ನ್ಯೂಸ್

VIDEO: ಹಕ್ಕಿಗಳಿಗಾಗಿ ತನ್ನ ಕಾರು ಬಳಸುವುದೇ ಬಿಟ್ಟ ದುಬೈ ರಾಜಕುಮಾರ..

ದುಬೈ ರಾಜಕುಮಾರ ಶೇಖ್​ ಹಮ್ದನ್​ ಬಿನ್​ ಮೊಹಮ್ಮದ್​ ಬಿನ್​ ರಶೀದ್​ ಅಲ್​ ಮಕ್ತೋಮ್​ ಅವರು ಇದೀಗ ನೆಟ್ಟಿಗರ ಮನ ಗೆದ್ದಿದ್ದಾರೆ. ತಮ್ಮ ಕಾರಿನಲ್ಲಿ ಎರಡು ಹಕ್ಕಿಗಳು ಗೂಡು ಕಟ್ಟಿ, ಮೊಟ್ಟೆಯಿಟ್ಟಿದ್ದನ್ನು ನೋಡಿದ ಶೇಖ್​ ಹಮ್ದನ್​ ಅವರು ಆ ಐಷಾರಾಮಿ ಕಾರನ್ನು ಬಳಸುತ್ತಿಲ್ಲ. ಹಕ್ಕಿಗಳಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಕಾರನ್ನೇ ಬದಿಗಿಟ್ಟಿದ್ದಾರೆ. ಅಷ್ಟೇ ಅಲ್ಲ, ಕಾರಿನ ಸುತ್ತಲೂ ಒಂದು ಕೆಂಪು ಟೇಪ್​ ಕಟ್ಟಿದ್ದಾರೆ. ಅಲ್ಲಿಗೆ ಯಾರೂ ಹೋಗಬಾರದು. ಕಾರನ್ನು ತೆಗೆಯಬಾರದು ಎಂದು ಅವರು ಹಾಗೆ ಮಾಡಿದ್ದಾರೆ.

ಕಾರಿನಲ್ಲಿ ಕಟ್ಟಿರುವ ಗೂಡಿಗೆ ಹಕ್ಕಿಗಳು ಬರುವ, ಮೊಟ್ಟೆಯನ್ನು ಕಾಳಜಿ ಮಾಡುವ, ನಂತರ ಮೊಟ್ಟೆಯೊಡೆದು ಹೊರಬಂದ ಪುಟ್ಟ ಮರಿಗಳು, ಆ ಮರಿಗಳಿಗೆ ತಾಯಿ ಹಕ್ಕಿ ಆಹಾರ ತಿನ್ನಿಸುವ ದೃಶ್ಯಗಳನ್ನೊಳಗೊಂಡ ವಿಡಿಯೋವನ್ನು ಶೇಖ್​ ಹಮ್ದನ್​ ಅವರು ತಮ್ಮ ಇನ್ಸ್ಟಾಗ್ರಾಂನಲ್ಲಿ ಶೇರ್​ ಮಾಡಿಕೊಂಡಿದ್ದಾರೆ.

ವಿಡಿಯೋ ನೋಡಿದ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಣ್ಣಸಣ್ಣ ಸಂಗತಿಗಳು ಕೆಲವೊಮ್ಮೆ ಬಹುದೊಡ್ಡ ಸಂತೋಷ ಹೊತ್ತು ತರುತ್ತವೆ ಎಂದು ಕಾಮೆಂಟ್​ ಬರೆದಿದ್ದಾರೆ.