ನ್ಯೂಸ್

ಕರೊನಾ ಚಿಕಿತ್ಸೆನೂ ಕೊಟ್ಟರು, ಕೋಟಿ ಶುಲ್ಕನೂ ಬಿಟ್ಟರು, ವಿಮಾನಕ್ಕೂ ಕಳುಹಿಸಿದರು!

ದುಬೈ: ಹಲವಾರು ಖಾಸಗಿ ಆಸ್ಪತ್ರೆಗಳಲ್ಲಿ ಕರೊನಾ ಚಿಕಿತ್ಸೆ ಬಲು ದುಬಾರಿ. ಆದರೆ ಕೆಲವೊಂದು ಕಾರಣಕ್ಕೆ ಗೊತ್ತೋ ಗೊತ್ತಿಲ್ಲದೆಯೋ ಖಾಸಗಿ ಆಸ್ಪತ್ರೆಗಳ ಮೊರೆ ಹೋಗಿ ಪೇಚಿಗೆ ಸಿಲುಕುವ ಕರೊನಾ ಸೋಂಕಿತರು ಅದೆಷ್ಟೋ ಮಂದಿ.

ಅಂಥದ್ದೇ ಒಂದು ಘಟನೆ ದುಬೈನಲ್ಲಿ ನಡೆದಿದೆ. ಹೇಳಿ- ಕೇಳಿ ದುಬೈ. ಕೇಳಬೇಕೆ? ಎಲ್ಲವೂ ಡಬಲ್‌ ರೇಟ್‌. ತೆಲಂಗಾಣದ ವ್ಯಕ್ತಿಯೊಬ್ಬರು ದುಬೈನಲ್ಲಿ ಎರಡು ವರ್ಷಗಳಿಂದ ಕಟ್ಟಡ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಅವರಿಗೆ ಕರೊನಾ ಸೋಂಕು ಕಾಣಿಸಿಕೊಂಡಿತ್ತು. ಕೂಡಲೇ ಚಿಕಿತ್ಸೆಯ ಅಗತ್ಯವಿದ್ದುದರಿಂದ ಅವರು ಸ್ಥಳೀಯ ಆಸ್ಪತ್ರೆಗೆ ದಾಖಲಾಗಿಬಿಟ್ಟರು. ಸತತ 80 ದಿನಗಳ ಕಾಲ ಅವರಿಗೆ ಅಲ್ಲಿ ಚಿಕಿತ್ಸೆ ನೀಡಲಾಯಿತು. ಸಂಪೂರ್ಣ ಗುಣಮುಖರಾದ ಮೇಲೆ ಇನ್ನೇನು ಅವರು ಬಿಡುಗಡೆಯಾಗುವ ಸಮಯ.

ಸರಿ ಆಸ್ಪತ್ರೆಯ ಬಿಲ್ಲಿಂಗ್‌ ಕೌಂಟರ್‌ಗೆ ಬಂದರು. ಬಿಲ್‌ ನೋಡಿ ಅವರ ತಲೆ ತಿರುಗಿತು. ಏಕೆಂದರೆ ಆಸ್ಪತ್ರೆಯ ಬಿಲ್‌ 1.52 ಕೋಟಿ ರೂಪಾಯಿಯಾಗಿತ್ತು. ಕಟ್ಟಡ ಕಾರ್ಮಿಕನೊಬ್ಬನ ಬಳಿ ಇಷ್ಟು ಮೊತ್ತ ಇರುವುದಾದರೂ ಹೇಗೆ?

ಆದರೆ ಮುಂದೆ ಆದದ್ದೆಲ್ಲವೂ ವಿಚಿತ್ರವೇ. ಇವರ 1.52 ಕೋಟಿ ಶುಲ್ಕವೂ ಮನ್ನಾ ಆಯಿತು. ಆಸ್ಪತ್ರೆಯಿಂದ ಗೌರವಯುತವಾಗಿ ಬೀಳ್ಕೊಡುಗೆ ಕೂಡ ಕೊಡಲಾಯಿತು, ಸಾಲದು ಎಂಬುದಕ್ಕೆ ತೆಲಂಗಾಣಕ್ಕೆ ತೆರಳಲು ಉಚಿತ ವಿಮಾನ ಟಿಕೆಟ್‌ ಕೂಡ ಕೊಟ್ಟು ಕಳುಹಿಸಲಾಯಿತು!

ಅಷ್ಟಕ್ಕೂ ಆಗಿದ್ದೇನೆಂದರೆ, ಕರೊನಾ ಸೋಂಕಿತ ಕಟ್ಟಡ ಕಾರ್ಮಿಕ ಆಸ್ಪತ್ರೆಗೆ ದಾಖಲಾದ ದಿನದಿಂದಲೂ ವರ್ಕರ್ಸ್ ಪ್ರೊಟೆಕ್ಷನ್ ಸೊಸೈಟಿ ಅಧ್ಯಕ್ಷ ಗುಂಡೆಲ್ಲಿ ನರಸಿಂಹಯ್ಯ ಅವರ ಸಂಪರ್ಕದಲ್ಲಿ ಇದ್ದರು. ಮೊದಮೊದಲು ಆಸ್ಪತ್ರೆಯ ಬಿಲ್‌ ಇಷ್ಟೆಲ್ಲಾ ಆಗುತ್ತದೆ ಎಂದು ಅವರಿಗೆ ತಿಳಿದಿರಲಿಲ್ಲ.

ಆಸ್ಪತ್ರೆಯ ಬಿಲ್‌ ನೋಡಿ ಹೌಹಾರಿದ ಅವರು, ಭಾರತೀಯ ಕೌನ್ಸುಲೇಟ್ ವಾಲಂಟಿಯರ್ ಸುಮಂತ್ ರೆಡ್ಡಿ ಅವರನ್ನು ಸಂಪರ್ಕಿಸಿದರು. ಅಲ್ಲಿಂದ ಸ್ವಾಮಿನಾರಾಯಣ ಟ್ರಸ್ಟ್ ಸಂಪರ್ಕಿಸಲಾಯಿತು. ನಂತರ, ಸ್ವಯಂಸೇವಕರೂ ಸೇರಿ ಆಸ್ಪತ್ರೆಗೆ ಮನವಿ ಮಾಡಿ, ಮಾನವೀಯ ಆಧಾರದಲ್ಲಿ ಶುಲ್ಕವನ್ನು ರದ್ದು ಮಾಡುವಂತೆ ಕೇಳಿಕೊಂಡರು. ಅಚ್ಚರಿಯ ರೀತಿಯಲ್ಲಿ ಆಸ್ಪತ್ರೆ ಕೂಡ ಅದಕ್ಕೆ ಸ್ಪಂದಿಸಿದೆ.

ವಿಮಾನ ಟಿಕೆಟ್‌ ಕೊಟ್ಟು ಕಾರ್ಮಿಕನನ್ನು ಊರಿಗೆ ಕಳುಹಿಸಿದೆ! ಅದೃಷ್ಟ ಚೆನ್ನಾಗಿದ್ದರೆ ಹೀಗೆಲ್ಲ ಆಗುವುದಿದೆ. (ಏಜೆನ್ಸೀಸ್‌)