲಿಸಲಾಗಿದೆ.