ಶಿವಮೊಗ್ಗ: ದಲಿತರ ಮೇಲಿನ ದೌರ್ಜನ್ಯ ತಡೆಯಲು ಜಿಲ್ಲಾಮಟ್ಟದಲ್ಲಿ ವಿಶೇಷ ಪೊಲೀಸ್ ಠಾಣೆ ತೆರೆಯಬೇಕೆಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಪದಾಧಿಕಾರಿಗಳು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಇತ್ತೀಚೆಗೆ ದಲಿತರ ಮೇಲಿನ ದೌರ್ಜನ್ಯಗಳು ದಿನೇ ದಿನೇ ಹೆಚ್ಚಾಗುತ್ತಿದೆ. ಪ್ರಕರಣದ ತನಿಖೆಗಳು ಕೂಡ ಮಂದಗತಿಯಲ್ಲಿ ನಡೆಯುತ್ತಿದೆ. ದೌರ್ಜನ್ಯಕ್ಕೆ ಒಳಗಾದವರಿಗೆ ನ್ಯಾಯ ಸಿಗುವುದು ದುರ್ಲಬವಾಗುತ್ತಿದೆ. ಅದನ್ನು ತಡೆಯಲು ಅನುಕೂಲವಾಗುವಂತೆ ಜಿಲ್ಲೆಗೊಂದು ವಿಶೇಷ ಪೊಲೀಸ್ ಠಾಣೆ ತೆರೆಯಬೇಕು ಎಂದು ಆಗ್ರಹಿಸಿದರು.
ಅಲ್ಲದೇ ಎಸ್‌ಸಿ, ಎಸ್‌ಟಿ ಯೋಜನೆಯ ಹಣವನ್ನು ಅನ್ಯ ಉದ್ದೇಶಗಳಿಗೆ ಬಳಸಲಾಗುತ್ತಿದೆ. ಇದು ಶೋಷಿತ ಸಮುದಾಯಗಳಿಗೆ ಮಾಡುತ್ತಿರುವ ಅನ್ಯಾಯವಾಗಿದೆ. ಕೂಡಲೇ ಇದನ್ನು ತಡೆಯಬೇಕು. ಇದಕ್ಕಾಗಿ ಇರುವ ಕಾಯ್ದೆ 7 ಅನ್ನು ರದ್ದು ಪಡಿಸಬೇಕು ಎಂದು ಒತ್ತಾಯಿಸಿದರು.
ಒಳಮೀಸಲಾತಿ ತಕ್ಷಣ ಜಾರಿಯಾಗಬೇಕು. ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ಜಾರಿಗೆ ಬರಬೇಕು. ಕಾಂತರಾಜ್ ವರದಿ ಜಾರಿಗೊಳಿಸಬೇಕು, ಜನಗಣತಿ ಸಂಖ್ಯೆಯನ್ನು ಬಹಿರಂಗಗೊಳಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಸಹಾಯಕ ತಹಸೀಲ್ದಾರ್ ಪ್ರದೀಪ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಜಿಲ್ಲಾ ಪ್ರಧಾನ ಸಂಚಾಲಕ ಟಿ.ಎಚ್.ಹಾಲೇಶಪ್ಪ, ಮಹಿಳಾ ಒಕ್ಕೂಟದ ರಾಜ್ಯ ಸಂಚಾಲಕಿ ಮಾಚೇನಹಳ್ಳಿ ರುದ್ರಮ್ಮ, ಪ್ರಮುಖರಾದ ಎಂ.ಮಂಜುನಾಥ್, ಎಂ.ಆರ್.ಶಿವಕುಮಾರ್, ಗೋವಿಂದ, ಶೇಷಪ್ಪ, ಆನಂದ್, ಜಗ್ಗು, ರಂಗಸ್ವಾಮಿ, ಸೂಗೂರು ಪರಮೇಶ್, ಲತಾ ಬಿದ್ರೆ ಸೇರಿ ಹಲವರು ಪ್ರತಿಭಟನೆಯಲ್ಲಿದ್ದರು.