ನ್ಯೂಸ್

ಸ್ಟಾರ್​ ನಟಿಯರಿಗೆ ಡಬ್​ ಮಾಡೋದು ಯುವತಿ ಅಲ್ಲ ಯುವಕ! ಸೌತ್​ ಬ್ಯೂಟಿಗಳ ಧ್ವನಿ ಹಿಂದಿದೆ ಈತನ ಜಾದು | Dubbing Artist

Dubbing Artist: ಸಾಮಾನ್ಯವಾಗಿ ನಮಗೆಲ್ಲಾ ತಿಳಿದಿರುವಂತೆ ಸ್ಟಾರ್ ಕಲಾವಿದರಿಗೆ ಅವರ ಧ್ವನಿಗಿಂತ ಇನ್ನೊಬ್ಬರ ಧ್ವನಿಯನ್ನು ಡಬ್​ ಮಾಡಿಸಲಾಗುತ್ತದೆ. ಕೆಲವೇ ಕೆಲವು ನಟ-ನಟಿಯರು ತಮ್ಮ ಧ್ವನಿಯಲ್ಲೇ ಡಬ್ಬಿಂಗ್ ಮಾಡಲು ಬಯಸಿದರೆ, ಬಹುತೇಕ ಕಲಾವಿದರಿಗೆ ಡಬ್ಬಿಂಗ್ ಆರ್ಟಿಸ್ಟ್​ಗಳ ಅವಶ್ಯಕತೆ ಇರುತ್ತದೆ. ಇದು ನಿರ್ದೇಶಕರ ಆಯ್ಕೆ ಆಗಿರುತ್ತದೆ. ತಮ್ಮ ಚಿತ್ರದ ನಟಿ ಅಥವಾ ನಟನಿಗೆ ಯಾರಿಂದ ಡಬ್ ಮಾಡಿಸಬೇಕು ಎಂಬ ನಿರ್ಧಾರ ಅವರಿಗೆ ಬಿಟ್ಟದ್ದು. ಹೀಗಿರುವಾಗ ನಟಿಮಣಿಯರಿಗೆ ಯುವತಿಯಿಂದ ಮತ್ತು ನಟರಿಗೆ ಯುವಕರಿಂದ ಕಂಠದಾನ ಮಾಡಲಾಗುತ್ತದೆ. ಆದರೆ, ತೆಲುಗು ಚಿತ್ರರಂಗದಲ್ಲಿ ಮಾತ್ರ ಇದು ಕೊಂಚ ಭಿನ್ನ.

ಬೆಳ್ಳಿಪರದೆಯ ಮೇಲೆ ತಮ್ಮ ನೆಚ್ಚಿನ ನಟಿಯರ ಧ್ವನಿಗೆ ಮನಸೋಲುವ ಅನೇಕರು, ಅವರ ಅಭಿನಯದ ಜತೆಗೆ ಇಂಪಾದ ಧ್ವನಿಯನ್ನು ಆನಂದಿಸುತ್ತಾರೆ. ಇದು ಅವರದ್ದೇ ಕಂಠ ಎಂದು ಭಾವಿಸುತ್ತಾರೆ. ಆದರೆ, ಅಸಲಿಗೆ ಅದು ಡಬ್ಬಿಂಗ್ ಕಲಾವಿದರದ್ದಾಗಿರುತ್ತದೆ. ತೆಲುಗು ಚಿತ್ರರಂಗದ ಸ್ಟಾರ್ ನಟಿಯರಾದ ಸಮಂತಾ, ಸಾಯಿ ಪಲ್ಲವಿ ಅವರಿಗೆ ಕಂಠದಾನ ಮಾಡುವುದು ಯುವತಿಯರಲ್ಲ. ಬದಲಿಗೆ ಓರ್ವ ಕಂಠದಾನ ಕಲಾವಿದ. ಅದರಲ್ಲೂ ಸಾಯಿ ಪಲ್ಲವಿ ಅವರ ಧ್ವನಿಗೆ ಈತ ಬಹಳ ಜನಪ್ರಿಯ ಎಂಬುದು ಮತ್ತಷ್ಟು ವಿಶೇಷ.

25ಕ್ಕೂ ಹೆಚ್ಚು ನಟಿಯರು

ಮೂಲತಃ ಕರ್ನಾಟಕದವರಾದ ಆದ್ಯಾ ಹನುಮಂತು. ರಾಯಚೂರು ಜಿಲ್ಲೆಯವರು. ಎಂಬಿಬಿಎಸ್​ ಮುಗಿಸಿರುವ ಆದ್ಯಾ, ಕನ್ನಡ, ತೆಲಗು, ಮಲಯಾಳಂ ಚಿತ್ರಗಳ ಕಲಾವಿದರಿಗೆ ಕಂಠದಾನ ಮಾಡಿದ್ದಾರೆ. ಇಲ್ಲಿಯವರೆಗೆ 175ಕ್ಕೂ ಹೆಚ್ಚು ಚಿತ್ರಗಳಿಗೆ ಅವರು ಧ್ವನಿ ನೀಡಿದ್ದಾರೆ.

ಟೀಕೆ, ವ್ಯಂಗ್ಯ

ಆರಂಭದಲ್ಲಿ ಆದ್ಯಾ ಧ್ವನಿಗೆ ಟೀಕೆಗಳು ವ್ಯಕ್ತವಾಗಿತ್ತು. ಮಹಿಳೆಯರ ಧ್ವನಿ ಇದ್ದಂತಿದೆ. ಇದೆಲ್ಲಾ ಹೇಗೆ? ಎಂಬ ವ್ಯಂಗ್ಯ, ಲೇವಡಿಗಳ ನಡುವೆ ಶ್ರದ್ಧೆ, ಕೆಲಸದ ತುಡಿತದಿಂದ ಚಿತ್ರರಂಗದಲ್ಲಿ ತನ್ನದೇ ಛಾಪು ಮೂಡಿಸಿ, ಇಂದು ಟಾಲಿವುಡ್​, ಸ್ಯಾಂಡಲ್​ವುಡ್​, ಮಾಲಿವುಡ್​ ಸೇರಿದಂತೆ ಇತರೆ ಚಿತ್ರರಂಗಗಳಲ್ಲಿ ಗುರುತಿಸಿಕೊಂಡಿದ್ದಾರೆ. ಇದು ನನ್ನ ಅಚ್ಚು-ಮೆಚ್ಚಿನ ಕೆಲಸ. ಓದುವುದರ ಜತೆ ಜತೆಯಲ್ಲಿ ಡಬ್ಬಿಂಗ್ ಮಾಡುವುದು ನನಗೆ ಇಷ್ಟ ಎಂದು ಆದ್ಯಾ ಹನುಮಂತು ಸಂದರ್ಶನವೊಂದರಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ.

ಬಾಲ್ಯದಿಂದಲೇ ಡಬ್ಬಿಂಗ್ ಕೆಲಸ

13ನೇ ವಯಸ್ಸಿನಲ್ಲಿ ಡಬ್ಬಿಂಗ್ ಕಲಾವಿದನಾಗಿ ಹೊರಹೊಮ್ಮಿದ ಆದ್ಯಾ, ಬಾಲ್ಯದ ದಿನಗಳಲ್ಲಿ ಧಾರವಾಹಿಗಳಲ್ಲಿ ಮಕ್ಕಳ ಪಾತ್ರಗಳಿಗೆ ಧ್ವನಿ ನೀಡಿದ್ದಾರೆ. ಸ್ಟಾರ್​ ನಟಿಯರಾದ ರುಕ್ಮಿಣಿ ವಸಂತ್​, ಸಮಂತಾ, ಆಶಾ ಭಟ್​, ಮೃಣಾಲ್ ಠಾಕೂರ್​, ಆಶಿಕಾ, ರಿತು ವರ್ಮ ಸೇರಿದಂತೆ 25ಕ್ಕೂ ಹೆಚ್ಚು ಮಹಿಳಾ ಕಲಾವಿದರಿಗೆ ಹನುಮಂತು ಕಂಠದಾನ ಮಾಡಿದ್ದಾರೆ,(ಏಜೆನ್ಸೀಸ್).